ADVERTISEMENT

ಬಾಗಲಕೋಟೆ: ಟೇಕಿನಮಠ ಶ್ರೀಗಳ ಪಟ್ಟಾಧಿಕಾರ ಮಹೋತ್ಸವ ಫೆ.8ಕ್ಕೆ

ಸಮಿತಿ ಪೂರ್ವಭಾವಿ ಸಭೆಯಲ್ಲಿ ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ನಿರ್ಣಯ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 6:01 IST
Last Updated 26 ನವೆಂಬರ್ 2025, 6:01 IST
ಬಾಗಲಕೋಟೆಯಲ್ಲಿ ಮಂಗಳವಾರ ನಡೆದ ಟೇಕಿನಮಠದ ನೂತನ ಶ್ರೀಗಳ ಪಟ್ಟಾಧಿಕಾರಿ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಚರಂತಿಮಠದ ಪ್ರಭು ಸ್ವಾಮೀಜಿ ಮಾತನಾಡಿದರು
ಬಾಗಲಕೋಟೆಯಲ್ಲಿ ಮಂಗಳವಾರ ನಡೆದ ಟೇಕಿನಮಠದ ನೂತನ ಶ್ರೀಗಳ ಪಟ್ಟಾಧಿಕಾರಿ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಚರಂತಿಮಠದ ಪ್ರಭು ಸ್ವಾಮೀಜಿ ಮಾತನಾಡಿದರು   

ಬಾಗಲಕೋಟೆ: ‘ನಗರದ ಐತಿಹಾಸಿಕ ಟೇಕಿನಮಠ (ಟೆಂಗಿನ ಮಠ) ನೂತನ ಶ್ರೀಗಳ ಪಟ್ಟಾಧಿಕಾರ ಮಹೋತ್ಸವವನ್ನು 2026ರ ಫೆ.8ರಂದು ಅದ್ದೂರಿಯಾಗಿ ನಡೆಸಲಾಗುವುದು’ ಎಂದು ಚರಂತಿಮಠದ ಪ್ರಭು ಸ್ವಾಮೀಜಿ ಹೇಳಿದರು.

ಟೇಕಿನಮಠದಲ್ಲಿ ಮಂಗಳವಾರ ನಡೆದ ಪಟ್ಟಾಧಿಕಾರ ಮಹೋತ್ಸವ ಸಮಿತಿ ಪೂರ್ವಭಾವಿ ಸಭೆಯ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ‘ಟೇಕಿನಮಠವು ಐತಿಹಾಸಿಕ ಪುರಾತನ ಮಠವಾಗಿದ್ದು, ಈಗ ಮಠದ ಪೀಠಕ್ಕೆ ಮಲ್ಲಿಕಾರ್ಜುನ ದೇವರು ನೂತನ ಶ್ರೀಗಳಾಗಲಿದ್ದು, ಎರಡು ದಿನ ಮೊದಲು ಮಠದಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆಯಲಿವೆ’ ಎಂದರು.

ಪಟ್ಟಾಧಿಕಾರದ ಪೂರ್ವಭಾವಿಯಾಗಿ ಜ.16ರಿಂದ ಮಠದ ಆವರಣದಲ್ಲಿ ಹಾನಗಲ್ ಕುಮಾರಸ್ವಾಮಿಗಳ ಪುರಾಣ ಪ್ರಾರಂಭಿಸಲಾಗುವುದು, ಪೆ.6 ಮತ್ತು 7 ರೇವಣಸಿದ್ಧ ಸ್ವಾಮಿಗಳ ಪುಣ್ಯಸ್ಮರಣೆ ದಶಮಾನೋತ್ಸವ, 8ರಂದು ಮಲ್ಲಿಕಾರ್ಜುನ ದೇವರ ಪಟ್ಟಾಧಿಕಾರ ಮಹೋತ್ಸವ ನಡೆಸಲಾಗುವುದು ಎಂದು ತಿಳಿಸಿದರು.

ADVERTISEMENT

ಗುಳೇದಗುಡ್ಡದ ಒಪ್ಪತ್ತೇಶ್ವರಮಠದ ಒಪ್ಪತ್ತೇಶ್ವರ ಸ್ವಾಮೀಜಿ ಮಾತನಾಡಿ, ಬೀಳೂರ ಗುರುಬಸವ ಸ್ವಾಮೀಜಿಗಳೊಡನೆ ಟೇಕಿನಮಠದ ಮಲ್ಲಿಕಾರ್ಜುನ ಸ್ವಾಮೀಜಿಗಳು ಬಿವಿವಿ ಸಂಘ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪಟ್ಟಾಧಿಕಾರ ಮಹೋತ್ಸವದ ರೂಪುರೇಷಗಳ ಬಗ್ಗೆ ತಿಳಿಸಿದರು.

ಕಮತಗಿ ಹೊಳೆಹುಚ್ಚೇಶ್ವರ ಸಂಸ್ಥಾನಮಠ ಹೊಳೆಹುಚ್ಚೇಶ್ವರ ಸ್ವಾಮೀಜಿ ಮಾತನಾಡಿ, ಸಮಾರಂಭದ ವಿವಿಧ ಸಮಿತಿಗಳ ಕಾರ್ಯನಿರ್ವಹಣೆ, ಯೋಜನೆಯ ಬಗ್ಗೆ ವಿವರಿಸಿದರು.

ಬಿ.ವಿ.ವಿ. ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಮಾತನಾಡಿ, ‘ಈ ಭಾಗದಲ್ಲಿ ಅನ್ನದಾಸೋಹ ಹಾಗೂ ಜ್ಞಾನದಾಸೋಹದ ಮೂಲಕ ಸಮಾಜಕ್ಕೆ ಬೆಳಕು ಚೆಲ್ಲುವಲ್ಲಿ ಬಹುದೊಡ್ಡ ಪಾತ್ರವನ್ನು ಈ ಮಠ ಹೊಂದಿದೆ. ನೂತನ ಶ್ರೀಗಳ ಪಟ್ಟಾಧಿಕಾರ ಮಹೋತ್ಸವ ಐತಿಹಾಸಿಕ ದಾಖಲೆಯಾಗಿ ಉಳಿಯುವಂತೆ ಎಲ್ಲರೂ ಸೇರಿ ಯಶಸ್ವಿ ಮಾಡೋಣ’ ಎಂದರು.

ಗುಳೇದಗುಡ್ಡದ ಅಮರೇಶ್ವರ ಮಠದ ನೀಲಕಂಠ ಶಿವಾಚಾರ್ಯ ಸ್ವಾಮೀಜಿ, ಬೀಳಗಿ ಕಲ್ಮಠದ ಗುರುಪಾದ ಶಿವಾಚಾರ್ಯ ಸ್ವಾಮೀಜಿ, ಮಲ್ಲಿಕಾರ್ಜುನ ದೇವರು ಸಾನ್ನಿಧ್ಯ ವಹಿಸಿದ್ದರು.

ಅಖಿಲ ಭಾರತ ವೀಶಶೈವ ಮಹಾಸಭಾ ಜಿಲ್ಲಾ ಅಧ್ಯಕ್ಷ ಜಿ.ಎನ್.ಪಾಟಿಲ, ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಗುರುಬಸವ ಸೂಳಿಬಾವಿ, ಅಶೋಕ ಸಜ್ಜನ, ಕುಮಾರಸ್ವಾಮಿ ಹಿರೇಮಠ, ಮಹಾಂತೇಶ ಶೆಟ್ಟರ್, ಬಸವರಾಜ ಭಗವತಿ, ಎ.ಎಸ್.ಪಾವಟೆ, ಬಸವರಾಜ ಮುಕ್ಕುಪ್ಪಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.