ADVERTISEMENT

ಕೆರೂರು- ಗೂಡಂಗಡಿಗೆ ನುಗ್ಗಿದ ಲಾರಿ: ಮೂವರು ಸಾವು

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2020, 11:44 IST
Last Updated 17 ಮಾರ್ಚ್ 2020, 11:44 IST
   

ಬಾಗಲಕೋಟೆ: ಬಾದಾಮಿ ತಾಲ್ಲೂಕಿನ ಕೆರೂರು ಪಟ್ಟಣದಲ್ಲಿ ಮಂಗಳವಾರ ಸರಕು ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗೂಡಂಗಡಿ ಹಾಗೂ ಬಸ್ ಗೆ ಕಾಯುತ್ತಿದ್ದವರ ಮೇಲೆ ಹರಿದ ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.

ಲಾರಿ ಹುಬ್ಬಳ್ಳಿಯಿಂದ ಹುನಗುಂದ ತಾಲ್ಲೂಕಿನ ಅಮೀನಗಡಕ್ಕೆ ಹೊರಟಿತ್ತು. ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಅಪಘಾತ ಸಂಭವಿಸಿದೆ. ಮೊದಲಯ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಲಾರಿ ವಿದ್ಯುತ್ ಕಂಬಕ್ಕೆ ಗುದ್ದಿದೆ. ನಂತರ ಅಲ್ಲಿನ ಅಮೃತ್ ಹೋಟೆಲ್ ಪಕ್ಕದ ಬಸ್ ನಿಲ್ದಾಣದ ಎದುರು ಬಸ್ಸಿಗೆ ಕಾಯುತ್ತಿದ್ದವರ ಮೇಲೆ ಹರಿದು ಸಮೀಪದ ಪಾಂಡುರಂಗ ತೆಗ್ಗಿ ಅವರ ಗೂಡಂಗಡಿಗೆ ನುಗ್ಗಿದೆ.

ಅಪಘಾತದಲ್ಲಿ ಗೂಡಂಗಡಿ ಮಾಲಿಕ ಪಾಂಡುರಂಗ ತೆಗ್ಗಿ ಸ್ನೇಹಿತ ಲಕ್ಷ್ಮಣ ಹಾದಿಮನಿ (28), ಹುಬ್ಬಳ್ಳಿಯ ಪೂಜಾ ಹಳಪೇಟೆ, ಬೆಳಗಾವಿ ಜಿಲ್ಲೆ ಸುರೇಬಾನದ ಮಹಾನಂದ ಕರಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸಾವಿಗೀಡಾದವರಲ್ಲಿ ಇಬ್ಬರು ಊರೂರು ಸುತ್ತಾಡಿ ಪ್ಲಾಸ್ಟಿಕ್ ಸಾಮಗ್ರಿಗಳ ಮಾರಾಟ ಮಾಡುತ್ತಿದ್ದರು. ನರಗುಂದಕ್ಕೆ ತೆರಳಲು ಬಸ್ ಗೆ ಕಾಯುತ್ತಿದ್ದರು ಎಂದು ತಿಳಿದುಬಂದಿದೆ.

ADVERTISEMENT

ಲಾರಿ ಚಾಲಕ ಪಾನಮತ್ತನಾಗಿದ್ದನು ಎಂದು ತಿಳಿದುಬಂದಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಪ್ಪಿದ ಭಾರಿ ಅನಾಹುತ: ಪ್ರತಿ ಮಂಗಳವಾರ ಕೆರೂರಿನಲ್ಲಿ ಈ ಭಾಗದಲ್ಲಿಯೇ ಅತಿ ದೊಡ್ಡ ಕುರಿ ಹಾಗೂ ದನದ ಸಂತೆ ನಡೆಯುತ್ತದೆ. ಕೊರೊನಾ ವೈರಸ್ ಹರಡುವಿಕೆ ಭೀತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಂತೆ ನಿಷೇಧಿಸಿತ್ತು. ಹೀಗಾಗಿ ಇನ್ನಷ್ಟು ಜೀವಹಾನಿ ತಪ್ಪಿದೆ ಎನ್ನಲಾಗಿದೆ.

ಗೂಡಂಗಡಿ ನಜ್ಜುಗುಜ್ಜಾಗಿದ್ದು, ಅಪಘಾತದ ಭೀಕರತೆ ಬಿಂಬಿಸುತ್ತಿತ್ತು. ಲಾರಿಯನ್ನು ಜೆಸಿಬಿ ಸಹಾಯದಿಂದ ತೆರವುಗೊಳಿಸಿ ಗಾಯಗೊಂಡ ಮೂವರನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.