ಬಾಗಲಕೋಟೆ: ವಿಶ್ವ ಪ್ರಸಿದ್ಧ ಪ್ರವಾಸಿ ತಾಣಗಳು ಹೊಂದಿರುವ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ. ಆದರೆ, ನಿಶ್ಚಿತ ಗುರಿಯೊಂದಿಗೆ ಸಾಗದ್ದರಿಂದ ಪ್ರವಾಸೋದ್ಯಮ ಬೆಳವಣಿಗೆ ಕಾಣುತ್ತಿಲ್ಲ.
ಚಾಲುಕ್ಯರ ಶಿಲ್ಪಕಲೆಯ ತೊಟ್ಟಿಲಾದ ಐಹೊಳೆ ಗ್ರಾಮದ ಸ್ಥಳಾಂತರ ವಿಷಯ ಹಲವು ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಗ್ರಾಮದ ಬದಲಾಗಿ ಸ್ಮಾರಕಗಳಿಗೆ ಹೊಂದಿಕೊಂಡಿರುವ 134 ಮನೆಗಳನ್ನು ಸ್ಥಳಾಂತರಿಸಲು ₹ 2.90 ಕೋಟಿ ನೀಡಿ 13 ಎಕರೆ ಭೂಮಿ ಖರೀದಿಸಲಾಗಿದೆ. ಇಲ್ಲಿ ನಿವೇಶನಗಳನ್ನು ರಚಿಸಿ ಮೂಲಸೌಲಭ್ಯ ಒದಗಿಸಲು ₹ 12 ಕೋಟಿ ಮೊತ್ತದ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಬಜೆಟ್‌ನಲ್ಲಿ ಇದಕ್ಕೆ ನೆರವು ಸಿಗುವ ನಿರೀಕ್ಷೆಯಿದೆ.
ಇಡೀ ಗ್ರಾಮವನ್ನೇ ಸ್ಥಳಾಂತರ ಮಾಡಿದರೆ, ಪಟ್ಟದಕಲ್ಲಿನ ಹಾಗೆ ಒಂದೇ ಸಮುಚ್ಚಯದಲ್ಲಿ 70ಕ್ಕೂ ಹೆಚ್ಚು ಸ್ಮಾರಕಗಳನ್ನು ನೋಡಬಹುದು. ಇದರಿಂದ ಐಹೊಳೆಯು ಹೊಸ ಹೊಳಪನ್ನೇ ಪಡೆಯಲಿದೆ. ಇಚ್ಛಾಶಕ್ತಿ ಕೊರತೆಯಿಂದ ಸ್ಥಳಾಂತರ ವಿಷಯ ಮುಂದೂಡಿಕೆಯಾಗುತ್ತಲೇ ಇದೆ.
ಸ್ಮಾರಕಗಳಿಗೆ ರಸ್ತೆ ಸಂಪರ್ಕ, ಶೌಚಾಲಯ, ವಸತಿ ಸೌಕರ್ಯ, ಉತ್ತಮ ಹೋಟೆಲ್, ಸಾರಿಗೆ ಸಂಪರ್ಕ ಹಾಗೂ ಪಾರ್ಕಿಂಗ್ ಮತ್ತಿತರ ಮೂಲ ಸೌಲಭ್ಯಗಳು ಇಲ್ಲದ ಕಾರಣ ಪ್ರವಾಸಿಗರು ಪರದಾಡುವಂತಾಗಿದೆ.
ಬಾದಾಮಿ ಅಗಸ್ತ್ಯತೀರ್ಥ ದಂಡೆಯ 95 ಮನೆಗಳ ತೆರವು ಕಾರ್ಯಾಚರಣೆ ಎರಡು ದಶಕಗಳಿಂದ ನನೆಗುದಿಗೆ ಬಿದ್ದಿದೆ. ಅವರಿಗಾಗಿ ಭೂಮಿ ಖರೀದಿಸಿ ನಿವೇಶನಗಳ ರಚನೆಯಾಗಿದೆ. ಆದರೆ, ಇನ್ನು ಫಲಾನುಭವಿಗಳಿಗೆ ಹಸ್ತಾಂತರವಾಗಿಲ್ಲ. ಮೇಣ ಬಸದಿ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ರಸ್ತೆಯಲ್ಲಿಯೇ ವಾಹನ ಪಾರ್ಕಿಂಗ್ ಮಾಡುವಂತಾಗಿದೆ.
ಪ್ರವಾಸಿಗರ ವಾಹನಗಳ ಪಾರ್ಕಿಂಗ್ ಮಾಡಲು ಪಾರ್ಕಿಂಗ್ ಪ್ಲಾಜಾ ನಿರ್ಮಾಣಕ್ಕಾಗಿ ಎಪಿಎಂಸಿಯು 9 ಎಕರೆ ಭೂಮಿಯನ್ನು ಪ್ರವಾಸೋದ್ಯಮ ಇಲಾಖೆಗೆ ಕೊಟ್ಟಿದೆ. ಅದರಲ್ಲಿ ನಾಲ್ಕು ಎಕರೆ ಮಾತ್ರ ಹಸ್ತಾಂತರವಾಗಿದೆ. ಉಳಿದ ಐದು ಎಕರೆಯ ಭೂಮಿ ಹಸ್ತಾಂತರ ಕಾರ್ಯ ನಡೆಯಬೇಕಿದೆ.
‘ಪಾರ್ಕಿಂಗ್ ಪ್ಲಾಜಾ ನಿರ್ಮಾಣ ಮಾಡಲಾಗುವುದು. ಅಲ್ಲಿ ಅಗತ್ಯ ಮೂಲಸೌಕರ್ಯಗಳನ್ನೂ ಒದಗಿಸಲಾಗುವುದು’ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಗೋಪಾಲ ಹಿತ್ತಲಮನಿ.
ಕೂಡಲಸಂಗಮ ಅಭಿವೃದ್ಧಿಯೂ ಕುಂಟುತ್ತ ಸಾಗಿದೆ. ದೆಹಲಿ ಅಕ್ಷರಧಾಮ ಮಾದರಿಯಲ್ಲಿ ಬಸವ ಅಂತರರಾಷ್ಟ್ರೀಯ ಕೇಂದ್ರ ನಿರ್ಮಾಣವನ್ನು ₹ 15 ಕೋಟಿ ವೆಚ್ಚದಲ್ಲಿ ಆರಂಭಿಸಿ 2005ರಲ್ಲಿ ಪೂರ್ಣಗೊಳಿಸಲಾಗಿದೆ. ಇಂದಿನವರೆಗೂ ಉದ್ಘಾಟನೆಯಾಗಿಲ್ಲ. ವಿವಿಧ ಕಾಮಗಾರಿಗಳು ಅರ್ಧಕ್ಕೆ ನಿಂತಿದ್ದು, ಸಮಗ್ರ ಅಭಿವೃದ್ಧಿ ಮಾಡಬೇಕಿದೆ.
ಐಹೊಳೆ ಮನೆಗಳ ಸ್ಥಳಾಂತರಕ್ಕೆ ಭೂಮಿಯನ್ನು ರಾಜ್ಯಪಾಲರ ಹೆಸರಿನಲ್ಲಿ ಖರೀದಿಸಲಾಗಿದೆ. ಅದನ್ನು ಅಭಿವೃದ್ಧಿ ಪಡಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕಿದೆಸಂತೋಷ ಜಗಲಾಸರ ಉಪವಿಭಾಗಾಧಿಕಾರಿ ಬಾಗಲಕೋಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.