
ಬಾದಾಮಿ: ‘ಶಿಲಾರೋಹಣದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಮಾನಸಿಕ ಏಕಾಗ್ರತೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ’ ಎಂದು ಚಾಲುಕ್ಯ ಶಿಲಾರೋಹಣ ತರಬೇತಿದಾರ ರವಿ ವಡ್ಡರ ಹೇಳಿದರು.
ಚಾಲುಕ್ಯ ಶಿಲಾರೋಹಣ ತರಬೇತಿ ಸಂಸ್ಥೆ ಮತ್ತು ಎಸ್.ಬಿ. ಮಮದಾಪೂರ ಪದವಿ ಕಾಲೇಜಿನ ಆಶ್ರಯದಲ್ಲಿ ರಂಗನಾಥ ದೇವಾಲಯ ಸಮೀಪದ ಎತ್ತರದ ಬೆಟ್ಟದಲ್ಲಿ ಬುಧವಾರ ಹಗ್ಗದ ಸಹಾಯದಿಂದ ಬೆಟ್ಟವನ್ನೇರುವ ಸಾಹಸದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರಾಚಾರ್ಯ ಎ.ಎ. ತೋಪಲಕಟ್ಟಿ ಸಮಾರಂಭಕ್ಕೆ ಚಾಲನೆ ನೀಡಿ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಮತ್ತು ಏಕಾಗ್ರತೆ ಬರಲಿ ಎಂದು ಹೇಳಿದರು.
ಸಾಗರ ಕಾಟಾಪೂರ, ಹುಲಿಗೆಪ್ಪ ಅಸೂಟಿ, ಶಿವಶಂಕರ ವಡ್ಡರ, ಕೆನಡಾ ದೇಶದ ಜಾಕ್ ಮತ್ತು ಮಾರ್ಗನ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.
ಕಾಲೇಜಿನ 50 ಕ್ಕೂ ಅಧಿಕ ಎನ್.ಎಸ್.ಎಸ್ ಮತ್ತು ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿ/ವಿದ್ಯಾರ್ಥಿಯರು ಹಗ್ಗದ ಸಹಾಯದಿಂದ ಬೆಟ್ಟವನ್ನೇರಿ ಸಂಭ್ರಮಿಸಿದರು.
‘ಹಗ್ಗದ ಸಹಾಯದಿಂದ ಬೆಟ್ಟದ ಮೇಲೆ ಹತ್ತುವಾಗ ಆರಂಭದಲ್ಲಿ ಭಯವಾಯಿತು. ಹಾಗೆಯೇ ಮೇಲೆ ಮೇಲೆ ಏರುತ್ತ ಹೋದಂತೆ ಭಯನಿವಾರಣೆಯಾಗಿ ಆತ್ಮಸ್ಥೈರ್ಯ ಬಂದು ಬೆಟ್ಟವನ್ನು ಏರಿದೆ’ ಎಂದು ತ್ರಿವೇಣಿ ಹಿರೇಮಠ, ಸ್ಫೂರ್ತಿ ಬಡೇಸೂರ, ಮಹೇಶ ಕೆಂಗಾರ ಪ್ರತಿಕ್ರಿಯಿಸಿದರು.
ಕಾಲೇಜಿನ ಸ್ಕೌಟ್ ಮತ್ತು ಗೈಡ್ ಅಧಿಕಾರಿ ಮುಕುಂದರ ದೊಡ್ಡಮನಿ, ಎನ್.ಎಸ್.ಎಸ್. ಅಧಿಕಾರಿ ಬಿ.ಕೆ. ಕಟ್ಟಿಮನಿ, ಪ್ರಾಧ್ಯಾಪಕರಾದ ಎಸ್.ಎಚ್. ಸಂಕನಗೌಡರ, ಎಸ್.ಆರ್. ಮಾಳಗಿ, ಬಿ.ಸಿ. ಪೂಜಾರ, ಲಿಂಗರಾಜ ಮಟ್ಯಾಳ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.