ADVERTISEMENT

ಶಿರೂರ–ಗದ್ದನಕೇರಿ ನಾಲ್ಕು ಪಥ ನಿರ್ಮಾಣ: ಮಂದಗತಿಯಲ್ಲಿ ಹೆದ್ದಾರಿ ಕಾಮಗಾರಿ

ಬಸವರಾಜ ಹವಾಲ್ದಾರ
Published 31 ಡಿಸೆಂಬರ್ 2024, 6:51 IST
Last Updated 31 ಡಿಸೆಂಬರ್ 2024, 6:51 IST
ಬಾಗಲಕೋಟೆ–ಶಿರೂರ ಮಾರ್ಗದಲ್ಲಿ ನಿರ್ಮಿಸುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯ ದೃಶ್ಯ
ಬಾಗಲಕೋಟೆ–ಶಿರೂರ ಮಾರ್ಗದಲ್ಲಿ ನಿರ್ಮಿಸುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯ ದೃಶ್ಯ   

ಬಾಗಲಕೋಟೆ: ಶಿರೂರ ಕ್ರಾಸ್‌ನಿಂದ ಗದ್ದನಕೇರಿ ಕ್ರಾಸ್‌ವರೆಗಿನ 24 ಕಿ.ಮೀ. ರಸ್ತೆ ಕಾಮಗಾರಿ 2025 ಜನವರಿ ಅಂತ್ಯಕ್ಕೆ ಪೂರ್ಣಗೊಳ್ಳಬೇಕಾಗಿತ್ತು. ಭೂಸ್ವಾಧೀನ ಬಾಕಿ, ಸೇತುವೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳದಿರುವುದರಿಂದ ಕಾಮಗಾರಿ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ.

ನಾಲ್ಕು ಪಥಗಳ ರಸ್ತೆ ನಿರ್ಮಾಣವನ್ನು ₹298 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿತ್ತು. ಟೆಂಡರ್‌ನಲ್ಲಿ ಶೇ 23ರಷ್ಟು ಕಡಿಮೆ ನಮೂದಿಸಿರುವುದರಿಂದ ವೆಚ್ಚ ಕಡಿಮೆಯಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದಿರುವುದರಿಂದ ಕಾಮಗಾರಿಗೆ ಅಡ್ಡಿಯಾಗಿದೆ.

24 ರಿಂದ 28 ಮೀಟರ್ ಅಗಲದ ರಸ್ತೆ ನಿರ್ಮಾಣವಾಗಬೇಕಿದೆ. ಬಾಗಲಕೋಟೆಯಿಂದ ಶಿರೂರಿಗೆ ಹೋಗುವ ಮಾರ್ಗದಲ್ಲಿರುವ ರೈಲ್ವೆ ಮಾರ್ಗಕ್ಕೆ ಫ್ಲೈಓವರ್ ನಿರ್ಮಿಸುವ ಕಾಮಗಾರಿ ನಡೆದಿದೆ. ಆದರೆ, ಈ ಕಾಮಗಾರಿ ಇನ್ನು ಒಂದು ಬದಿಯ ಪಿಲ್ಲರ್ ಹಂತದಲ್ಲಿಯೇ ಸ್ಥಗಿತಗೊಂಡಿದೆ.‌

ADVERTISEMENT

ಈ ಮಾರ್ಗದಲ್ಲಿ 20ಕ್ಕೂ ಹೆಚ್ಚು ರೈಲುಗಳು ಸಂಚರಿಸುತ್ತವೆ. ಪ್ರತಿ ರೈಲು ಬಂದಾಗಲೂ ಗೇಟ್‌ ಹಾಕಲಾಗುತ್ತದೆ. ಇದರಿಂದ ಹತ್ತರಿಂದ ಹದಿನೈದು ನಿಮಿಷ ಕಾಯಬೇಕಾಗುತ್ತದೆ. ಇದನ್ನು ತಪ್ಪಿಸಲು ಫ್ಲೈಓವರ್ ನಿರ್ಮಾಣ ಮಾಡಲಾಗುತ್ತಿದೆ.

2023 ಜನವರಿ ತಿಂಗಳಿನಲ್ಲಿ ಕಾಮಗಾರಿ ಆರಂಭವಾಗಿದೆ. ಎರಡು ವರ್ಷಗಳಾಗುತ್ತಾ ಬಂದರೂ ಭೂಸ್ವಾಧೀನ ಪ್ರಕ್ರಿಯೆಯೇ ಪೂರ್ಣಗೊಂಡಿಲ್ಲ. ಆಮೆ ವೇಗದ ಗತಿಯಿಂದಾಗಿ ಕಾಮಗಾರಿ ನನೆಗುದಿಗೆ ಬಿದ್ದಿದೆ.

ಮೂರು ಡೊಡ್ಡ ಪ್ರಮಾಣದ ಸೇತುವೆಗಳ ನಿರ್ಮಾಣ ಮಾಡಬೇಕಿದೆ. ಕಲ್ಲು ಕ್ವಾರಿ ಬಳಿ ಇರುವ ಸೇತುವೆ ಕಾಮಗಾರಿ ಒಂದು ಹಂತಕ್ಕೆ ಬಂದಿದೆ. ಬಾಗಲಕೋಟೆ–ಗದ್ದನಕೇರಿ ಮಾರ್ಗದಲ್ಲಿರುವ ಸೇತುವೆ ಕಾಮಗಾರಿ ಮಂದಗತಿಯಲ್ಲಿ ನಡೆದಿದೆ.

ಅಲ್ಲಲ್ಲಿ ರಸ್ತೆ ಕಾಮಗಾರಿ ನಡದೇ ಇರುವುದರಿಂದ ಜನರು ತೆಗ್ಗು–ದಿನ್ನೆಗಳ ಮಧ್ಯೆಯೇ ಸಂಚರಿಸುವಂತಾಗಿದೆ. ಕೆಲವೆಡೆ ಡಿವೈಡರ್ ನಿರ್ಮಿಸಲಾಗಿದೆ. ಕೆಲವೆಡೆ ನಿರ್ಮಿಸಿಲ್ಲ. ಹೀಗಾಗಿ ಆಗಾಗ ಅಪಘಾತಗಳು ಸಂಭವಿಸುತ್ತಿವೆ.

‘ಜಿಲ್ಲಾಡಳಿತದ ವತಿಯಿಂದ ಭೂಸ್ವಾಧೀನ ಕಾರ್ಯ ನಡೆದಿದೆ. ಭೂಸ್ವಾಧೀನ ಪೂರ್ಣಗೊಳ್ಳುತ್ತಿದ್ದಂತೆಯೇ ಕಾಮಗಾರಿ ತೀವ್ರಗೊಳಿಸಲಾಗುವುದು. ಆದಷ್ಟು ಬೇಗನೆ ಪೂರ್ಣಗೊಳಿಸಲಾಗುವುದು’ ಎನ್ನುತ್ತಾರೆ ರಾಷ್ಟ್ರೀಯ ಹೆದ್ದಾರಿ ವಿಭಾಗದ ಎಂಜಿನಿಯರ್ ವಿಜಯಕುಮಾರ.ರೈಲ್ವೆ ಮೇಲ್ಸೇತುವೆ ನಿರ್ಮಾಣ ಅತ್ಯಂತ ವಿಳಂಬ ಆಗುತ್ತಿದೆ. ಇದರಿಂದಾಗಿ ಕಾಮಗಾರಿ ಪೂರ್ಣವಾಗಿಲ್ಲ. ಸಂಬಂಧಿಸಿದ ಜನಪ್ರತಿನಿಧಿಗಳು ಗಮನ ಹರಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುತ್ತದೆ

ಪೂರ್ಣಗೊಳ್ಳದ ಭೂಸ್ವಾಧೀನ ಮಂದಗತಿಯಲ್ಲಿ ರೈಲ್ವೆ ಮೇಲ್ಸೇತುವೆ ಅಪಘಾತ ಸಂಖ್ಯೆ ಹೆಚ್ಚಳ
ರೈಲ್ವೆ ಮೇಲ್ಸೇತುವೆ ನಿರ್ಮಾಣ ಅತ್ಯಂತ ವಿಳಂಬ ಆಗುತ್ತಿದೆ. ಇದರಿಂದಾಗಿ ಕಾಮಗಾರಿ ಪೂರ್ಣವಾಗಿಲ್ಲ. ಸಂಬಂಧಿಸಿದ ಜನಪ್ರತಿನಿಧಿಗಳು ಗಮನ ಹರಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುತ್ತದೆ
ಕುತುಬುದ್ದೀನ್ ಖಾಜಿ ಅಧ್ಯಕ್ಷರು ಕರ್ನಾಟಕ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.