ADVERTISEMENT

ಆಡಳಿತ ಸುಧಾರಣೆಗೆ ಕ್ರಮ ಕೈಗೊಳ್ಳಿ: ದೇವೀಂದ್ರ ಧನಪಾಲ ಸೂಚನೆ

ಪ.ಪಂ ಮುಖ್ಯಾಧಿಕಾರಿ ದೇವೀಂದ್ರ ಧನಪಾಲ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 4:12 IST
Last Updated 26 ಸೆಪ್ಟೆಂಬರ್ 2025, 4:12 IST
ಬೀಳಗಿ ಪಟ್ಟಣ ಪಂಚಾಯತಿ ಸಭಾಭವನದಲ್ಲಿ ಗುರುವಾರ ಏರ್ಪಡಿಸಿದ ಸಾಮಾನ್ಯ ಸಭೆಯಲ್ಲಿ ಮುಖ್ಯಾಧಿಕಾರಿ ದೇವೀಂದ್ರ ಧನಪಾಲ ಮಾತನಾಡಿದರು.
ಬೀಳಗಿ ಪಟ್ಟಣ ಪಂಚಾಯತಿ ಸಭಾಭವನದಲ್ಲಿ ಗುರುವಾರ ಏರ್ಪಡಿಸಿದ ಸಾಮಾನ್ಯ ಸಭೆಯಲ್ಲಿ ಮುಖ್ಯಾಧಿಕಾರಿ ದೇವೀಂದ್ರ ಧನಪಾಲ ಮಾತನಾಡಿದರು.   

ಬೀಳಗಿ: ‘ಪಟ್ಟಣದ ಅಭಿವೃದ್ಧಿ ಸೇರಿದಂತೆ ಜನರಿಗೆ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಸಿಬ್ಬಂದಿ ಜನರೊಂದಿಗೆ ಸ್ಪಂದಿಸಿ ಕೆಲಸ ಮಾಡಬೇಕು. ಕೆಲವು ಸಿಬ್ಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ ಕೂಡಲೇ ಅಂತಹ ಸಿಬ್ಬಂದಿಗೆ ತಿಳಿ ಹೇಳಿ ಆಡಳಿತದಲ್ಲಿ ಸುಧಾರಣೆ ತನ್ನಿ’ ಎಂದು ಪಟ್ಟಣ ಪಂಚಾಯಿತಿ ನಾಮನಿರ್ದೇಶಿತ ಸದಸ್ಯ ಬಸವರಾಜ ಹಳ್ಳದಮನಿ ಸಲಹೆ ನೀಡಿದರು.

ಇಲ್ಲಿನ ಪಟ್ಟಣ ಪಂಚಾಯತಿ ಸಭಾಭವನದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ನೀರು ಸರಬುರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು ಕೂಡಲೇ ಸರಿಪಡಿಸಿ, ಕಸವಿಲೇವಾರಿ ಘಟಕದಲ್ಲಿನ ಗೊಬ್ಬರ ತಯಾರಿಕಾ ಯಂತ್ರ ದುರಸ್ತಿ ಏಕೆ ಮಾಡಿಲ್ಲ?’ ಎಂದು ಪ್ರಶ್ನಿಸಿದರು.

‘ಲಕ್ಷಾಂತರ ಹಣ ವೆಚ್ಚದ ಈ ಯೋಜನೆಗೆ ಕ್ರಮಬೇಕಿದೆ, ಪಟ್ಟಣದಲ್ಲಿನ ಕೆಲ ಎನ್.ಎ ಲೇಔಟ್‌ಗಳಲ್ಲಿ ಮೂಲ ಸೌಲಭ್ಯಗಳು, ಉದ್ಯಾನ ಜಾಗ ಇಲ್ಲ. ಅಂತಹ ಲೇಔಟಗಳ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳಬೇಕು’ ಎಂದು ಸಭೆಯ ಗಮನಕ್ಕೆ ತಂದರು.

ADVERTISEMENT

ಎಲ್ಲ ವಿಷಯಗಳ ಕುರಿತು ಮಾಹಿತಿ ನೀಡಿದ ಮುಖ್ಯಾಧಿಕಾರಿ ದೇವೀಂದ್ರ ಧನಪಾಲ, ಸಿಬ್ಬಂದಿಗೆ ಈಗಾಗಲೇ ಕೆಲಸದ ಮಾಹಿತಿ ನೀಡಿದ್ದೇವೆ. ಜೊತೆಗೆ ಕೆಲವು ಸಿಬ್ಬಂದಿಯನ್ನು ಬೇರೆ ವಿಭಾಗಗಳ ಕೆಲಸಗಳಲ್ಲಿ ತೊಡಗಿಸಿ ಮೂಲಸೌಕರ್ಯ ಒದಗಿಸುವ ವಿಭಾಗಕ್ಕೆ ಹೆಚ್ಚುವರಿ ಸಿಬ್ಬಂದಿ ನೇಮಿಸಲಾಗುವುದು ಎಂದರು.

ಹಣಕಾಸು, ವಿವಿಧ ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆ ಸೇರಿದಂತೆ ಶೌಚಾಲಯ, ಸ್ವಚ್ಛತೆಯ ಕುರಿತಾಗಿ ಮತ್ತು ಹೊಸ ಕಾಮಗಾರಿಗಳು ಪ್ರಗತಿ ಕುರಿತಾಗಿ ಚರ್ಚೆ ಮಾಡಲಾಯಿತು.

ಇಂದಿರಾ ಕ್ಯಾಂಟೀನ್ ಆಹಾರದ ಗುಣಮಟ್ಟ ಪರೀಶಿಲಿಸಲು ಸಿದ್ದು ಮಾದರ, ಬಸವರಾಜ ಹಳ್ಳದಮನಿ, ಎಸ್.ಐ. ರವೀಂದ್ರ ತಳಕೇರಿಗೆ ಸೂಚಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಮುತ್ತು ಬೋರ್ಜಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯರಾದ ಪಡಿಯಪ್ಪ ಕರಿಗಾರ, ಸಿದ್ದು ಮಾದರ, ಹುಚ್ಚಪ್ಪ ಕೌಜಲಗಿ, ಪರಶುರಾಮ ಮಮದಾಪೂರ, ರಾಜು ಬೊರ್ಜಿ, ಸಿದ್ದಲಿಂಗೇಶ ನಾಗರಾಳ, ಕಾಮೇಶ ದಂಧರಗಿ, ಅಜ್ಜು ಭಾಯಿಸರಕಾರ, ವಾಚಮೇಕರ, ಮುತ್ತವ್ವ ಗಾಣಿಗೇರ, ಬಾಗವಾನ, ಮೀನಾಕ್ಷಿ ಕೊತ್ತಲಮಠ, ಬೊರವ್ವ ಮೇಟಿ ಇದ್ದರು.

ವಕ್ಫ್ ಹೆಸರು ತೆಗೆಯಿರಿ

ಸಭೆಯಲ್ಲಿ ಹುಸೇನಪೀರ್ ದರ್ಗಾ ಕುಂಬಾರ ಓಣಿ ಆಸ್ತಿಯಲ್ಲಿ ಅಳತೆ ಕಾಲಂನಲ್ಲಿ ಅಳತೆಯ ಜೊತೆಗೆ ವಕ್ಫ್ ಹೆಸರು ನಮೂದು ಆಗಿದ್ದು ಕೂಡಲೇ ಅದನ್ನು ತೆಗೆಯಬೇಕು ಎಂದು ಕುಂಬಾರ ಓಣಿ ಹಿರಿಯರು ಸಭೆಗೆ ಆಗಮಿಸಿ ವಿಷಯ ತಿಳಿಸಿದರು. ಮಧ್ಯಪ್ರವೇಶಿಸಿದ ಪಟ್ಟಣ ಪಂಚಾಯತಿ ಸರ್ವ ಸದಸ್ಯರು ನಾವೆಲ್ಲರು ವಕ್ಫ್ ಹೆಸರು ತೆಗೆಯಲು ಠರಾವು ಪಾಸು ಮಾಡಿ ಉತಾರೆಯಲ್ಲಿ (ಪಹಣಿ) ಹೆಸರು ತೆಗೆದು ಹಾಕುವ ಕೆಲಸ ಮಾಡುತ್ತೇವೆ ಎಂದರು. ಮುಖ್ಯಾಧಿಕಾರಿ ಧನಪಾಲ ಸದಸ್ಯರು ಹೇಳಿದಂತೆ ಠರಾವು ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.