ADVERTISEMENT

ಜಮಖಂಡಿ | ಕಾಮಗಾರಿ ಮುಗಿದು ಎರಡು ವರ್ಷ: ಉದ್ಘಾಟನೆಯಾಗದ ವಸತಿಶಾಲೆ

ಆರ್.ಎಸ್.ಹೊನಗೌಡ
Published 6 ಮಾರ್ಚ್ 2025, 5:50 IST
Last Updated 6 ಮಾರ್ಚ್ 2025, 5:50 IST
ಜಮಖಂಡಿ ತಾಲ್ಲೂಕಿನ ಕೊಣ್ಣೂರ ಗ್ರಾಮದ ಮಡ್ಡಿಪ್ಲಾಟ್‌ನಲ್ಲಿ ನಿರ್ಮಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ
ಜಮಖಂಡಿ ತಾಲ್ಲೂಕಿನ ಕೊಣ್ಣೂರ ಗ್ರಾಮದ ಮಡ್ಡಿಪ್ಲಾಟ್‌ನಲ್ಲಿ ನಿರ್ಮಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ    

ಜಮಖಂಡಿ: ತಾಲ್ಲೂಕಿನ ಕೊಣ್ಣೂರ ಗ್ರಾಮದ ಮಡ್ಡಿಪ್ಲಾಟ್‌ನಲ್ಲಿ ಬೆಂಗಳೂರಿನ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ನಿರ್ಮಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ನೂತನ ಕಟ್ಟಡ ಕಾಮಗಾರಿ ಮುಗಿದು ಎರಡು ವರ್ಷ ಕಳೆದರೂ ಇನ್ನೂ ಉದ್ಘಾಟನೆ ಯೋಗ ಕೂಡಿ ಬಂದಿಲ್ಲ.

2020ರಲ್ಲಿ ಕಟ್ಟಡದ ಅಡಿಗಲ್ಲು ಸಮಾರಂಭ ಮಾಡಲಾಗಿತ್ತು. 2023ರಲ್ಲಿ ಕಟ್ಟಡ ಸಂಪೂರ್ಣವಾಗಿ ನಿರ್ಮಾಣ ಕಾರ್ಯ ಮುಕ್ತಾಯವಾಗಿದೆ. 2023ರಲ್ಲಿ ಉದ್ಘಾಟನೆ ಮಾಡಲು ಆಮಂತ್ರಣ ಪತ್ರಿಕೆ ತಯಾರಿ ಮಾಡಿದ್ದರು. ಆದರೆ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಕಾರಣಕ್ಕೆ ಉದ್ಘಾಟನೆಯನ್ನು ರದ್ದು ಮಾಡಿದ್ದರು. ಚುನಾವಣೆ ಮುಗಿದು ಎರಡು ವರ್ಷ ಕಳೆದರೂ ಇದುವರೆಗೂ ಮಕ್ಕಳ ಪ್ರವೇಶಕ್ಕೆ ಮಾತ್ರ ಅವಕಾಶ ಸಿಕ್ಕಿಲ್ಲ.

₹21 ಕೋಟಿ ವೆಚ್ಚದಲ್ಲಿ ಪ್ರತ್ಯೆಕ ವಸತಿ ನಿಲಯಗಳು, ಶಿಕ್ಷಕರು ಹಾಗೂ ವಾರ್ಡನ್‌ಗಳಿಗೆ ವಸತಿ ಮನೆಗಳು, ಪ್ರತ್ಯೆಕ ಅಡುಗೆ ಕೊಠಡಿ, ಶಾಲಾ ತರಗತಿ ನಡೆಸಲು ಕೊಠಡಿಗಳು ಸೇರಿದಂತೆ ಅಂದಾಜು 8 ಎಕರೆ ಪ್ರದೇಶದಲ್ಲಿ ಸುಸಜ್ಜಿತವಾದ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ಕಟ್ಟಡ ನಿರ್ಮಾಣವಾಗಿದೆ.

ADVERTISEMENT

6ನೇ ತರಗತಿಯಿಂದ 10ನೇ ತರಗತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 250ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ  ಮಾಡುತ್ತಿದ್ದಾರೆ. ಸುಸಜ್ಜಿತ ಕಟ್ಟಡದ ಉದ್ಘಾಟನೆ ಮಾಡದ ಕಾರಣ ಜಮಖಂಡಿ ನಗರದಲ್ಲಿ ಬಾಡಿಗೆ ಕಟ್ಟಡದಲ್ಲಿ ವಸತಿ ಶಾಲೆಯನ್ನು ನಡೆಸಲಾಗುತ್ತಿದೆ.

ಆದರೆ ಬಾಡಿಗೆ ಕಟ್ಟಡದಲ್ಲಿ ಸರಿಯಾದ ವ್ಯವಸ್ಥೆ ಇಲ್ಲ. ಎಲ್ಲ ತರಗತಿ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಸರಿಯಾದ ಕೊಠಡಿಗಳಿಲ್ಲ. ಮೇಲೆ ಪತ್ರಾಸ್ ಸೀಟ್ ಹಾಕಿರುವ ಕೊಠಡಿಯಲ್ಲೆ ವಿದ್ಯಾಭ್ಯಾಸ ಮಾಡುವಂತಾಗಿದೆ. ಅಗತ್ಯ ಸೌಲಭ್ಯಗಳು ಸಿಗದೆ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಚಿಸದ ಶಿಕ್ಷಕರೊಬ್ಬರು ಹೇಳಿದರು.

ಸಂಪೂರ್ಣ ಕಾಮಗಾರಿ ಮುಗಿದು ಎರಡು ವರ್ಷ ಕಳೆದಿದ್ದರಿಂದ ಸದ್ಯ ಶಾಲಾ ಆವರಣದಲ್ಲಿ ಕಸಕಡ್ಡಿಗಳು ಬೆಳೆದಿವೆ. ಸ್ಥಳೀಯರು ಶಾಲಾ ಆವರಣದಲ್ಲಿ ಆಡು, ದನಗಳನ್ನು ಮೇಯಲು ಬಿಡುತ್ತಿರುವುದರಿಂದ ಶಾಲೆಯ ರಸ್ತೆಗಳು, ಆವರಣ ಕಸದಿಂದ ತುಂಬಿ ತುಳುಕುತ್ತಿದೆ.

‘ಸರ್ಕಾರ ಹಲವು ಸೌಕರ್ಯಗಳನ್ನು ಕಲ್ಪಿಸಿದರು ಅವುಗಳನ್ನು ಅರ್ಹರಿಗೆ ತಲುಪಿಸುವ ಕೆಲಸ ಆಡಳಿತ ವರ್ಗದಿಂದ ಆಗುತ್ತಿಲ್ಲ. ಅಧಿಕಾರಿಗಳು ಮಕ್ಕಳ ಕಲಿಕೆಯ ವಿಷಯದಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಮೇಲಾಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ನಿರ್ಮಾಣವಾಗಿರುವ ಶಾಲಾ ಕಟ್ಟಡದ ಉದ್ಘಾಟನೆಯಾಗುತ್ತಿಲ್ಲ. ಕೂಡಲೇ ಉದ್ಘಾಟನೆ ಮಾಡಿ ಬಡ ವಿದ್ಯಾರ್ಥಿಗಳಿಗೆ ಅನೂಕೂಲ ಮಾಡಬೇಕು’ ಎಂದು ಪಾಲಕ ಅವಿನಾಶ ಹೇಳಿದರು.

ಜಮಖಂಡಿ ತಾಲ್ಲೂಕಿನ ಕೊಣ್ಣೂರ ಗ್ರಾಮದ ಮಡ್ಡಿಪ್ಲಾಟ್‌ನಲ್ಲಿ ನಿರ್ಮಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ನಿಲಯ
ವಸತಿಶಾಲಾ ಕಟ್ಟಡ ಮುಗಿದಿದ್ದರೂ ನಮಗೆ ಹಸ್ತಾಂತರವಾಗಿಲ್ಲ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಎರಡು ತಿಂಗಳಲ್ಲಿ ಉದ್ಘಾಟನೆ ಮಾಡುವುದಾಗಿ ತಿಳಿಸಿದ್ದಾರೆ
ಶಶಿಧರ ಕಡೆಬಾಗಿಲು ಮುಖ್ಯಗುರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.