
ರಬಕವಿ ಬನಹಟ್ಟಿ: ವಿಬಿ ಜಿ ರಾಮ ಜಿ ಯೋಜನೆಯಿಂದ ದೇಶದ ಗ್ರಾಮೀಣ ಭಾಗದ ಬಡ ಜನರಿಗೆ ಮತ್ತು ಕಾರ್ಮಿಕರಿಗೆ ಅನುಕೂಲವಾಗಲಿದೆ. ಈ ಯೋಜನೆ ಕುರಿತು ಕಾಂಗ್ರೆಸ್ ಸರ್ಕಾರ ಅಪ ಪ್ರಚಾರ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.
ಇಲ್ಲಿನ ಈಶ್ವರಲಿಂಗ ಮೈದಾನದಲ್ಲಿ ಗುರುವಾರ ವಿಬಿ ಜಿ ರಾ್ ಜಿ ಕುರಿತು ಹಮ್ಮಿಕೊಂಡ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಶೇ 40 ಲಂಚ ಪಡೆಯುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಯೋಜನೆಯಲ್ಲಿ ತನ್ನ ಪಾಲಿನ ಶೇ 40 ರಷ್ಟು ಹಣವನ್ನು ನೀಡದೇ ಯೋಜನೆ ಕುರಿತು ಸುಳ್ಳು ಅಪ ಪ್ರಚಾರ ಮಾಡುತ್ತಿದೆ’ ಎಂದು ಕಿಡಿ ಕಾರಿದರು.
‘ಈ ಯೋಜನೆಯಿಂದ ಗ್ರಾಮೀಣ ಜನರಿಗೆ ವರ್ಷಕ್ಕೆ 100 ದಿನಗಳ ಬದಲು 125 ದಿನಗಳ ಕಾಲ ಕೆಲಸ ಲಭಿಸುತ್ತದೆ. ₹ 375 ಕೂಲಿ ದೊರೆಯಲಿದೆ. ಈ ಯೋಜನೆಯಿಂದಾಗಿ ಗ್ರಾಮೀಣ ಭಾಗದ ಜನರು ವರ್ಷಕ್ಕೆ ₹ 45 ಸಾವಿರಕ್ಕಿಂತ ಹೆಚ್ಚಿನ ಹಣ ಪಡೆಯಲಿದ್ದಾರೆ. ಕೇಂದ್ರ ಸರ್ಕಾರ ಈ ಯೋಜನೆಗೆ ಅಂದಾಜು ₹ 85 ಸಾವಿರ ಕೋಟಿ ಹಣ ವಿನಿಯೋಗ ಮಾಡಲಿದೆ. ಬಿಜೆಪಿ ಕಾರ್ಯಕರ್ತರು ಪ್ರತಿ ಗ್ರಾಮದಲ್ಲಿ 2 ಕಿ.ಮೀ ಪಾದಯಾತ್ರೆ ಕೈಗೊಂಡು ಗ್ರಾಮೀಣ ಭಾಗದಲ್ಲಿ ಈ ಯೋಜನೆ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ಸೂಚಿಸಿದರು.
‘ರಾಜ್ಯದ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಬೇಕಾದ ಸಮರ್ಪಕ ಔಷಧ ಪೂರೈಸುವಲ್ಲಿ ರಾಜ್ಯ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ’ ಎಂದು ಬಿ.ವೈ. ವಿಜಯೇಂದ್ರ ‘ಪ್ರಜಾವಾಣಿ’ ಪತ್ರಿಕೆಯ ವರದಿಯನ್ನು ಉಲ್ಲೇಖಿಸಿ ಮಾತನಾಡಿದರು. ‘ಸರ್ಕಾರಿ ಆಸ್ಪತ್ರೆಗಳಲ್ಲಿಯ ಕೇಂದ್ರ ಸರ್ಕಾರದ ಜನೌಷಧ ಕೇಂದ್ರಗಳನ್ನು ನಿಲ್ಲಿಸಿರುವುದು ಕೂಡ ಖಂಡನೀಯ’ ಎಂದರು.
ಶಾಸಕ ಸಿದ್ದು ಸವದಿ ಮಾತನಾಡಿ, ‘ಕಾಂಗ್ರೆಸ್ ಪಕ್ಷ ದೇಶದಲ್ಲಿ ಅಂದಾಜು 600 ಸಂಸ್ಥೆಗಳಿಗೆ ನಕಲಿ ಗಾಂಧಿಗಳ ಹೆಸರನ್ನು ಇಟ್ಟಿದೆ. ಮಹಾತ್ಮಾ ಗಾಂಧೀಜಿಯವರ ತತ್ವಗಳನ್ನು ಪಾಲಿಸುತ್ತೇನೆ ಎಂದು ಹೇಳುವ ರಾಜ್ಯ ಸರ್ಕಾರ ಗಾಂಧೀಜಿಯವರ ತತ್ವಗಳನ್ನು ಧಿಕ್ಕರಿಸಿ ರಾಜ್ಯದಲ್ಲಿ 2,500 ಸಾವಿರ ಬಾರ್ ಗಳಿಗೆ ಪರವಾನಗಿ ನೀಡಿರುವುದು ಖಂಡನೀಯ’ ಎಂದರು.
ವೇದಿಕೆಯ ಮೇಲೆ ರಾಜ್ಯ ಘಟಕದ ಕಾರ್ಯದರ್ಶಿ ಶರಣು ತಳ್ಳಿಕೇರಿ, ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ, ನಗರ ಘಟಕದ ಅಧ್ಯಕ್ಷ ಶ್ರೀಶೈಲ ಬೀಳಗಿ, ಗ್ರಾಮೀಣ ಘಟಕದ ಅಧ್ಯಕ್ಷ ಸುರೇಶ ಅಕ್ಕಿವಾಟ, ಧರೆಪ್ಪ ಉಳ್ಳಾಗಡ್ಡಿ. ಸಂಜಯ ತೆಗ್ಗಿ, ಆನಂದ ಕಂಪು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.