ADVERTISEMENT

ಬಾಗಲಕೋಟೆ | ಸಕ್ಕರೆ ಕಾರ್ಖಾನೆ ಆರಂಭ: ರೈತರು ನಿರಾಳ

ಕೂಲಿಕಾರರಿಗೆ, ಟ್ರ್ಯಾಕ್ಟರ್‌ಗಳ ಮಾಲೀಕರಿಗೆ ಕೈತುಂಬಾ ಕೆಲಸ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 2:20 IST
Last Updated 16 ನವೆಂಬರ್ 2025, 2:20 IST
ಬಾಗಲಕೋಟೆ ಜಿಲ್ಲೆಯ ಗೋದಾವರಿ ಸಕ್ಕರೆ ಕಾರ್ಖಾನೆ ಮುಂದೆ ಟ್ರ್ಯಾಕ್ಟರ್‌ಗಳು ಸಾಲುಗಟ್ಟಿ ನಿಂತಿರುವುದು
ಬಾಗಲಕೋಟೆ ಜಿಲ್ಲೆಯ ಗೋದಾವರಿ ಸಕ್ಕರೆ ಕಾರ್ಖಾನೆ ಮುಂದೆ ಟ್ರ್ಯಾಕ್ಟರ್‌ಗಳು ಸಾಲುಗಟ್ಟಿ ನಿಂತಿರುವುದು   

ಬಾಗಲಕೋಟೆ: ವಿಳಂಬವಾಗಿಯಾದರೂ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವುದನ್ನು ಆರಂಭಿಸಿರುವುದು ಕಬ್ಬು ಬೆಳೆದು ಕಟಾವಿಗಾಗಿ ಕಾಯುತ್ತಿದ್ದ ರೈತರನ್ನು ನಿರಾಳರನ್ನಾಗಿಸಿದೆ.

ಅ.20ರಿಂದ ಜಿಲ್ಲೆಯಲ್ಲಿನ 14 ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವಿಕೆ ಆರಂಭಿಸಬೇಕಿತ್ತು. ಬೆಳಗಾವಿ ಜಿಲ್ಲೆಯಲ್ಲಿ ಕಬ್ಬಿನ ಬೆಲೆ ನಿಗದಿಗಾಗಿ ಹೋರಾಟ ತೀವ್ರಗೊಂಡಿದ್ದರಿಂದ ಕಾರ್ಖಾನೆಗಳ ಆರಂಭ ವಿಳಂಬವಾಗಿತ್ತು. ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಬೆಲೆ ಘೋಷಣೆ ಮಾಡಿದ ಮೇಲೆ ರೈತರು ನಿರಾಳವಾಗಿದ್ದರು.

ಜಿಲ್ಲೆಯಲ್ಲಿನ ಕಾರ್ಖಾನೆಗಳನ್ನು ಆರಂಭಿಸಬೇಕು ಎನ್ನುವಾಗಲೇ ಮುಧೋಳದಲ್ಲಿ ರೈತರು ಪ್ರತಿ ಟನ್ ಕಬ್ಬಿಗೆ ₹3,500 ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಆರಂಭಿಸಿದರು. ಬೆಲೆ ನಿಗದಿಯಾಗುವವರೆಗೆ ಕಾರ್ಖಾನೆಗಳನ್ನು ಆರಂಭಿಸುವಂತಿಲ್ಲ ಎಂದು ಪಟ್ಟು ಹಿಡಿದರು.

ADVERTISEMENT

ಆರಂಭವಾಗಿದ್ದ ಇಐಡಿ ಪ್ಯಾರಿ, ಮೆಲ್‌ಬ್ರೊ ಕಾರ್ಖಾನೆಗಳನ್ನು ಬಂದ್ ಮಾಡಲಾಯಿತು. ಅಷ್ಟೊತ್ತಿಗಾಗಲೇ ಕಬ್ಬು ಕಟಾವು ಆರಂಭಿಸಿದ್ದ ರೈತರು ಇಕ್ಕಟ್ಟಿಗೆ ಸಿಲುಕಿದರು. ಮಹಾರಾಷ್ಟ್ರ ಹಾಗೂ ರಾಜ್ಯದ ವಿವಿಧೆಡೆಯಿಂದ ಕಬ್ಬು ಗ್ಯಾಂಗ್‌ ಕರೆಯಿಸಿದ್ದವರೂ ಸಂಕಷ್ಟಕ್ಕೆ ಸಿಲುಕಿದರು. ಸಾವಿರಾರು ಕಾರ್ಮಿಕರು ಕೆಲಸವಿಲ್ಲದೇ ಹೊಲಗಳಲ್ಲಿ ಕೈಕಟ್ಟಿ ಕುಳಿತುಕೊಳ್ಳುವಂತಾಯಿತು. 

ಟ್ರ್ಯಾಕ್ಟರ್‌, ಲಾರಿಗಳಿಗೆ ಕಬ್ಬು ಸಾಗಿಸುವ ಕೆಲಸ ಸಿಗಲಿದೆ ಎಂದು ಕಾದು ಕುಳಿತಿದ್ದ ಅವುಗಳ ಮಾಲೀಕರೂ ಕಾಯ್ದುಕೊಂಡು ಕೂಡಬೇಕಾಯಿತು. ದಿನಗಳು ಹೆಚ್ಚುತ್ತಾ ಹೋದಂತೆ ರೈತರ ಚಡಪಡಿಕೆ ಹೆಚ್ಚಾಗಿತ್ತು. ಬಾಗಲಕೋಟೆ, ಬಾದಾಮಿ ಭಾಗದ ಕಾರ್ಖಾನೆಗಳು ಆರಂಭವಾಗಿದ್ದು ಮುಧೋಳ, ಜಮಖಂಡಿ, ಬೀಳಗಿ ಭಾಗದ ರೈತರು ಸಂಕಷ್ಟ ಮತ್ತಷ್ಟು ಹೆಚ್ಚಿಸಿತ್ತು. ತಮ್ಮ ಕಬ್ಬು ಕಟಾವು ಆರಂಭವಾಗುವುದು ಯಾವಾಗ ಎಂಬ ಪ್ರಶ್ನೆ ಅವರನ್ನು ಕಾಡುತ್ತಿತ್ತು. ಕೆಲವರು ಹೊರ ಜಿಲ್ಲೆಗಳಿಗೆ ಕಬ್ಬು ಸಾಗಿಸಲು ಆರಂಭಿಸಿದ್ದರು.

ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆಯಲ್ಲಿ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ ಮೇಲೆ ಮತ್ತಷ್ಟು ಆತಂಕಗೊಂಡಿದ್ದರು. ಮುಂದಿನ ದಿನಗಳಲ್ಲಿ ಕಬ್ಬು ಕಟಾವು ಹೇಗೆ ಎಂಬ ಆತಂಕ ಅವರನ್ನು ಆವರಿಸಿತ್ತು.

ಜಿಲ್ಲಾ ಉಸ್ತುವಾರಿ ಸಚಿವರ ಮಧ್ಯಸ್ಥಿಕೆಯಲ್ಲಿ ನಡೆದ ಸಂಧಾನ ಯಶಸ್ವಿಯಾದಾಗ ಹೊಲದಲ್ಲಿ ಕಬ್ಬು ಹೊಂದಿದ್ದ ರೈತರು ನಿರಾಳರಾಗಿದ್ದಾರೆ. ಜಿಲ್ಲೆಯ 14 ಸಕ್ಕರೆ ಕಾರ್ಖಾನೆಗಳೂ ಕಬ್ಬು ಅರೆಯುವಿಕೆ ಆರಂಭಿಸಿವೆ. 1.4 ಲಕ್ಷ ಟನ್‌ ನಷ್ಟು ಕಬ್ಬು ನುರಿಸಲಾಗಿದೆ.

14 ಸಕ್ಕರೆ ಕಾರ್ಖಾನೆಗಳೂ ಆರಂಭ 1.4 ಲಕ್ಷ ಟನ್‌ ಕಬ್ಬು ನುರಿಕೆ ರೈತರಲ್ಲಿ ಮನೆಮಾಡಿದ ಸಂಭ್ರಮ

ಸಕ್ಕರೆ ಕಾರ್ಖಾನೆಗಳು ಆರಂಭವಾಗಿರುವುದು ಸಂತಸ ತಂದಿದೆ. ವರ್ಷದ ದುಡಿಮೆಯ ಫಲ ಸಿಗುವ ಕಾಲ ಇದಾಗಿದೆ
ಸಿದ್ದಪ್ಪ ಯಂಕಣ್ಣವರ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.