ADVERTISEMENT

ಹುನಗುಂದ: ಸಹ ಶಿಕ್ಷಕನ ಮೇಲೆ ಹಲ್ಲೆ; ಶಿಕ್ಷಕಿ ಅಮಾನತುಗೊಳಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 2:29 IST
Last Updated 29 ಜುಲೈ 2025, 2:29 IST
ಇಳಕಲ್ ಉರ್ದು ಶಾಲೆ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ ಶಿಕ್ಷಕಿಯನ್ನು ಅಮಾನತುಗೊಳಿಸಲು ಒತ್ತಾಯಿಸಿ ಜಂಗಮ ಸಮಾಜದ ಮುಖಂಡರು ಹುನಗುಂದ ಬಿಇಒ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಇಳಕಲ್ ಉರ್ದು ಶಾಲೆ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ ಶಿಕ್ಷಕಿಯನ್ನು ಅಮಾನತುಗೊಳಿಸಲು ಒತ್ತಾಯಿಸಿ ಜಂಗಮ ಸಮಾಜದ ಮುಖಂಡರು ಹುನಗುಂದ ಬಿಇಒ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಹುನಗುಂದ: ಇಳಕಲ್ ನಗರದ ಅಲಾಂಪುರ ಪೇಟೆಯಲ್ಲಿರುವ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯ ಶಿಕ್ಷಕ ಅಂದಾನಯ್ಯ ವಸ್ತ್ರದ ಅವರಿಗೆ ಚಪ್ಪಲಿಯಿಂದ ಹೊಡೆದು ಹಲ್ಲೆ ಮಾಡಿದ ಅದೇ ಶಾಲೆಯ ಶಿಕ್ಷಕಿ ಅಮೀನಾ ಕೊಳೂರ ಅವರನ್ನು ತಕ್ಷಣ ಜಾರಿಗೆ ಬರುವಂತೆ ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ಹುನಗುಂದ-ಇಳಕಲ್ ತಾಲ್ಲೂಕು ಜಂಗಮ ಸಮಾಜದ ಮುಖಂಡರು ಸೋಮವಾರ ಹುನಗುಂದ ಬಿಇಒ ಕಚೇರಿ ಎದುರು ಪ್ರತಿಭಟನೆ ಮಾಡಿದರು. ಮನವಿ ಸ್ವೀಕರಿಸಲು ಬಂದ ಕ್ಷೇತ್ರಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೇದಾರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಶಾಲೆಯಲ್ಲಿ ಇಂತಹ ಅಹಿತಕರ ಘಟನೆ ನಡೆದರೂ ಇದುವರೆಗೂ ಭೇಟಿ ನೀಡಿ ತಪ್ಪಿಸ್ತರ ವಿರುದ್ಧ ಕ್ರಮ ಕೈಗೊಂಡಿಲ್ಲ. ಹಲ್ಲೆಗೊಳಗಾದ ಶಿಕ್ಷಕ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಅವನಿಗೆ ದೂರವಾಣಿ ಕರೆ ಮಾಡಿ ದೂರು ನೀಡದಂತೆ ಒತ್ತಡ ಹಾಕಿದ್ದಿರಿ. ಇದರ ಹಿಂದಿನ ಉದ್ದೇಶ ಹಲ್ಲೆ ನಡೆಸಿದ ಶಿಕ್ಷಕಿಯನ್ನು ರಕ್ಷಿಸುವುದು ಆಗಿದೆ ಎಂದು ಆರೋಪಿಸಿದರು.

ಡಿಡಿಪಿಐ ಅವರು ಕರೆದ ಸಭೆಯಲ್ಲಿದ್ದ ಕಾರಣ ಕರೆ ಸ್ವೀಕರಿಸಲು ಸಾಧ್ಯವಾಗಿಲ್ಲ. ಸಮಗ್ರ ವಿಚಾರಣೆ ನಡೆಸಿ ವರದಿ ಸಲ್ಲಿಸಲು ಅಂದೇ ಶಾಲೆಗೆ ಕಚೇರಿ ಸಿಬ್ಬಂದಿಯನ್ನು ಕಳುಹಿಸುವುದರ ಜೊತೆಗೆ ಸಿಬ್ಬಂದಿ ನೀಡಿದ ಮಾಹಿತಿಯನ್ನು ಮೇಲಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಿರುವೆ. ವಾತಾವರಣ ತಿಳಿಯಾಗಲೆಂದು ಇಬ್ಬರು ಶಿಕ್ಷಕರನ್ನು ಬೇರೆ ಶಾಲೆಗೆ ನಿಯೋಜಿಸಲಾಗಿದೆ. ವಿಚಾರಣಾ ವರದಿ ಈಗ  ಕೈ ಸೇರಿದೆ. ಶಿಕ್ಷಕಿಯದೇ ತಪ್ಪೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಟಿಜಿಪಿ ಶಿಕ್ಷಕಿ ಆಗಿರುವುದರಿಂದ ಕ್ರಮ ಜರುಗಿಸಲು ಬಿಇಒ ಅವರಿಗೆ ಅಧಿಕಾರ ಇಲ್ಲ. ವರದಿ ಆಧರಿಸಿ ಹಲ್ಲೆ ನಡೆಸಿದ ಶಿಕ್ಷಕಿ ವಿರುದ್ಧ ಕ್ರಮ ಜರುಗಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಪತ್ರ ಬರೆಯಲಾಗುವುದು ಎಂದು ಜಾಸ್ಮಿನ್ ಕಿಲ್ಲೇದಾರ ತಿಳಿಸಿದರು.

ADVERTISEMENT

ವೀರಮಾಹೇಶ್ವರ (ಜಂಗಮ) ಸಮಾಜದ ಹುನಗುಂದ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಬಿ. ಕಂಬಾಳಿಮಠ, ಇಳಕಲ್ ತಾಲ್ಲೂಕು ಘಟಕದ ಅಧ್ಯಕ್ಷ ಶಿವಕುಮಾರ ಹಿರೇಮಠ, ರಾಜಶೇಖರ ಕೂಡಲಗಿಮಠ, ಸಂಗಮೇಶ ಸಾರಂಗಮಠ, ಸಂಗಮೇಶ ಜಾವೂರಮಠ, ಗುರುಬಸಯ್ಯ ಶಾಸ್ತ್ರಿ, ಪುಟ್ಟು ಹಿರೇಮಠ, ರಾಜು ಹಿರೇಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.