ADVERTISEMENT

ಇಳಕಲ್ ದಲಿತ ಬಾಲಕ ಅನುಮಾನಾಸ್ಪದ ಸಾವು: ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 3:00 IST
Last Updated 7 ನವೆಂಬರ್ 2025, 3:00 IST
ಇಳಕಲ್ ಸಮೀಪದ ತುಂಬ ಗ್ರಾಮದ 14 ವರ್ಷದ ಬಾಲಕ ಪ್ರಜ್ವಲ್ ಹೊಸಮನಿಯ ಅನುಮಾನಾಸ್ಪದ ಸಾವಿನ ತನಿಖೆಗೆ ಆಗ್ರಹಿಸಿ ನಗರದಲ್ಲಿ ಪ್ರತಿಭಟನೆ ನಡೆಯಿತು
ಇಳಕಲ್ ಸಮೀಪದ ತುಂಬ ಗ್ರಾಮದ 14 ವರ್ಷದ ಬಾಲಕ ಪ್ರಜ್ವಲ್ ಹೊಸಮನಿಯ ಅನುಮಾನಾಸ್ಪದ ಸಾವಿನ ತನಿಖೆಗೆ ಆಗ್ರಹಿಸಿ ನಗರದಲ್ಲಿ ಪ್ರತಿಭಟನೆ ನಡೆಯಿತು   

ಇಳಕಲ್: ತಾಲ್ಲೂಕಿನ ತುಂಬ ಗ್ರಾಮದಲ್ಲಿ ಈಚೆಗೆ 14 ವರ್ಷದ ದಲಿತ ಬಾಲಕ ಅನುಮಾನಾಸ್ಪದ ಸಾವನ್ನಪ್ಪಿದ್ದು, ಈ ಬಗ್ಗೆ ತನಿಖೆಗೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ಭೀಮ್ ಆರ್ಮಿ ಸಂವಿಧಾನ ರಕ್ಷಕ ದಳದಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.

ಕಂಠಿ ವೃತ್ತದಿಂದ ತಹಶೀಲ್ದಾರ್ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಪ್ರತಿಭಟನಾಕಾರರು ಭಿತ್ತಿ ಪತ್ರ ಹಿಡಿದು, ಹಲಗೆ ಬಾರಿಸಿ, ತನಿಖೆಗೆ ಆಗ್ರಹಿಸಿದರು.

ಇಳಕಲ್ ತಾಲ್ಲೂಕಿನ ತುಂಬ ಗ್ರಾಮದ ಪ್ರಜ್ವಲ್ ಹೊಸಮನಿ (ಮಾದರ) ಎಂಬ ಬಾಲಕ ಅಕ್ಟೋಬರ್ 20ರಂದು ಗೋಪಶ್ಯಾನಿ ಗ್ರಾಮದ ಮುಂದಿನ ಹಿರೇಹಳ್ಳದಲ್ಲಿ ಅಕ್ರಮ ಮರಳು ಗಣಿಗಾರಿಕೆಯಿಂದ ಉಂಟಾಗದ ಕಂದಕದಲ್ಲಿ ಸಂಗ್ರಹವಾಗಿದ್ದ ನೀರಿನಲ್ಲಿ ಶವವಾಗಿ ಪತ್ತೆಯಾಗಿದ್ದ. ಬಾಲಕನ ತಂದೆ ಮಗನ ಸಾವು ಅನುಮಾನಾಸ್ಪದವಾಗಿದ್ದು, ಗ್ರಾಮದ ಕೆಲವರ ವಿರುದ್ಧ ದೂರು ನೀಡಿದ್ದರು.

ADVERTISEMENT

ಈ ಸಾವಿನ ಪ್ರಕರಣದಲ್ಲಿ ಸಾಕ್ಷಾಧಾರಗಳು ಮತ್ತು ಸ್ಥಳೀಯರ ಹೇಳಿಕೆಗಳಿದ್ದರೂ ಆರೋಪಿಗಳು ಮುಕ್ತವಾಗಿ ಸಂಚರಿಸುತ್ತಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಸಾಕ್ಷಿಗಳನ್ನು ಪ್ರಭಾವಿಸಲು ಅಥವಾ ನಾಶ ಪಡಿಸಲು ಸಾಧ್ಯತೆ ಇದೆ. ಪೊಲೀಸರು ತನಿಖೆ ಮಾಡಿ, ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಡಾ. ಮಲಕಪ್ಪ ಬಾಗೇವಾಡಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ನಗರದ ದಲಿತ ಮುಖಂಡರು, ಯುವಕರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.