ADVERTISEMENT

ಮಠ-ಮಾನ್ಯಗಳ ಕೊಡುಗೆ ದೊಡ್ಡದು: ಶಿವಾಚಾರ್ಯ: ಸ್ವಾಮೀಜಿ ಅಭಿಮತ

ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 14:47 IST
Last Updated 10 ಜೂನ್ 2025, 14:47 IST
ಬಿಲ್ ಕೆರೂರಿನ ಬಿಲ್ವಾಶ್ರಮ ಹಿರೇಮಠದಲ್ಲಿ ಮಂಗಳವಾರ ಜರುಗಿದ ಲಿಂ.ರುದ್ರಮುನಿ ಶಿವಾಚಾರ್ಯರ 44 ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವನ್ನು ಉಜ್ಜಯಿನಿ ಕಾಶೀ ಪೂಜ್ಯರು ಉದ್ಘಾಟಿಸಿದರು 
ಬಿಲ್ ಕೆರೂರಿನ ಬಿಲ್ವಾಶ್ರಮ ಹಿರೇಮಠದಲ್ಲಿ ಮಂಗಳವಾರ ಜರುಗಿದ ಲಿಂ.ರುದ್ರಮುನಿ ಶಿವಾಚಾರ್ಯರ 44 ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವನ್ನು ಉಜ್ಜಯಿನಿ ಕಾಶೀ ಪೂಜ್ಯರು ಉದ್ಘಾಟಿಸಿದರು    

ರಾಂಪುರ: ಸನಾತನ ಸಂಸ್ಕೃತಿ, ಪರಂಪರೆ, ಆಚಾರ- ವಿಚಾರಗಳನ್ನು ಜಾತಿ, ಮತ, ಪಂಥಗಳ ಬೇಧವಿಲ್ಲದೇ ನಾಡಿನ ಸಮಸ್ತ ಜನರಿಗೆ ತಿಳಿಸಿ ಅವರ ಅಭ್ಯುದಯಕ್ಕೆ ಶ್ರಮಿಸಿದ ಕೀರ್ತಿ ಮಠ- ಮಾನ್ಯಗಳಿಗೆ ಸಲ್ಲುತ್ತದೆ ಎಂದು ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಮೀಪದ ಬಿಲ್ ಕೆರೂರ ಗ್ರಾಮದಲ್ಲಿ ಮಂಗಳವಾರ ಜರುಗಿದ ಬಿಲ್ವಾಶ್ರಮ ಹಿರೇಮಠದ ಲಿಂ.ರುದ್ರಮುನಿ ಶಿವಾಚಾರ್ಯರ 44 ನೇ ಪುಣ್ಯಾರಾಧನೆ, ಪೀಠಾಧಿಪತಿ ಸಿದ್ಧಲಿಂಗ ಶಿವಾಚಾರ್ಯರ ಜನ್ಮ ಸುವರ್ಣ ಮಹೋತ್ಸವ, ಗುರು ಪಟ್ಟಾಧಿಕಾರದ ರಜತ ಮಹೋತ್ಸವ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ನಾಡಿನ ಸಮಸ್ತ ಜನರ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಜೀವನಮಟ್ಟ ಸುಧಾರಿಸಲು ಮಠ ಮಾನ್ಯಗಳ ಕೊಡುಗೆ ಅಪಾರವಾಗಿದೆ. ಸಕಲ ಜೀವಾತ್ಮರಿಗೂ ಲೇಸು ಬಯಸಿದ ಮಠಗಳು ಕೇವಲ ಧಾರ್ಮಿಕ ಭಾವನೆಯನ್ನು ಜನರಲ್ಲಿ ಬಿತ್ತಿಲ್ಲ. ಆಚಾರ, ವಿಚಾರ, ಸಂಸ್ಕಾರ, ಸಂಸ್ಕೃತಿ, ಪರಂಪರೆಯನ್ನು ತಿಳಿಸಿ ಸನ್ಮಾರ್ಗದಲ್ಲಿ ನಡೆಸಿವೆ. ಶಿಕ್ಷಣ ಸಂಸ್ಥೆ, ಪ್ರಸಾದ ನಿಲಯಗಳ ಮೂಲಕ ಎಲ್ಲರಿಗೂ ಅನ್ನ, ಅಕ್ಷರ, ಆಶ್ರಯ ಹಾಗೂ ಅರಿವು ನೀಡಿದ ಕೀರ್ತಿ ವೀರಶೈವ ಮಠಗಳಿಗೆ ಸಲ್ಲುತ್ತದೆ ಎಂದರು.

ADVERTISEMENT

ಸಾನ್ನಿಧ್ಯ ವಹಿಸಿದ್ದ ಕಾಶೀ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಗ್ರಹಸ್ಥ ಬದುಕು ಸುಂದರವಾಗಬೇಕಾದರೆ ಅತ್ತೆ-ಸೊಸೆಯ ನಡುವೆ ತಾಯಿ- ಮಗಳ ಬಾಂಧವ್ಯ ಬೆಳೆಯಬೇಕು. ಇವರಿಬ್ಬರ ಅನ್ಯೋನ್ಯದ ಸಂಬಂಧ ಭೂಲೋಕದ ಸ್ವರ್ಗ ಎಂದೆನಿಸುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ, ಮೌನ ತಪಸ್ವಿ ಲಿಂ.ರುದ್ರಮುನಿ ಶಿವಾಚಾರ್ಯರು ಜನರ ಕಲ್ಯಾಣ ಬಯಸಿದವರು. ಅವರ ಭಕ್ತಿಯ ಪರಂಪರೆಯಿಂದಾಗಿ ಶ್ರೀಮಠ ಇಂದು ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿದೆ. ಅವರ ತಪಸ್ಸಿನ ಫಲದಿಂದಾಗಿ ಬಿಲ್ ಕೆರೂರ ಕ್ಷೇತ್ರ ಪಾವನ ಕ್ಷೇತ್ರವಾಗಿ ಬೆಳೆದಿದೆ ಎಂದರು.

ಹುನಗುಂದ ಶಾಸಕ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಮಾಜವನ್ನು ಹಾದಿ ತಪ್ಪಿಸುವ ಕಾರ್ಯ ನಡೆಸಿವೆ. ಇದನ್ನು ನಿಯಂತ್ರಿಸಿ ಸಮಾಜವನ್ನು ಸರಿದಾರಿಯಲ್ಲಿ ನಡೆಸುವ ಶಕ್ತಿ ಪಂಚಪೀಠಗಳಿಗಿದೆ ಎಂದು ಹೇಳಿದರು.

ಬಿಲ್ವಾಶ್ರಮ ಹಿರೇಮಠದ ಪೀಠಾಧಿಪತಿ ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿ, ರುದ್ರಮುನಿ ಶಿವಾಚಾರ್ಯರ ಸತ್ಸಸಂಕಲ್ಪದಂತೆ ಈ ವರ್ಷ ನೂತನ ರಥ ನಿರ್ಮಾಣ ಮಾಡಲಾಗಿದೆ. ಬರುವ ದಿನಗಳಲ್ಲಿ ಶ್ರೀಮಠದ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಉಚಿತವಾಗಿ ಶಿಕ್ಷಣ ನೀಡಬೇಕೆನ್ನುವ ಸಂಕಲ್ಪ ಹೊಂದಿದ್ದೇವೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಮುಕ್ತಿಮಂದಿರದ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಮಾತನಾಡಿದರು. ಎಮ್ಮಿಗನೂರಿನ ವಾಮದೇವ ಶಿವಾಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಡಗುಂದಿ, ಮುತ್ತತ್ತಿ, ಬಾಗೇವಾಡಿ, ಬೀಳಗಿ, ಶಿವಗಂಗೆಯ ಶ್ರೀಗಳು, ಜಿಲ್ಲಾ ಪಂಚಾಯಿತಿ    ಮಾಜಿ ಅಧ್ಯಕ್ಷರಾದ ಬಸವಂತಪ್ಪ ಮೇಟಿ, ಬಾಯಕ್ಕ ಮೇಟಿ, ಎಸ್.ಎನ್.ರಾಂಪುರ, ಶಂಭುಗೌಡ ಪಾಟೀಲ, ಪ್ರಭು ಡೇರೇದ ವೇದಿಕೆಯಲ್ಲಿದ್ದರು.

ಗಿರಿಸಾಗರದ ರುದ್ರಮುನಿ ಶಿವಾಚಾರ್ಯರು ಸ್ವಾಗತಿಸಿದರು. ಎಮ್ಮಿಗನೂರಿನ ವಾಮದೇವ ಶಿವಾಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುರಾಜ ಲೂತಿ ನಿರೂಪಿಸಿದರು. ಕಾರ್ಯಕ್ರಮದ ನಂತರ ಸಿದ್ಧಲಿಂಗ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಿತು.

14 ಜೋಡಿಗಳ ವಿವಾಹ: ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 14 ಜೋಡಿಗಳು ಗೃಹಸ್ಥಾಶ್ರಮಯಕ್ಕೆ ಅಡಿಯಿಟ್ಟರು. ಪೂಜ್ಯರು, ನೆರೆದ ಜನಸ್ತೋಮ ವಧು-ವರರಿಗೆ ಅಕ್ಷತೆ ಹಾಕಿ ಸುಖಮಯ ದಾಂಪತ್ಯ ಜೀವನಕ್ಕೆ ಶುಭಹಾರೈಸಿದರು.

ಬಿಲ್ ಕೆರೂರಿನಲ್ಲಿ ಮಂಗಳವಾರ ಜರುಗಿದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 14 ಜೋಡಿಗಳು ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.