ADVERTISEMENT

ಜಮಖಂಡಿ | ‘ಜ್ಞಾನಿಗಳು ಇತಿಹಾಸ ಪುಟಗಳಲ್ಲಿ ಶಾಶ್ವತ’

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 4:16 IST
Last Updated 2 ಆಗಸ್ಟ್ 2025, 4:16 IST

ಜಮಖಂಡಿ: ಗಳಿಸಿದ ಚಿನ್ನ, ಬೆಳ್ಳಿ, ಆಸ್ತಿ ನಿಜವಾದ ಸಂಪತ್ತಲ್ಲ. ಗಳಿಸಿದ ಜ್ಞಾನವೇ ನಿಜವಾದ ಸಂಪತ್ತು. ಆತ್ಮಜ್ಞಾನ ಗಳಿಸಿದ ಶಿವಯೋಗಿಗಳು, ತ್ಯಾಗಿಗಳು, ಜ್ಞಾನಿಗಳು ಮಾತ್ರ ಜಗತ್ತಿನ ಇತಿಹಾಸ ಪುಟಗಳಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಎಂದು ಓಲೆಮಠದ ಆನಂದ ದೇವರು ಹೇಳಿದರು.

ಶ್ರಾವಣ ಮಾಸದ ನಿಮಿತ್ತ ಓಲೆಮಠದ ಆಶ್ರಯದಲ್ಲಿ ಜರುಗುತ್ತಿರುವ ಪ್ರತಿ ದಿನ ಓಣಿಗೊಂದು ವಚನ ಶ್ರಾವಣ ಅಂಗವಾಗಿ ಇಲ್ಲಿನ ಪ್ರಭಾತನಗರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಅಲ್ಲಮಪ್ರಭುವಿನ ನಿನ್ನ ಒಡವೆಯೆಂಬುದು ಜ್ಞಾನರತ್ನ ವಚನ ಕುರಿತು ಆಶೀರ್ವಚನ ನೀಡಿದರು.

ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ದಾರಿ ತಪ್ಪುತ್ತಿರುವ ಯುವಕರನ್ನು ಸರಿದಾರಿಗೆ ತರಲು ವಚನ ಶ್ರಾವಣ ಕಾರ್ಯಕ್ರಮ ಬಹಳ ಸಹಕಾರಿಯಾಗಿದೆ. ಜಾತಿಭೇದ, ಲಿಂಗಭೇದ, ಅಸಮಾನತೆ ಹೋಗಲಾಡಿಸಲು 12ನೇ ಶತಮಾನದಲ್ಲಿ ಬಸವಣ್ಣನವರು ನೀಡಿದ ಸಂದೇಶವನ್ನು ಪಾಲಿಸಿದರೆ ಮಾತ್ರ ನಾವು ನಿಜವಾದ ಸುಶಿಕ್ಷಿತರು ಎನಿಸಿಕೊಳ್ಳುತ್ತೇವೆ ಎಂದರು.

ADVERTISEMENT

ಸಾಹಿತಿ ಬಸವರಾಜ ಗಿರಗಾಂವಿ ಮಾತನಾಡಿ, ಕ್ಷಣಿಕ ಸುಖ ನೀಡುವ ಆಡಂಬರದ, ಅನಿಶ್ಚಿತ ವಸ್ತುಗಳು ಮತ್ತು ಇನ್ನೊಬ್ಬರ ಹೊಟ್ಟೆ ಉರಿಸುವ ಒಡವೆಗಳು ನಿಜವಾದ ಒಡವೆಗಳಲ್ಲ. ವ್ಯಕ್ತಿತ್ವ, ಗೌರವ ಹೆಚ್ಚಿಸುವ ಹಾಗೂ ಆಂತರಿಕವಾಗಿ ನೆಮ್ಮದಿ ನೀಡುವ ನಿಜವಾದ ಒಡವೆ ಎಂದರೆ ಜ್ಞಾನ ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಪರಮಾನಂದ ಗವರೋಜಿ, ಪೌರಾಯುಕ್ತ ಜ್ಯೋತಿ ಗಿರೀಶ ಎಸ್, ನಿವೃತ್ತ ಡಿವೈಎಸ್ಪಿ ಪಿ.ಎನ್. ಪಾಟೀಲ, ರಶ್ಮಿ ದೇಸಾಯಿ, ಕೃಷ್ಣಾ ಕಾವಿ ಇದ್ದರು. ಉಪನ್ಯಾಸಕಿ ಪ್ರತಿಭಾ ಪಾಟೀಲ ಸ್ವಾಗತಿಸಿ, ನಿರೂಪಿಸಿದರು. ರವಿ ತೇಲಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.