ಬೀಳಗಿ: ತಾಲ್ಲೂಕಿನ ಸಾಮಾಜಿಕ ಜಾಲತಾಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಮನಸ್ಕ ಯುವಕರು ಸೇರಿ 'ಭರವಸೆ' ತಂಡವನ್ನು ರಚಿಸಿಕೊಂಡಿದ್ದಾರೆ. ಇದರ ಅಡಿ ಪ್ರತಿ ಭಾನುವಾರ ತಾಲ್ಲೂಕಿನ ಸರ್ಕಾರಿ ಶಾಲೆಗಳು, ದೇವಸ್ಥಾನ ಹಾಗೂ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛ ಗೊಳಿಸುವುದಲ್ಲದೆ ಅವುಗಳಿಗೆ ಬಣ್ಣ ಹಚ್ಚಿ ಘೋಷಣೆಗಳನ್ನು ಬರೆದು ಸಾರ್ವಜನಿಕರನ್ನು ಜಾಗೃತಿಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದಕ್ಕಾಗಿ ತಂಡಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ತಾಲ್ಲೂಕಿನ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕಿರುಚಿತ್ರಗಳನ್ನು ನಿರ್ಮಿಸುವ ವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್ಟ್ ಸಂದೀಪ , ಕಲ್ಮೇಶ ಬೀಳಗಿ, ಕರುಣ ಮಂಟೂರ, ಜೈ ಭೀಮ ರಾಜವರ್ಧನ, ಗಂಗಾಧರ, ಕಿಶನ ಬೊರ್ಜಿ, ಲಕ್ಕಿ ಎಸ್ ಎಮ್, ಶಂಕರ, ಪ್ರಜ್ವಲ, ಅಭಿಷೇಕ, ಅಭಿ, ಶಿವಕುಮಾರ,ಮಹಿಬೂಬ್ ನಿಂಬಾಳ್ಕರ ಮುಂತಾದವರೆಲ್ಲ ಸೇರಿ ‘ಭರವಸೆ’ ಸೇವಾ ತಂಡವನ್ನು ರಚಿಸಿಕೊಂಡಿದ್ದಾರೆ.
ತಂಡದ ಸದಸ್ಯರೆಲ್ಲ ತಿಂಗಳ ಪ್ರತಿ ಭಾನುವಾರ ತಾಲ್ಲೂಕಿನ ಯಾವುದಾದರೂ ಅಂದಗೆಟ್ಟ ಸಾರ್ವಜನಿಕ ಸ್ಥಳವನ್ನು ಆಯ್ದುಕೊಳ್ಳುತ್ತಾರೆ. ಅಂದು ಮುಂಜಾನೆ ತಂಡದ ಎಲ್ಲ ಸದಸ್ಯರು ಆಯ್ದ ಸ್ಥಳಕ್ಕೆ ಆಗಮಿಸಿ ಸ್ವಚ್ಛಗೊಳಿಸುವುದಲ್ಲದೆ ಉಚಿತವಾಗಿ ಬಣ್ಣ ಬಳಿದು ಕೊಡುತ್ತಾರೆ. ಸಾರ್ವಜನಿಕ ಸ್ಥಳಗಳ ಸ್ವಚ್ಛತೆಗೆ ಹಾಗೂ ಆ ಸ್ಥಳಗಳ ಸೌಂದರ್ಯ ಹೆಚ್ಚಿಸಲು ಬೇಕಾಗುವ ಖರ್ಚು ವೆಚ್ಚವನ್ನು ಇಲ್ಲಿಯವರೆಗೆ ಭರವಸೆ ತಂಡದ ಸದಸ್ಯರೇ ಭರಿಸಿದ್ದಾರೆ.
ಕಟ್ಟಡಗಳಿಗೆ ಬಣ್ಣ ಬಳಿಯಲು ಬ್ರಷ್, ಬಕೆಟ್, ಕೈಗವಸು ಮೊದಲಾದವುಗಳನ್ನು ತಂಡದ ಸದಸ್ಯರು ತರುತ್ತಾರೆ. ಸಾಮಾನ್ಯವಾಗಿ ಒಂದು ಕಟ್ಟಡ ಸ್ವಚ್ಛಗೊಳಿಸಿ ಬಣ್ಣ ಹಚ್ಚಿಕೊಡಲು ವೃತ್ತಿಪರ ಕಾರ್ಮಿಕರು(ಪೆಂಟರ್) ಸುಮಾರು ₹15ಸಾವಿರದಿಂದ ₹20 ಸಾವಿರ ಕೂಲಿ ಪಡೆದುಕೊಳ್ಳುತ್ತಾರೆ. ಭರವಸೆ ತಂಡದ ಸದಸ್ಯರು ಉಚಿತವಾಗಿ ಈ ಕಾರ್ಯನಿರ್ವಹಿಸುವುದರಿಂದ ಸಾರ್ವಜನಿಕ ಸ್ಥಳಗಳ ಅಭಿವೃದ್ಧಿಯಲ್ಲಿ ತಂಡದ ಪಾತ್ರ ಎಂದು ಕಾಣುತ್ತಿದೆ.
ತಂಡದ ಸದಸ್ಯರು ಈಗಾಗಲೇ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಎದುರಿನ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಿ ಉಚಿತವಾಗಿ ಬಣ್ಣ ಬಳಿದು ಕೊಟ್ಟಿದ್ದು, ಇನ್ನು ಹಲವಾರು ಸರ್ಕಾರಿ ಶಾಲೆಗಳು ಹಾಗೂ ಸಾರ್ವಜನಿಕರಿಗೆ ಅವಶ್ಯವಿರುವ ಸ್ಥಳಗಳು ಸುಂದರವಾಗಿ ಕಾಣುವಂತೆ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಅಲ್ಲದೆ ಸ್ಥಳೀಯ ಸಿದ್ದೇಶ್ವರ ದೇವಸ್ಥಾನದ ಸುತ್ತಮುತ್ತ ಗೋಡೆಗಳ ಮೇಲೆ ಬೀಳಗಿಯ ಐತಿಹಾಸಿಕ ವಿಷಯಗಳ ಕುರಿತು ಚಿತ್ರ ಬಿಡಿಸುವ ಆಲೋಚನೆ ಇದೆ ಎಂದು ತಂಡದ ಸದಸ್ಯರಲ್ಲೊಬ್ಬರಾದ ಕಲ್ಮೇಶ ಬೀಳಗಿ ತಿಳಿಸಿದರು.
ತಾಲ್ಲೂಕಿನ ಕೆಲವು ಯುವಕರು ಭರವಸೆ ಸೇವಾ ತಂಡ ಕಟ್ಟಿಕೊಂಡಿರುವುದು ಶ್ಲಾಘನೀಯ. ಯುವಕರ ಸೇವಾ ಮನೋಭಾವ ಸಹಭಾಗಿತ್ವ ಇತರರಿಗೂ ಪ್ರೇರಣೆಯಾಗಿದೆ. ಅವರ ನಿಸ್ವಾರ್ಥ ಸೇವೆಗೆ ಸರ್ಕಾರದಿಂದ ಗೌರವಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡುತ್ತೇವೆ.ವಿನೋದ ಹತ್ತಳ್ಳಿ ತಾಲ್ಲೂಕಾ ದಂಡಾಧಿಕಾರಿ ಬೀಳಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.