ADVERTISEMENT

ರೊಟ್ಟಿ ಮಾಡುವ ಸ್ಪರ್ಧೆ: ಶಕುಂತಲಾ ಯಡಹಳ್ಳಿ ಪ್ರಥಮ

​ಪ್ರಜಾವಾಣಿ ವಾರ್ತೆ
Published 20 ಜನವರಿ 2025, 13:55 IST
Last Updated 20 ಜನವರಿ 2025, 13:55 IST
ಬೆನಕಟ್ಟಿಯಲ್ಲಿ ಜರುಗಿದ ರೊಟ್ಟಿ ಮಾಡುವ ಹಾಗೂ ಸಿರಿಧಾನ್ಯಗಳಲ್ಲಿ ಸಿಹಿ ಪದಾರ್ಥ ತಯಾರಿಸುವ ಸ್ಪರ್ಧೆಗಳಲ್ಲಿ ವಿಜೇತರಾದ ಮಹಿಳೆಯರು
ಬೆನಕಟ್ಟಿಯಲ್ಲಿ ಜರುಗಿದ ರೊಟ್ಟಿ ಮಾಡುವ ಹಾಗೂ ಸಿರಿಧಾನ್ಯಗಳಲ್ಲಿ ಸಿಹಿ ಪದಾರ್ಥ ತಯಾರಿಸುವ ಸ್ಪರ್ಧೆಗಳಲ್ಲಿ ವಿಜೇತರಾದ ಮಹಿಳೆಯರು   

ರಾಂಪುರ: ಸಮೀಪದ ಬೆನಕಟ್ಟಿಯಲ್ಲಿ ಮಹಾಯೋಗಿ ವೇಮನರ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಮಹಿಳೆಯರಿಗಾಗಿ ನಡೆದ ರೊಟ್ಟಿ ತಟ್ಟುವ (ಮಾಡುವ) ಸ್ಪರ್ಧೆಯಲ್ಲಿ ಸ್ಥಳೀಯರಾದ ಶಕುಂತಲಾ ರಾಘವೇಂದ್ರ ಯಡಹಳ್ಳಿ 30 ನಿಮಿಷದ ಅವಧಿಯಲ್ಲಿ ಅತ್ಯುತ್ತಮವಾಗಿ 26 ರೊಟ್ಟಿ ಮಾಡಿ ಪ್ರಥಮ ಬಹುಮಾನ ಪಡೆದರು.

ಗ್ರಾಮದ ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಈ ಸ್ಪರ್ಧೆಯಲ್ಲಿ 30 ಜನ ಮಹಿಳೆಯರು ಭಾಗವಹಿಸಿದ್ದರು. ನಿಗದಿತ 30 ನಿಮಿಷದ ಅವಧಿಯಲ್ಲಿ 25 ರೊಟ್ಟಿ ಮಾಡಿದ ವೆಂಕಮ್ಮ ಯಲ್ಲಪ್ಪ ಯಡಹಳ್ಳಿ ದ್ವಿತೀಯ, 27 ರೊಟ್ಟಿ ಮಾಡಿದ ಲಕ್ಷ್ಮೀ ರಾಜು ಗೆಣ್ಣೂರ ತೃತೀಯ ಹಾಗೂ 29 ರೊಟ್ಟಿ ಮಾಡಿದ ಭಾರತಿ ನೀಲಪ್ಪ ಮಲಘಾಣ ಚತುರ್ಥ ಬಹುಮಾನ ಪಡೆದರು. ಈ ಸ್ಪರ್ಧೆಯಲ್ಲಿ ನಿರ್ಣಾಯಕರು ರೊಟ್ಟಿಯ ಅಗಲ ಹಾಗೂ ಗುಣಮಟ್ಟವನ್ನು ಪರಿಶೀಲಿಸಿ ತೀರ್ಪನ್ನು ನೀಡಿದರು.

ಇದೇ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ಸಿರಿಧಾನ್ಯಗಳಿಂದ ತಯಾರಿಸಲಾದ ಸಿಹಿ ಹಾಗೂ ಖಾರದ ಪದಾರ್ಥಗಳ ಸ್ಪರ್ಧೆಯಲ್ಲಿ ಅಕ್ಕಮಹಾದೇವಿ ಚಂದ್ರಶೇಖರ ಬಾಳಕ್ಕನವರ ಪ್ರಥಮ ಸ್ಥಾನ, ಮಹಾದೇವಿ ತಿಪ್ಪಣ್ಣ ಜೀರಗಾಳ ಮತ್ತು ಪಲ್ಲವಿ ವಿನೋದ ಬಾಳಕ್ಕನವರ ದ್ವಿತೀಯ, ಜ್ಯೋತಿ ಸಂತೋಷ ಚಿತ್ತರಗಿ ತೃತೀಯ ಮತ್ತು ಸುಮನ್ ಚೇತನ ಅರಿಷಿಣಗೋಡಿ ಚತುರ್ಥ ಸ್ಥಾನ ಪಡೆದರು.

ADVERTISEMENT

ಎರಡೂ ಸ್ಪರ್ಧೆಗಳಿಗೆ ನಿರ್ಣಾಯಕರಾಗಿ ಬಾಗಲಕೋಟೆಯ ಅನುಸೂಯಾ ಪಾಟೀಲ, ಪ್ರೇಮಾ ನಾರಪ್ಪನವರ, ಲೋಕೇಶ್ವರಿ ಪರಡ್ಡಿ ಹಾಗೂ ಕಾವೇರಿ ಪರಡ್ಡಿ ಕಾರ್ಯನಿರ್ವಹಿಸಿದರು. ಮಹಿಳಾ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.