ADVERTISEMENT

ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಿ: ಶಿರೂರ ಸಿದ್ಧಲಿಂಗ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 3:01 IST
Last Updated 1 ಡಿಸೆಂಬರ್ 2025, 3:01 IST
ರಾಂಪುರ ಸಮೀಪದ ಶಿರೂರನಲ್ಲಿ ಜರುಗಿದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ತಹಶೀಲ್ದಾರ್ ವಾಸುದೇವ ಸ್ವಾಮಿ ಉದ್ಘಾಟಿಸಿದರು
ರಾಂಪುರ ಸಮೀಪದ ಶಿರೂರನಲ್ಲಿ ಜರುಗಿದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ತಹಶೀಲ್ದಾರ್ ವಾಸುದೇವ ಸ್ವಾಮಿ ಉದ್ಘಾಟಿಸಿದರು   

ರಾಂಪುರ: ‘ಸಂಸ್ಕಾರಯುತ ಜೀವನ ವ್ಯಕ್ತಿಯ ಬದುಕನ್ನು ಪಾವನಗೊಳಿಸುತ್ತದೆ’ ಎಂದು ಶಿರೂರ ಶಿವಯೋಗಾಶ್ರಮದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ, ತಾಲ್ಲೂಕು ಹಾಗೂ ಶಿರೂರ ವಲಯ ಘಟಕ ಮತ್ತು ಗ್ರಾಮೀಣ ಕಲೆ ಹಾಗೂ ಸಾಹಿತ್ಯ ವೇದಿಕೆಯ ಸಹಯೋಗದಲ್ಲಿ ಶನಿವಾರ ಶಿರೂರಿನಲ್ಲಿ ಜರುಗಿದ ದಿ.ಬಸವಲಿಂಗಪ್ಪ ನಡುವಿನಮನಿ ಹಾಗೂ ದಿ.ಶಂಕ್ರಮ್ಮ ನಡುವಿನಮನಿ ದತ್ತಿ ಉಪನ್ಯಾಸ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆ ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ಕಲಿಸಿ ಅವರ ಬದುಕನ್ನು ಬೆಳಗಿಸಬೇಕು. ದಿ.ಬಸವಲಿಂಗಪ್ಪ ನಡುವಿನಮನಿ ಶಿಕ್ಷಕರು ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣದ ಜೊತೆ ಸಂಸ್ಕಾರಯುತ ಜೀವನದ ಪಾಠ ಕಲಿಸಿದ್ದರಿಂದಲೇ ಇಂದಿಗೂ ಅವರು ಸ್ಮರಣೆಯಲ್ಲಿದ್ದಾರೆ. ಅವರ ಜೀವನ ಎಲ್ಲರಿಗೂ ಆದರ್ಶ’ ಎಂದು ಹೇಳಿದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿದ ಬಾಗಲಕೋಟೆ ತಹಶೀಲ್ದಾರ್ ವಾಸುದೇವ ಸ್ವಾಮಿ, ‘ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಕಾರ್ಯಕ್ರಮಗಳ ಮೂಲಕ ಆದರ್ಶ ವ್ಯಕ್ತಿಗಳನ್ನು ಸ್ಮರಣೆ ಮಾಡುವ ಕೆಲಸ ಶ್ಲಾಘನೀಯ’ ಎಂದರು.

‘ಜನಪದ ಸಾಹಿತ್ಯದಲ್ಲಿ ಸಾಮಾಜಿಕ ಮೌಲ್ಯಗಳು’ ಕುರಿತು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಚಂದ್ರಶೇಖರ ಕಾಳನ್ನವರ ಉಪನ್ಯಾಸ ನೀಡಿದರು.

ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಶಿಕ್ಷಣಾಧಿಕಾರಿ ಎಚ್.ಜಿ.ಮಿರ್ಜಿ ಅಧ್ಯಕ್ಷತೆ ವಹಿಸಿದ್ದರು. ಕೆ.ಎಸ್.ಆರ್.ಟಿ.ಸಿ ನಿವೃತ್ತ ಸಾರಿಗೆ ನಿಯಂತ್ರಕ ಭೀಮಪ್ಪ ಕಮ್ಮಾರ, ವಿಶ್ರಾಂತ ಪ್ರಾಚಾರ್ಯ ಸದಾಶಿವ ಸೂಳಿಭಾವಿ ಅವರನ್ನು ಸನ್ಮಾನಿಸಲಾಯಿತು. 7ನೇ ತರಗತಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪತ್ರ ನೀಡಲಾಯಿತು.

ಗುಳೇದಗುಡ್ಡ ಒಪ್ಪತ್ತೇಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಹುನಗುಂದ ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೇದಾರ, ವಿಜ್ಞಾನ ವಿಷಯ ಪರಿವೀಕ್ಷಕ ಎಂ.ಎಸ್.ನ್ಯಾಮಗೌಡ, ಮುತ್ತಣ್ಣ ಹಿಪ್ಪರಗಿ, ಶಿಲ್ಪಾವತಿ ಗುಲಗಂಜಿ, ಶೇಖಪ್ಪ ಮುಚಖಂಡಿ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಪಾಂಡುರಂಗ ಸನ್ನಪ್ಪನವರ, ಬಸವರಾಜ ನಡುವಿನಮನಿ, ರಾಜು ನಡುವಿನಮನಿ ಹಾಗೂ ಶಿವರೆಡ್ಡಿ ನಡುವಿನಮನಿ, ಶಿಕ್ಷಕ ಎಂ.ಎಸ್.ಕಲಗುಡಿ, ಕಸಾಪ ವಲಯ ಘಟಕದ ಅಧ್ಯಕ್ಷ ಸಂಜಯ ನಡುವಿನಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.