ಗುಳೇದಗುಡ್ಡ: ಗ್ರಾಮಗಳು ಅಭಿವೃದ್ಧಿಯಾದರೆ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ. ಗ್ರಾಮಗಳ ಅಭಿವೃದ್ಧಿಗೆ ಬದ್ದನಾಗಿದ್ದೇನೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಅವರು ತಾಲ್ಲೂಕಿನ ಹಿರೇಬೂದಿಹಾಳ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಾದ 2023-24ನೇ ಸಾಲಿನ ವಿವೇಕ ಯೋಜನೆಯಡಿ ₹29 ಲಕ್ಷದಲ್ಲಿ ಎರಡು ಕೊಠಡಿಗಳ ನಿರ್ಮಾಣ, ₹10 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ, ಸರ್ಕಾರಿ ಪ್ರೌಢಶಾಲಾ ಒಂದು ಕೊಠಡಿಗೆ ₹14 ಲಕ್ಷ ವೆಚ್ಚದಲ್ಲಿ ಕಟ್ಟಲು ಮತ್ತು ಮೂರು ಸಮುದಾಯ ಭವನಗಳಿಗೆ ತಲಾ ₹5 ಲಕ್ಷ ನೀಡಿದ್ದು ಅದರ ಭೂಮಿಪೂಜೆ ಸೋಮವಾರ ನೆರವೇರಿಸಿ ಮಾತನಾಡಿದರು.
ನಂತರ ಗ್ರಾಮಸ್ಥರು ಗರಡಿ ಮನೆ ಮತ್ತು ಗ್ರಂಥಾಲಯ ಕೇಳಿದಾಗ ಅಲ್ಲಿಯೇ ಇದ್ದ ಪಿಡಿಓಗೆ ಗರಡಿ ಮನೆಯನ್ನು ನರೇಗಾ ಯೋಜನೆಯಲ್ಲಿ ಕಟ್ಟಲು ಸೂಚಿಸಿದರು.
ಮುಖಂಡ ಡಿ.ಆರ್.ಪೂಜಾರಿ ಮಾತನಾಡಿ, ಮತಕ್ಷೇತ್ರದಲ್ಲಿ ಎಲ್ಲಾ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ನಮ್ಮ ಗ್ರಾಮದಲ್ಲಿಯೂ ಹಲವು ಕಾಮಗಾರಿಗೆ ಚಾಲನೆ ನೀಡಿರುವುದು ಉತ್ತಮ ಕಾರ್ಯವಾಗಿದೆ ಎಂದು ಹೇಳಿದರು.
ಮುಖಂಡ ಪ್ರಕಾಶ ಮೇಟಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೃಷ್ಣಾ ಓಗೆನ್ನವರ ಮಾತನಾಡಿದರು. ರಂಗನಾಥ ಮೊಕಾಸಿ, ಕನಕಪ್ಪ ಬಂದಕೇರಿ, ಶೇಖಪ್ಪ ಉಡಚಿಂಚಿ, ಬಸಣ್ಣ ಹೂಲಗೇರಿ, ಸುಭಾಷ ಬಡಿಗೇರ, ತುಕ್ಕಪ್ಪ ವಡ್ಡರ, ಶ್ರೀಕಾಂತ ಮಾಸ್ತರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.