ಬಾದಾಮಿ: ‘ಸೂಫಿ ಸಂತರು, ಶರಣರು ಮತ್ತು ದಾರ್ಶನಿಕರ ಬದುಕು ಸೌಹಾರ್ದಮಯವಾಗಿತ್ತು. ಅವರು ತಮ್ಮ ತಪಸ್ಸಿನ ಶಕ್ತಿಯ ಮೂಲಕ ಜನರ ಸಂಕಷ್ಟಗಳಿಗೆ ಪರಿಹಾರ ನೀಡಿ ಸಾಮಾಜಿಕ ಸೇವೆ ಮಾಡಿದರು’ ಎಂದು ಭೈರನಹಟ್ಟಿ ದೊರೆಸ್ವಾಮಿ ಮಠದ ಶಾಂತಲಿಂಗ ಸ್ವಾಮೀಜಿ ಹೇಳಿದರು.
ಇಲ್ಲಿನ ಉತ್ತರ ಬೆಟ್ಟದಲ್ಲಿ ಹಜರತ್ ಸೈಯದ್ ಸಾದಾತ ದರ್ಗಾ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಗುರುವಾರ ನಡೆದ ಹಜರತ್ ಸೈಯದ್ ಬಾದಷಾ ಉರುಸು ಮತ್ತು ಶರಣ ಶಿವಪ್ಪಯ್ಯಜ್ಜನ ಆರಾಧನಾ ಮಹೋತ್ಸವದಲ್ಲಿ ಅವರು ಮಾತನಾಡಿದರು.
‘16ನೇ ಶತಮಾನದಲ್ಲಿ ಸೈಯದ್ ಬಾದಷಾ ಮತ್ತು ಶರಣ ಶಿವಪ್ಪಯ್ಯ ಸಮಕಾಲಿನ ಶರಣರಾಗಿದ್ದರು. ಸಮಾಜ ಸೇವೆಗೆ ತಮ್ಮ ಬದುಕನ್ನು ಮುಡಿಪಾಗಿಟ್ಟರು’ ಎಂದು ವಿಜಯಪುರ ಆಲಿಅಲಿ ದರ್ಗಾದ ಹಜರತ್ ಸೈಯದ್ ಮಹ್ಮದ್ ಗೇಸುದರಾಜ್ ಹುಸೇನಿ ತಿಳಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಹಿಂದೂ-ಮುಸಲ್ಮಾನ ಭಕ್ತರು ಹಜರತ್ ಸೈಯದ್ ಬಾದಷಾ ದರ್ಗಾ ಮತ್ತು ಶಿವಪ್ಪಯ್ಯಜ್ಜನ ಗದ್ದುಗೆಗೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು.
ಶರಣಬಸವ ಸ್ವಾಮೀಜಿ, ಶಿವಪೂಜಾ ಸ್ವಾಮೀಜಿ, ಮಂಜುನಾಥ ಸ್ವಾಮೀಜಿ, ಸೈಯದ್ ಮುಬಾರಕ ಬಾದಷಾ, ದಸ್ತಗೀರ ಮುಲ್ಲಾ, ಪುರಸಭೆ ಅಧ್ಯಕ್ಷ ಪಾಂಡಪ್ಪ ಕಟ್ಟಿಮನಿ, ಮಹೇಶ ಹೊಸಗೌಡ್ರ, ಮಂಜು ಹೊಸಮನಿ, ಆರ್.ಎಫ್. ಬಾಗವಾನ, ಜಮೀಲ ನಾಯಕ, ರಾಚಪ್ಪ ಪಟ್ಟಣದ ಮೆಹಬೂಬಸಾಬ್ ಮುಲ್ಲಾ, ಎಂ.ಐ. ಬಾರಾವಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.