
ಬನಹಟ್ಟಿಯ ಎಸ್‌ಟಿಸಿ ಕಾಲೇಜು ಹಳೇ ವಿದ್ಯಾರ್ಥಿಗಳ ಸಂಘದ ಸಮಾವೇಶದಲ್ಲಿ ಸಾಧಕರಿಗೆ ‘ತಮ್ಮಣ್ಣಪ್ಪ ಚಿಕ್ಕೋಡಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು
ರಬಕವಿ ಬನಹಟ್ಟಿ: ಕರ್ನಾಟಕದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಮಠಾಧೀಶರ ಕೊಡುಗೆ ಶ್ರೇಷ್ಠವಾದುದು. ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುವಂತಹ ಶಿಕ್ಷಣ ನೀಡಬೇಕಾಗಿದೆ ಎಂದು ಮಾಜಿ ಸಚಿವ ಮುರಗೇಶ ನಿರಾಣಿ ತಿಳಿಸಿದರು.
ಇಲ್ಲಿನ ಎಸ್‌ಟಿಸಿ ಕಾಲೇಜು ಸಭಾಭವನದಲ್ಲಿ ಭಾನುವಾರ ನಡೆದ ಹಳೇ ವಿದ್ಯಾರ್ಥಿಗಳ ಸಮಾವೇಶ ಮತ್ತು ಸಾಧಕರಿಗೆ ‘ತಮ್ಮಣ್ಣಪ್ಪ ಚಿಕ್ಕೋಡಿ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾಜಿ ಸಚಿವೆ ಉಮಾಶ್ರೀ ಪ್ರಶಸ್ತಿ ಪ್ರದಾನ ಮಾಡಿ, ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡುವ ನಿಟ್ಟಿನಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿಯೂ ಬದಲಾವಣೆಗಳಾಗಬೇಕು. ಸಾಧನೆ ಯಾವಾಗಲೂ ಕಷ್ಟಕರವಾಗಿರುತ್ತದೆ ಮತ್ತು ತ್ಯಾಗದಿಂದ ಮಾತ್ರ ಸಾಧನೆ ಸಾಧ್ಯ ಎಂದರು.
ಪ್ರಶಸ್ತಿ ಪುರಸ್ಕೃತರ ಪರವಾಗಿ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಮಾತನಾಡಿ, ವಚನ ಪಿತಾಮಹ ಡಾ.ಹಳಕಟ್ಟಿಯವರ ಕುರಿತು ಸಾಕ್ಷ್ಯಚಿತ್ರ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ತಮ್ಮಣ್ಣಪ್ಪ ಚಿಕ್ಕೋಡಿಯವರ ಕುರಿತು ಸಾಕ್ಷ್ಯಚಿತ್ರವನ್ನು ಮಾಡಲಾಗುವುದು. ಹಳಕಟ್ಟಿ ಮತ್ತು ಚಿಕ್ಕೋಡಿಯಂತರ ಪೂಜ್ಯರನ್ನು ನಾವು ನಿತ್ಯ ಸ್ಮರಿಸಬೇಕು ಎಂದು ತಿಳಿಸಿದರು.
ಮಕ್ಕಳ ಸಾಹಿತಿ ಜಯವಂತ ಕಾಡದೇವರ, ನಿವೃತ್ತ ಪ್ರಾಚಾರ್ಯ ಎಸ್.ಎಸ್. ಹೂಲಿ, ನಿವೃತ್ತ ನ್ಯಾಯಾಧೀಶ ಜಿ.ಎಂ.ಕುಂಬಾರ, ನಿವೃತ್ತ ಕುಲಪತಿ ಬಿ.ಎಂ.ಪಾಟೀಲ, ಉದ್ದಿಮೆದಾರ ಗಣಪತಿರಾವ ಹಜಾರೆ, ಅನಿಲ ಬಿದರಿ, ಡಾ.ಎಸ್.ಎಸ್.ನಾಯಿಕವಾಡಿ, ಪ್ರಿಯಃವದಾ ಹುಲಗಬಾಳಿ, ಸತ್ಯಪ್ಪ ಬಂಗಿ ತಮ್ಮಣ್ಣಪ್ಪ ಚಿಕ್ಕೋಡಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಾಚಾರ್ಯ ಜಿ.ಆರ್.ಜುನ್ನಾಯ್ಕರ್, ಮಂಜುನಾಥ ಬೆನ್ನೂರ, ಚೇತನ ಡಾಗಾ, ಮಹಾದೇವ ಗುಟ್ಲಿ, ವಿಜಯಲಕ್ಷ್ಮಿ ಮಾಚಕನೂರ ಮಾತನಾಡಿದರು.
ಸಂಘದ ಅಧ್ಯಕ್ಷ ಬ್ರಿಜ್ಮೋಹನ ಚಿಂಡಕ, ಜೆಎಸ್ಎಸ್ ಸಂಘದ ಸುಭಾಸ ಭದ್ರನವರ, ಬಸವರಾಜ ಭದ್ರನವರ, ಬಸವಂತ ಜಾಡಗೌಡ, ರಾಜಶೇಖರ ಸೋರಗಾವಿ, ಗೀತಾ ಸಜ್ಜನ, ಶ್ವೇತಾ ಮಠದ, ಶೋಭಾ ಶೀಲವಂತ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.