
ರಬಕವಿ ಬನಹಟ್ಟಿ (ಬಾಗಲಕೋಟೆ ಜಿಲ್ಲೆ): ಸಮೀಪದ ಹಿಪ್ಪರಗಿಯಲ್ಲಿ ಕೃಷ್ಣಾ ನದಿಗೆ ನಿರ್ಮಿಸಲಾದ ಹಿಪ್ಪರಗಿ ಬ್ಯಾರೇಜ್‌ನ 22ನೇ ಗೇಟ್‌ನಲ್ಲಿ ಮಂಗಳವಾರ ಉಂಟಾದ ತಾಂತ್ರಿಕ ತೊಂದರೆಯಿಂದಾಗಿ ಕೃಷ್ಣಾ ನದಿಯಿಂದ ಅಪಾರ ಪ್ರಮಾಣದ ನೀರು ಹರಿದು ಹೋಗುತ್ತಿದೆ.
ಹಿಪ್ಪರಗಿ ಜಲಾಶಯದಲ್ಲಿ 6 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಅಪಾರ ಪ್ರಮಾಣದ ನೀರು ನದಿಗೆ ಹರಿದು ಹೋಗುತ್ತಿರುವುದರಿಂದ ನದಿ ಪಾತ್ರದ ಜನರು ಆತಂಕದಲ್ಲಿದ್ದಾರೆ.
ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳ ಪ್ರಮುಖ ನಗರ ಮತ್ತು ಗ್ರಾಮೀಣ ಭಾಗದ ಜನ ಮತ್ತು ಜಾನುವಾರುಗಳಿಗೆ ಮುಂದಿನ ದಿನಗಳಲ್ಲಿ ನೀರಿನ ತೊಂದರೆಯಾಗುವ ಸಮಸ್ಯೆ ಇದೆ.
‘ಸದ್ಯ ತಾತ್ಕಾಲಿಕ ಗೇಟ್‌ಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದೆ. ಬಳಿಕ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ನಂತರ ಪೂರ್ಣಪ್ರಮಾಣದ ಕಾರ್ಯ ಕೈಗೊಳ್ಳಲಾಗುವುದು. ಮಂಗಳವಾರ ಸಂಜೆ 6 ಗಂಟೆ ವರೆಗೆ ಬ್ಯಾರೇಜ್‌ನಿಂದ ಅಂದಾಜು 0.2 ಟಿಎಂಸಿ ಅಡಿ ನೀರು ಹರಿದು ಹೋಗಿದೆ’ ಎಂದು ಜಲಾಶಯದ ಮೂಲಗಳು ತಿಳಿಸಿವೆ.
ಬ್ಯಾರೇಜ್‌ಗೆ ರಬಕವಿ ಬನಹಟ್ಟಿ ಮತ್ತು ಜಮಖಂಡಿ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಿಪ್ಪರಗಿ ಬ್ಯಾರೇಜ್ ಎಂಜಿನಿಯರ್ ಮತ್ತು ಸಿಬ್ಬಂದಿ ಗೇಟ್ ಅಳವಡಿಕೆಯ ಕಾರ್ಯದಲ್ಲಿ ತೊಡಗಿದ್ದಾರೆ.
‘ಹಲವು ವರ್ಷಗಳಿಂದಿರುವ ಗೇಟ್‌ಗಳಲ್ಲಿ ಏರುಪೇರು ಆಗಿರುತ್ತವೆ. ಅದರಿಂದ ಸಮಸ್ಯೆಯಾಗಿದೆ. ಕೂಡಲೇ ಸರಿ ಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಂದಾಜು 0.75 ಟಿಎಂಸಿ ಅಡಿ ನೀರು ಪೋಲಾಗಿರುವ ಸಾಧ್ಯತೆ ಇದ್ದು, ಇದರಿಂದ ಸಮಸ್ಯೆ ಆಗುವುದಿಲ್ಲ. ನದಿ ಕೆಳಗಡೆಯ ಭಾಗದ ಜನರಿಗೆ ಯಾವುದೇ ತೊಂದರೆಯಾಗದಂತೆ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರು ಕ್ರಮ ಕೈಗೊಂಡಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.