ADVERTISEMENT

ಛತ್ರಪತಿ ಶಿವಾಜಿ ಧೈರ್ಯ, ಶೌರ್ಯದ ಪ್ರತೀಕ: ನಾರಾಯಣ ಶಾ ಭಾಂಡಗೆ

ಶಿವಾಜಿ ಮಹಾರಾಜರ ಜಯಂತಿ: ನಾರಾಯಣಶಾ ಭಾಂಡಗೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 5:53 IST
Last Updated 20 ಫೆಬ್ರುವರಿ 2026, 5:53 IST
ಬಾಗಲಕೋಟೆಯಲ್ಲಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ನಡೆದ ಶಿವಾಜಿ ಚಿತ್ರದ ಮೆರವಣಿಗೆಗೆ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಚಾಲನೆ ನೀಡಿದರು
ಬಾಗಲಕೋಟೆಯಲ್ಲಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ನಡೆದ ಶಿವಾಜಿ ಚಿತ್ರದ ಮೆರವಣಿಗೆಗೆ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಚಾಲನೆ ನೀಡಿದರು   

ಬಾಗಲಕೋಟೆ: ಶಿವಾಜಿ ಮಹಾರಾಜರು ಧೈರ್ಯ, ಶೌರ್ಯ ಮತ್ತು ಸ್ವಾಭಿಮಾನದ ಪ್ರತೀಕ ಎಂದು ರಾಜ್ಯಸಭಾ ಸದಸ್ಯ ನಾರಾಯಣಶಾ ಭಾಂಡಗೆ ಹೇಳಿದರು.

ಇಲ್ಲಿನ ನವನಗರದ ಡಾ.ಬಿ.ಆರ್.ಅಂಬೇಡ್ಕರ್‌ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಗುರುವಾರ ಹಮ್ಮಿಕೊಂಡ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿವಾಜಿ ಮಹಾರಾಜ ಸಾಮಾನ್ಯ ವ್ಯಕ್ತಿಯಾಗಿದ್ದುಕೊಂಡು ಅಸಮಾನ್ಯ ಸಾಧನೆ ಮಾಡಿದ್ದಾರೆ. ತಾಯಿ ಜೀಜಾಬಾಯಿ ನೀಡಿದ ಶಿಕ್ಷಣ, ಬೆಳೆದ ವಾತಾವರಣ, ಜೀವನಾನುಭವ ಶಿವಾಜಿಗೆ ಪ್ರೇರಣೆ ನೀಡಿತ್ತು ಎಂದರು.

ADVERTISEMENT

ಶಿವಾಜಿ ದೇಶಕ್ಕೆ ನೀಡಿದ ಕೊಡುಗೆ ಅಪಾರವಾಗಿದ್ದು, ಸ್ವರಾಜ್ಯದ ಪರಿಕಲ್ಪಣೆಯನ್ನು ಭಾರತದಲ್ಲಿ ಹುಟ್ಟುಹಾಕಿದ ಮೊದಲ ವ್ಯಕ್ತಿಯಾಗಿದ್ದಾರೆ. ಅವರ ನಾಯಕತ್ವ ಗುಣ, ಸಾಹಸ, ಜೀವನ, ಆಡಳಿತ ಕಾರ್ಯವೈಖರಿ ನಮಗೆಲ್ಲರಿಗೂ ಅನುಕರಣೀಯವಾದುದು ಎಂದ ಭಾಂಡಗೆ, ಇಂತಹ ಮಹಾತ್ಮರ ಜಯಂತಿ ಕಾರ್ಯಕ್ರಮದಲ್ಲಿ ಹೆಚ್ಚು ಜನ ಪಾಲ್ಗೊಳ್ಳದೇ ಇರುವುದು ವಿಷಾದನೀಯ ಎಂದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಅನೀಲಕುಮಾರ ದಡ್ಡಿ ಮಾತನಾಡಿ, ಮಹಾತ್ಮರ ಜಯಂತಿಗಳನ್ನು ಕೇವಲ ಆಚರಣೆ ಮಾಡಿದರೆ ಸಾಲದು, ಅವರ ತತ್ವ, ಸಿದ್ದಾಂತ, ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅಂದಾಗ ಮಾತ್ರ ಜಯಂತಿ ಆಚರಣೆಗೆ ಸಾರ್ಥಕತೆ ಬರುತ್ತದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಶಿವಾಜಿ ಮಹಾರಾಜ ಸ್ವರಾಜ್ಯದ ಕನಸನ್ನು ಸಾಕಾರಗೊಳಿಸಿದ ಮಹಾನ್ ನಾಯಕ. ಅವರು ಶಕ್ತಿಶಾಲಿ ಆಡಳಿತ ವ್ಯವಸ್ಥೆಯನ್ನು ರೂಪಿಸಿದವರು ಎಂದರು.

ಸಮುದಾಯದ ಮುಖಂಡ ಶೇಖರ ಮಾನೆ ಮಾತನಾಡಿ, ಶಿವಾಜಿ ಮಹಾರಾಜರ ಆಡಳಿತ ಕಾಲದಲ್ಲೇ ಜಾರಿಗೆ ತಂದ ರಾಜನೀತಿಗಳು ಇಂದಿನ ಆಡಳಿತ ವ್ಯವಸ್ಥೆಗೆ ಮಾದರಿಯಾಗಿವೆ ಎಂದರು.

ಉಪನ್ಯಾಸಕ ಚಂದ್ರಶೇಖರ ಕಾಳನ್ನವರ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಶೀಲ್ದಾರ ವಾಸುದೇವ ಸ್ವಾಮಿ ಸೇರಿದಂತೆ ಸಮುದಾಯದ ಮುಖಂಡರು, ಮಹಿಳಾ ಮುಖಂಡರು ಇದ್ದರು.

ಅದ್ದೂರಿ ಮೆರವಣಿಗೆ

ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಬಾಗಲಕೋಟೆಯಲ್ಲಿ ಜಿಲ್ಲಾಡಳಿತ ಭವನದಿಂದ ಡಾ.ಬಿ.ಆರ್.ಅಂಬೇಡ್ಕರ ಭವನದವರೆಗೆ ಶಿವಾಜಿ ಭಾವಚಿತ್ರದ ಮೆರವಣಿಗೆ ಅದ್ದೂರಿಯಾಗಿ ಜರುಗಿತು. ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮೆರವಣಿಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.