ADVERTISEMENT

ಉತ್ತಮ ಭವಿಷ್ಯ ರೂಪಿಸಿಕೊಳ್ಳಿ: ಕುಲಕರ್ಣಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 3:45 IST
Last Updated 15 ಜನವರಿ 2026, 3:45 IST
ಬಾಗಲಕೋಟೆಯಲ್ಲಿ ಬುಧವಾರ ನಡೆದ ಪ್ರಾರ್ಥನಾ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರೇರಣಾ ಶಿಕ್ಷಣ ಸಮೂಹ ಸಂಸ್ಥೆ ಅಧ್ಯಕ್ಷ ಆರ್.ಡಿ. ಕುಲಕರ್ಣಿ ಸನ್ಮಾನಿಸಿದರು
ಬಾಗಲಕೋಟೆಯಲ್ಲಿ ಬುಧವಾರ ನಡೆದ ಪ್ರಾರ್ಥನಾ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರೇರಣಾ ಶಿಕ್ಷಣ ಸಮೂಹ ಸಂಸ್ಥೆ ಅಧ್ಯಕ್ಷ ಆರ್.ಡಿ. ಕುಲಕರ್ಣಿ ಸನ್ಮಾನಿಸಿದರು   

ಬಾಗಲಕೋಟೆ: 'ನೀವು ನಿಮ್ಮ ಭವಿಷ್ಯದ ಹೆಬ್ಬಾಗಿಲಿನಲ್ಲಿದ್ದೀರಿ. ಕಠಿಣ ಪರಿಶ್ರಮದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ’ ಎಂದು ಸಿಂದಗಿಯ ಪ್ರೇರಣಾ ಶಿಕ್ಷಣ ಸಮೂಹ ಸಂಸ್ಥೆ ಅಧ್ಯಕ್ಷ ಆರ್.ಡಿ. ಕುಲಕರ್ಣಿ ಹೇಳಿದರು.

ನಗರದ ಪ್ರಾರ್ಥನಾ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ನಿಸರ್ಗ ದಶಮಾನೋತ್ಸವ, ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮುಂದೆ ಅವಕಾಶಗಳು ಸಿಗದಿದ್ದಾಗ ವ್ಯಥೆ ಪಡುವ ಬದಲು, ಅಂತಹ ಪರಿಸ್ಥಿತಿ ಬಾರದಂತೆ ಈಗಿನಿಂದಲೇ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು’ ಎಂದರು.

‘ಸಮಾಜ ವಿಸ್ತಾರವಾಗಿದೆ. ಹಲವಾರು ಅವಕಾಶಗಳಿರುತ್ತವೆ. ಅವುಗಳನ್ನು ಬಳಸಿಕೊಳ್ಳಬೇಕು. 10 ವರ್ಷಗಳ ಹಿಂದೆ ಪಿಯುಸಿ ಅಧ್ಯಯನಕ್ಕೆ ದಕ್ಷಿಣ ಕರ್ನಾಟಕಕ್ಕೆ ಹೋಗಬೇಕಾಗಿತ್ತು. ಈಗ ಇಲ್ಲಿಯೇ ಅಂತಹ ಕಾಲೇಜುಗಳಿವೆ. ಪ್ರಾರ್ಥನಾ ಕಾಲೇಜಿನ ಸಾಧನೆ ಹೆಮ್ಮೆ ತಂದಿದೆ’ ಎಂದು ಹೇಳಿದರು.

ADVERTISEMENT

ನಿಸರ್ಗ ಎಜ್ಯುಕೇಶನಲ್‌ ಅಕಾಡೆಮಿ ಅಧ್ಯಕ್ಷ ಶ್ರೀನಿವಾಸ‌ಗೌಡ ಗೌಡರ ಮಾತನಾಡಿ, ‘ವಿದ್ಯಾರ್ಥಿಗಳ ಸಾಧನೆಯೇ ಕಾಲೇಜಿನ ಆಡಳಿತ ಮಂಡಳಿ ಹಾಗೂ ಉಪನ್ಯಾಸಕರಿಗೆ ಹೆಚ್ಚಿನ ಖುಷಿ ಕೊಡುತ್ತದೆ. 2015ರಲ್ಲಿ 170 ವಿದ್ಯಾರ್ಥಿಗಳಿಂದ ಆರಂಭವಾದ ಸಂಸ್ಥೆ ಈಗ ಬೆಳೆದು ಹೆಮ್ಮರವಾಗಿದೆ’ ಎಂದರು.

‘ಸಮಯ ವ್ಯರ್ಥ ಮಾಡದೇ ಸೌಲಭ್ಯ ಸದುಪಯೋಗ ಮಾಡಿಕೊಂಡು ಉತ್ತಮ ಫಲಿತಾಂಶ ಪಡೆಯಿರಿ. ಇದರಿಂದ ನಿಮ್ಮ ತಂದೆ–ತಾಯಿಗೆ ಸಂತಸವಾಗಲಿದೆ’ ಎಂದರು.

ಇದೇ ಸಂದರ್ಭದಲ್ಲಿ ಕಳೆದ ವರ್ಷ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕ್ರೀಡಾ ಚಟುವಟಿಕೆಗಳಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ನಿವೃತ್ತ ಬಿಡಿಒ ಆರ್.ಎಲ್. ಕಟಗೇರಿ, ಪತ್ರಕರ್ತ ಬಸವರಾಜ ಹವಾಲ್ದಾರ, ಶಿಕ್ಷಕ ಈರಣ್ಣ ಕೆಂಚನಗೌಡ್ರ, ಗೀತಾ ಶ್ರೀನಿವಾಸಗೌಡ, ಶಿಕ್ಷಕ ಮಹೇಂದ್ರಕರ,  ಪ್ರಾಚಾರ್ಯ ವಿಜಯಕುಮಾರ ಕುಲಕರ್ಣಿ, ದಾವಲ್‌ ಹುಲ್ಲಿಕೇರಿ, ದೇವರಾಜ ಲಮಾಣಿ, ಮಹೇಶ್ವರಿ ಯಂಡಿಗೇರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.