ADVERTISEMENT

ಗುಳೇದಗುಡ್ಡ | ಬಯಲು ಬಹಿರ್ದೆಸೆ ಜೀವಂತ; ಎಲ್ಲೆಂದರಲ್ಲಿ ಕಸ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2024, 4:37 IST
Last Updated 6 ಮಾರ್ಚ್ 2024, 4:37 IST
2 ವರ್ಷಗಳಿಂದ ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕ
2 ವರ್ಷಗಳಿಂದ ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕ   

ಗುಳೇದಗುಡ್ಡ: ತಾಲ್ಲೂಕಿನ ತೆಗ್ಗಿ ಗ್ರಾಮ ಗುಳೇದಗುಡ್ಡ ಪಟ್ಟಣದಿಂದ 10 ಕಿ.ಮೀ ಅಂತರದಲ್ಲಿದ್ದು, ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ.

ಇಲ್ಲಿ 300 ಕ್ಕೂ ಹೆಚ್ಚು ಮನೆಗಳಿದ್ದು 2400 ಜನಸಂಖ್ಯೆ ಹೊಂದಿದೆ. ಸಮೀಪದ ಕೆಲವಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯ ಗ್ರಾಮವಾಗಿದ್ದು, ಗ್ರಾಮದಲ್ಲಿ ಒಟ್ಟು ಮೂವರು ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಆದರೂ ಗ್ರಾಮದಲ್ಲಿ ಯಾವುದೇ ಮಹತ್ವದ ಕೆಲಸಗಳು ಆಗಿಲ್ಲ. ಚರಂಡಿ, ಕುಡಿಯುವ ನೀರು, ರಸ್ತೆ, ಶೌಚಾಲಯ ಸಮಸ್ಯೆಗಳು ಗ್ರಾಮಸ್ಥರನ್ನು ಕಾಡುತ್ತಿವೆ.

ಕೆಟ್ಟು ನಿಂತ ಕುಡಿಯುವ ನೀರಿನ ಘಟಕ: ಗ್ರಾಮಕ್ಕೆ 10 ಕಿ.ಮೀ. ಅಂತರದಲ್ಲಿರುವ ಬೇಡರ ಬೂದಿಹಾಳ ಬೋರವೆಲ್ ಪೈಂಟ್‍ನಿಂದ ನೀರನ್ನು ಒದಗಿಸಲಾಗುತ್ತಿದೆ. ಕುಡಿಯಲು ನದಿ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಆದರೆ ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಎರಡು ವರ್ಷಗಳಿಂದ ಕೆಟ್ಟು ನಿಂತಿದೆ. ಇದುವರೆಗೂ ಅದನ್ನು ಸರಿ ಪಡಿಸಲು ಯಾರೂ ತಲೆ ಕೆಡಿಸಿಕೊಂಡಿಲ್ಲ. ಶುದ್ಧ ನೀರು ಬೇಕಾದರೆ 2 ಕಿ.ಮೀ ಅಂತರದಲ್ಲಿರುವ ಕೆಲವಡಿಗೆ ಬೈಕ್‍ನಲ್ಲಿ ಹೋಗಿ ತರುವುದು ಜನರಿಗೆ ರೂಢಿಯಾಗಿದೆ.

ADVERTISEMENT

ಬಯಲು ಬಹಿರ್ದೆಸೆ ಇನ್ನೂ ಜೀವಂತ: ಇದುವರೆಗೂ ಗ್ರಾಮ ಪಂಚಾಯತಿಯಿಂದ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿಲ್ಲ. ರಸ್ತೆ ಬದಿಯೇ ಶೌಚ ಮಾಡುವುದು ಕಂಡು ಬರುತ್ತಿದೆ. ಶೌಚಾಲಯ ವ್ಯವಸ್ಥೆಗಾಗಿ ಗ್ರಾಮ ಪಂಚಾಯತಿಯಿಂದ ಅನುದಾನ ಪಡೆದು ಕೆಲವರು ಕಟ್ಟಿಕೊಂಡರೂ ಬಳಸಲು ಸಾಧ್ಯವಾಗದಂತಿದೆ. ಬಯಲು ಬಹಿರ್ದೆಸೆಯನ್ನು ಇಂದಿಗೂ ಗ್ರಾಮಸ್ಥರು ಮುಂದುವರಿಸಿದ್ದಾರೆ.

ಸ್ಮಶಾನ ಬಲು ದೂರ: ಇಲ್ಲಿ ಸರ್ಕಾದವರು ಸ್ಮಶಾನಕ್ಕೆ ಜಾಗ ನೀಡಿಲ್ಲ. 4 ಕೀ.ಮೀ ದೂರದ ಲಿಂಗಾಪುರ ಅರಣ್ಯದ ಹತ್ತಿರ ನೀಡಿದ್ದಾರೆ. ಆದರೆ ನಡುವೆ ಊರಿನಲ್ಲಿ ಶವ ತೆಗೆದುಕೊಂಡು ಹೋದರೆ ಅಲ್ಲಿನ ಗ್ರಾಮಸ್ಥರು ವಿರೋಧಿಸುತ್ತಾರೆ. ಹೀಗಾಗಿ ತೆಗ್ಗಿ ಗ್ರಾಮದಲ್ಲಿ ಗ್ರಾಮಕ್ಕೆ ಹೊಂದಿಕೊಂಡ ಹಳ್ಳ ಇಲ್ಲವೇ ಅಂತ್ಯ ಸಂಸ್ಕಾರವನ್ನು ತಮ್ಮ ಹೊಲಗಳ ಬದುವಿನಲ್ಲಿ ಮಾಡುತ್ತಿದ್ದಾರೆ.

ಗಬ್ಬು ನಾರುವ ಚರಂಡಿಗಳು: ಗ್ರಾಮದಲ್ಲಿ ಕೆಲವು ಓಣಿಗಳಲ್ಲಿ ಚರಂಡಿ ನಿರ್ಮಿಸಿದ್ದಾರೆ. ಆದರೇ ಚರಂಡಿ ನೀರು ಸರಿಯಾಗಿ ಹರಿದು ಹೋಗಲು ಹೋಗಲು ವ್ಯವಸ್ಥೆ ಇಲ್ಲದ್ದರಿಂದ ನೀರು ಚರಂಡಿಯಲ್ಲಿಯೇ ನಿಂತು ಗಬ್ಬು ವಾಸನೆ ಬರುತ್ತದೆ.

ಎಲ್ಲೆಂದರಲ್ಲಿ ಕಸ: ಗ್ರಾಮದ ರಸ್ತೆ ಪಕ್ಕ, ಎಲ್ಲೆಂದರಲ್ಲಿ ಸಾರ್ವಜನಿಕರು ಕಸ ಎಸೆಯುತ್ತಾರೆ. ಅದನ್ನು ನಿರ್ವಹಣೆ ಮಾಡಲು ಗ್ರಾಮ ಪಂಚಾಯಿತಿ ಕೆಲಸಗಾರರು ಇಲ್ಲದ ಕಾರಣ ಮೂಗು ಮುಚ್ಚಿಕೊಂಡು ಹೋಗುವ ಸ್ಥಿತಿ ಇದೆ. ಗ್ರಾಮದ ಅಂಗನವಾಡಿ ಪಕ್ಕದ ಬಯಲಿನಲ್ಲಿ ನೀರು ನಿಲ್ಲುತ್ತಿದ್ದು ಸೊಳ್ಳೆಗಳ ಉತ್ಪಾದನೆಗೆ ಕಾರಣವಾಗಿದೆ.

ಇನ್ನೊಂದು ಬೋರವೆಲ್ ಕೊರೆಸಲು ಆಗ್ರಹ: ಕುಡಿಯಲು ನೀರಿಗಾಗಿ ಒಂದೇ ಬೋರವೆಲ್ ಇದ್ದು ಇನ್ನೊಂದು ಬೋರವೆಲ್ ಕೊರೆಸಲು ಬಾದಾಮಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

‘ಕುಡಿಯುವ ನೀರಿನ ಘಟಕ ಆರಂಭಕ್ಕೆ ಕ್ರಮ’

ಗ್ರಾಮದಲ್ಲಿ ಕುಡಿಯುವ ನೀರಿಗೆ ಒಂದೇ ಬೋರವೆಲ್ ಇರುವ ಕಾರಣ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ನೀರನ್ನು ಸರಬರಾಜು ಮಾಡಿಲ್ಲ. ಈಗ ಬೇಸಿಗೆಯಾದ್ದರಿಂದ ಕ್ರಮ ಕೈಗೊಳ್ಳಲಾಗುವುದು. ಅಲ್ಲಿನ ಚರಂಡಿಗಳಲ್ಲಿ ನೀರು ನಿಲ್ಲುವುದರಿಂದ ಕಾಲಕಾಲಕ್ಕೆ ಸ್ವಚ್ಛಗೊಳಿಸಲಾಗುವುದು. ಸುಭಾಶ್ಚಂದ್ರ ಚಲವಾದಿ ಪಿಡಿಒ ಕೆಲವಡಿ ಗ್ರಾಮ ಪಂಚಾಯತಿ

ಗ್ರಾಮ ಪಂಚಾಯಿತಿಯಿಂದ ಸರಿಯಾದ ಚರಂಡಿ ನಿರ್ಮಾಣ ಕುಡಿಯುವ ನೀರು ಪೂರೈಕೆ ಮುಂತಾದ ಕಾರ್ಯ ಮಾಡಿಸಲಾಗುವುದು.
ರಮೇಶ ಗೌಡರ, ಗ್ರಾಮ ಪಂಚಾಯಿತಿ ಸದಸ್ಯರು ತೆಗ್ಗಿ
ಬೇಸಿಗೆ ಆರಂಭವಾದ್ದರಿಂದ ಜನ-ಜಾನುವಾರುಗಳಿಗೆ ಶುದ್ಧ ಕುಡಿಯುವ ನೀರು ಸಿಗುವಂತಾಗಲಿ. ಆ ದಿಸೆಯಲ್ಲಿ ಪಂಚಾಯತಿ ಕೆಲಸ ಮಾಡಲಿ.
ಚಂದ್ರಶೇಖರ ಕಾಳನ್ನವರ, ಗ್ರಾಮದ ನಾಗರಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.