ಮಹಾಲಿಂಗಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಮೀಪದ ರನ್ನಬೆಳಗಲಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಶಿಕ್ಷಕರು ಹಾಗೂ ಸಿಬ್ಬಂದಿ ಶುಕ್ರವಾರ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಪ್ರಾಚಾರ್ಯ ಮಂಜುಳಾ ಸೊಪ್ಪಿಮಠ ಮಾತನಾಡಿ, ‘ಬೇಡಿಕೆಗಳ ಈಡೇರಿಕೆಗಾಗಿ ಬೆಂಗಳೂರಿನಲ್ಲಿ ಮೂರು ದಿನ ಪ್ರತಿಭಟನೆ ನಡೆಸಲಾಗಿದೆ. ಆದರೂ ಸರ್ಕಾರ ನಮ್ಮ ಬೇಡಿಕೆಗಳ ಈಡೇರಿಕೆಗೆ ಮುಂದಾಗಿಲ್ಲ. ಆದ್ದರಿಂದ ರಾಜ್ಯದಾದ್ಯಂತ ನಮ್ಮ ಸಂಘದಿಂದ ಕಪ್ಪು ಪಟ್ಟಿ ಕಟ್ಟಿಕೊಂಡು ಧರಿಸಿ ಕೆಲಸಕ್ಕೆ ಹಾಜರಾಗಿದ್ದೇವೆ’ ಎಂದರು.
‘ವಸತಿ ಶಿಕ್ಷಣ ನಿರ್ದೇಶನಾಲಯ ರಚನೆ ಅಥವಾ ಎಸ್.ಸಿ, ಎಸ್.ಟಿ, ಬಿ.ಸಿ ವಸತಿ ಶಾಲೆಗಳನ್ನು ಸಿಬ್ಬಂದಿಯೊಂದಿಗೆ ಸಂಬಂಧಿಸಿದ ಇಲಾಖೆಗಳ ವಶಕ್ಕೆ ನೀಡುವುದು, ಜ್ಯೋತಿ ಸಂಜೀವಿನಿ ಯೋಜನೆ ಅನುಷ್ಠಾನ ಸೇರಿದಂತೆ ವಿವಿಧ ಬೇಡಿಕೆಗಳಿದ್ದು, ಇವುಗಳಿಗೆ ಸರ್ಕಾರ ಸ್ಪಂದಿಸದಿದ್ದಲ್ಲಿ ಜೂನ್ 2ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಪ್ರಮುಖರಾದ ರಾಹುಲ್ ಸಾಗರ, ಎಂ.ಬಿ.ತೇರದಾಳ, ಶ್ರುತಿ ಪೊಲೀಸನವರ, ಗಜಾನನ ಗಾಜಾರ, ಸುರೇಶಕುಮಾರ ಮುದಕನ್ನವರ, ಕಾಂತು ಕಲಶೆಟ್ಟಿ, ವಿಲಾಸ ಎಣ್ಣಿ, ಜಿ.ಎಂ.ಮಠಪತಿ, ಕೆ.ಎಸ್.ಉಳ್ಳಾಗಡ್ಡಿ, ಶಿವಶಂಕರಯ್ಯ ವಿರಕ್ತಮಠ, ಯಲ್ಲಪ್ಪ ಶಿರಗಾಂವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.