ಕೆರೂರ: ಚಂಡಿಗಡದಲ್ಲಿ ಸೇನಾ ತರಬೇತಿ ವೇಳೆ ಹೃದಯಾಘಾತದಿಂದ ಮೃತಪಟ್ಟ ಯೋಧ ಉಪೇಂದ್ರ ಸೋಮನಾಥ ರಾಠೋಡ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಸ್ವಗ್ರಾಮ ಚಿಂಚಲಕಟ್ಟಿ ಎಲ್‌ಟಿಯಲ್ಲಿ ಶುಕ್ರವಾರ ನೆರವೇರಿತು.
ಚಂಡೀಗಢದಲ್ಲಿ ಸೇನಾ ತರಬೇತಿ ಪಡೆಯುತ್ತಿದ್ದ ವೇಳೆ ಹೃದಯಾಘಾತದಿಂದ ಯೋಧ ಉಪೇಂದ್ರ ಬುಧವಾರ ಮೃತಪಟ್ಟಿದ್ದರು.
ಮೃತರ ಪಾರ್ಥಿವ ಶರೀರವು ಚಂಡೀಗಢದಿಂದ ವಿಮಾನದ ಮೂಲಕ ಶುಕ್ರವಾರ ಬೆಳಿಗ್ಗೆ ಬೆಳಗಾವಿಗೆ ತರಲಾಯಿತು. ಅಲ್ಲಿಂದ ರಸ್ತೆ ಮೂಲಕ ಸೇನಾ ಆಂಬುಲೆನ್ಸ್ ವಾಹನದ ಮೂಲಕ ಕೆರೂರ ಪಟ್ಟಣಕ್ಕೆ ಬರಮಾಡಿಕೊಳ್ಳಲಾಯಿತು.
ಕೆರೂರ ಪಟ್ಟಣದಿಂದ ಸುಮಾರ 5 ಕಿ.ಮೀ ದೂರವಿರುವ ಯೋಧನ ಸ್ವಗ್ರಾಮ ಚಿಂಚಲಕಟ್ಟಿ ಎಲ್‌ಟಿವರೆಗೆ ಪಾರ್ಥಿವ ಶರೀರದ ಮೆರವಣಿಗೆ ಮಾಡಲಾಯಿತು.
ಮೆರವಣಿಗೆ ಉದ್ದಕ್ಕೂ ‘ಉಪೇಂದ್ರ ಅಮರ ರಹೇ, ಬೋಲೊ ಭಾರತ್ ಮಾತಾಕಿ ಜೈ’ ಘೋಷಣೆಗಳು ಮೊಳಗಿದವು. ಮೆರವಣಿಗೆಯಲ್ಲಿ ಮಾಜಿ ಸೈನಿಕರು, ಯುವಕರು, ಗ್ರಾಮಸ್ಥರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಮೃತ ಯೋಧನ ಪಾರ್ಥಿವ ಶರೀರ ಕಂಡು ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿತ್ತು. ಯೋಧನ ಅಗಲಿಕೆಗೆ ಗ್ರಾಮಸ್ಥರು ಕಂಬಣಿ ಮಿಡಿದರು.
ಸ್ವಗ್ರಾಮದ ಹೊರವಲಯದಲ್ಲಿ ಸಾರ್ವಜನಿಕರಿಗೆ ಯೋಧನ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಲೋಕಸಭಾ ಸದಸ್ಯ ಪಿ.ಸಿ. ಗದ್ದಿಗೌಡರ, ಶಾಸಕ ಭೀಮಸೇನ ಚಿಮ್ಮನಕಟ್ಟಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ, ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಅವಳಿ ಜಿಲ್ಲೆಯ ಹಾಲು ಒಕ್ಕೂಟ ಅಧ್ಯಕ್ಷ ಈರಣ್ಣ ಕರಿಗೌಡರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಾ. ಎಂ.ಜಿ.ಕಿತ್ತಲಿ, ಕಾಂಗ್ರೆಸ್ ಮುಖಂಡ ಬಸವಪ್ರಭು ಸರನಾಡಗೌಡ, ಅಧಿಕಾರಿಗಳು ಮೃತ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.
ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.