ಗುಳೇದಗುಡ್ಡ: ಪಟ್ಟಣದ ಗುಲಾಬ ಟಾಕೀಜ್‍ನಿಂದ ಕಮತಗಿ ರಸ್ತೆಯ ಹರದೊಳ್ಳಿ ಹನಮಪ್ಪನ ಗುಡಿಯವರೆಗೆ ಮತ್ತು ಭಂಡಾರಿ ಕಾಲೇಜು ಸರ್ಕಲ್ ನಿಂದ ಬಾಗಲಕೋಟೆ ಮಾರ್ಗದ ಅರ್ಧ ಕೀ.ಮೀದಷ್ಟು ಸಿಸಿ ರಸ್ತೆ ಕಾಮಗಾರಿ ಲೋಕೋಪಯೋಗಿ ಇಲಾಖೆಯಿಂದ 3 ತಿಂಗಳುಗಳಿಂದ ನಡೆಯುತ್ತಿದೆ. ಆಮೆಗತಿಯ ಕಾಮಗಾರಿಯಿಂದಾಗಿ ಸಾರ್ವಜನಿಕರು ಬೇಸತ್ತಿದ್ದಾರೆ.
ಹಗಲು ಹೊತ್ತಿನಲ್ಲಿ ಜನ, ವಾಹನಗಳ ಓಡಾಟದ ಸಮಯದಲ್ಲೇ ಕಾಮಗಾರಿ ಆರಂಭಿಸುತ್ತಾರೆ. ಕಮತಗಿ ಮಾರ್ಗ ಪೂರ್ಣಗೊಳಿಸಿ ನಂತರ ಬಾಗಲಕೋಟೆ ಮಾರ್ಗದ ರಸ್ತೆ ಆರಂಭಿಸಬೇಕಿತ್ತು ಆದರೆ ಅಲ್ಲಿಯೂ ಕಾಮಗಾರಿ ಅರ್ಧವಾಗಿದೆ. ಇಲ್ಲಿ ಬಾಗಲಕೋಟೆ ಮಾರ್ಗದಲ್ಲಿಯೂ ಅಪೂರ್ಣಗೊಂಡಿದೆ. ಇದು ಸಾರ್ವಜನಿಕರ ಓಡಾಟಕ್ಕೆ ಕಿರಿಕಿರಿಯಾಗಿದೆ. ಕೆಲವೊಮ್ಮೆ ವಾರವಾದರೂ ಕೆಲಸ ಸ್ಥಗಿತಗೊಂಡಿರುತ್ತದೆ.
ಪಟ್ಟಣದ ಜನರು ಕೂಲಿ ಕೆಲಸಕ್ಕೆ ಶಿರೂರ ಮಾರ್ಗವಾಗಿ ಇತರ ಊರುಗಳಿಗೆ ಕೆಲಸಕ್ಕೆ ಹೋಗುತ್ತಿದ್ದಾರೆ. ಈ ಮಾರ್ಗದಲ್ಲಿ ತಿಂಗಳಿಂದ ಬಸ್ ಸಂಚಾರ ಬಂದ್ ಮಾಡಿದ್ದಾರೆ. ಯಾರಿಗೆ ಕೇಳಿದರೂ ಸರಿಯಾದ ಉತ್ತರ ಬರುತ್ತಿಲ್ಲ ಎಂದು ದೂರುತ್ತಾರೆ ಸಾರ್ವಜನಿಕರು.
ಅವೈಜ್ಞಾನಿಕ ರಸ್ತೆ ನಿರ್ಮಾಣ: ರಸ್ತೆ ವಿಸ್ತರಣೆ ಒಂದೇ ತೆರನಾಗಿಲ್ಲ. ರಸ್ತೆಯ ಮೇಲೆ ವಿದ್ಯುತ್ ಕಂಬಗಳಿದ್ದರೆ ಅವುಗಳನ್ನು ಸ್ಥಳಾಂತರಿಸುತ್ತಿಲ್ಲ. ರಸ್ತೆ ಎತ್ತರ ಹೆಚ್ಚಾಗಿದೆ. ಮಳೆಗಾಲದಲ್ಲಿ ಈ ರಸ್ತೆ ಮೇಲೆ ಹರಿಯುವ ರಭಸದ ನೀರು ಮನೆ, ಅಂಗಡಿಗಳ ಒಳಗೆ ಸೇರುವ ಸಂಭವ ಹೆಚ್ಚಿದೆ.
ವಿದ್ಯಾರ್ಥಿಗಳಿಗೆ ತೊಂದರೆ: ಶಿರೂರ ಮಾರ್ಗದ ಬಸ್‌ಗಳು ಕಳೆದ ಒಂದು ತಿಂಗಳಿಂದ ಬಂದ್ ಆದ ಕಾರಣ ಮನ್ನಿಕಟ್ಟಿ, ಬೂದಿನಗಡ, ಶಿರೂರ, ನಿಡಗುಂದಿ ಮಾರ್ಗದಿಂದ ಬರುವ ಬಹಳಷ್ಟು ವಿದ್ಯಾರ್ಥಿಗಳಿಗೆ ಕಾಲೇಜಿಗೆ ಹೋಗಿ ಬರಲು ತೊಂದರೆಯಾಗಿದೆ.
ಆಟೊ ಓಡಾಟ ಸ್ಥಗಿತ: ಭಂಡಾರಿ ಕಾಲೇಜು ವೃತ್ತದಲ್ಲಿ ರಸ್ತೆ ಕಾಮಗಾರಿಯ ಸಿಮೆಂಟ್, ಮರಳು, ಖಡಿ ಸಂಗ್ರಹ ಮಾಡಿ ರಸ್ತೆ ಸಂಚಾರ ಬಂದ್ ಮಾಡಿ 2 ತಿಂಗಳು ಕಳೆದರೂ ಕಾಮಗಾರಿ ಮುಗಿಯುತ್ತಿಲ್ಲ. ಅದೇ ಸ್ಥಳದಲ್ಲಿ ಆಟೊ ಸ್ಟ್ಯಾಂಡ್ ಇದ್ದ ಕಾರಣ ಆಟೊಗಳಿಗೆ ನಿಲ್ಲಿಸಲು ಸ್ಥಳವಿಲ್ಲದಂತಾಗಿದೆ. ಹೀಗಾಗಿ ಕಳೆದ 2 ತಿಂಗಳಿಂದ ಉದ್ಯೋಗವಿಲ್ಲದೇ ಆಟೊ ಚಾಲಕರಿಗೆ ಬದುಕಿನ ನಿರ್ವಹಣೆ ದುಸ್ತರವಾಗಿದೆ.
ಬೀದಿ ವ್ಯಾಪಾರ ಸ್ಥಗಿತ : ಭಂಡಾರಿ ಕಾಲೇಜ್ ಸರ್ಕಲ್ ಬಂದ್ ಆಗಿದ್ದರಿಂದ ಅದೇ ಸ್ಥಳದಲ್ಲಿದ್ದ 20 ಕ್ಕೂ ಹೆಚ್ಚು ಹಣ್ಣು– ತರಕಾರಿ ಹೀಗೆ ವಿವಿಧ ಬೀದಿ ವ್ಯಾಪಾರ ಕೂಡ ನಿಂತು ಹೋಗಿ ವ್ಯಾಪಾರವಿಲ್ಲದೇ ಬಡ ವ್ಯಾಪಾರಿಗಳಿಗೆ ತೊಂದರೆಯಾಗಿದೆ.
ರಸ್ತೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು ಆದಷ್ಟು ಬೇಗನೇ ಕಾಮಗಾರಿ ಮುಗಿಸಬೇಕು. ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು
-ಪ್ರಶಾಂತ ಜವಳಿ ಪುರಸಭೆ ಸದಸ್ಯ ಗುಳೇದಗುಡ್ಡ
ರಸ್ತೆ ಕಾಮಗಾರಿ ಬೇಗನೆ ಮುಗಿಯದ್ದರಿಂದ ವಾಹನ ಸವಾರರಿಗೆ ವ್ಯಾಪಾರಿಗಳಿಗೆ ತೀವ್ರ ತೊಂದರೆಯಾಗಿದೆ. ಕಾಮಗಾರಿ ನಿಗದಿತ ಸಮಯದಲ್ಲಿ ಮುಗಿಸಬೇಕು
-ರವಿ ಅಂಗಡಿಕ ರವೇ ಅಧ್ಯಕ್ಷ ಗುಳೇದಗುಡ್ಡ
ಕಾಮಗಾರಿ ಪ್ರಕ್ರಿಯೆ ಆರಂಭವಾಗಿದ್ದು ಆದಷ್ಟು ಬೇಗನೇ ಮುಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು
- ಎ.ಕೆ. ಮಕಾನದಾರ ಕಿರಿಯ ಎಂಜಿನಿಯರ್ ಲೋಕೋಪಯೋಗಿ ಇಲಾಖೆ ಬಾದಾಮಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.