ADVERTISEMENT

ಶಿವರಾಮ ಕಾರಂತರದ್ದು ಬಹುಮುಖ ವ್ಯಕ್ತಿತ್ವ: ಹಳೆಮನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2025, 14:38 IST
Last Updated 2 ಮಾರ್ಚ್ 2025, 14:38 IST

ಬಾಗಲಕೋಟೆ: ಶಿವರಾಮ ಕಾರಂತರು ಕನ್ನಡ ಸಾಹಿತ್ಯ ಸಂಸ್ಕೃತಿಯ ಅಸ್ಮಿತೆಯ ವಕ್ತಾರ. ಅವರೊಬ್ಬ ದಾರ್ಶನಿಕರಾಗಿದ್ದರು ಎಂದು ಉಜಿರೆ ಧರ್ಮಸ್ಥಳ ಎಸ್.ಡಿ.ಎಂ ಕಾಲೇಜಿನ ಸಹ ಪ್ರಾಧ್ಯಾಪಕ ರಾಜಶೇಖರ ಹಳೆಮನೆ ಹೇಳಿದರು.

ಶಿವಾನುಭವ ಸಮಿತಿ, ಸಾಹಿತ್ಯ ಸಂಸ್ಕೃತಿ ಸಂವಹನ ವೇದಿಕೆ, ಚರಂತಿಮಠ ಸಹಯೋಗದಲ್ಲಿ ಜ್ಞಾನಪೀಠ ಪುರಸ್ಕೃತರ ಸಾಹಿತ್ಯ ಸಂವಾದ ತಿಂಗಳ ಉಪನ್ಯಾಸ ಮಾಲಿಕೆಯಲ್ಲಿ ಜ್ಞಾನಪೀಠ ಪುರಸ್ಕೃತ ಶಿವರಾಮ ಕಾರಂತರ ‘ಮೂಕಜ್ಜಿಯ ಕನಸುಗಳು‘ ಕುರಿತು ಉಪನ್ಯಾಸ ನೀಡಿದ ಅವರು
ಕಾರಂತರು 20ನೇ ಶತಮಾನ ಕಂಡ ಬಹುಮುಖ ವ್ಯಕ್ತಿತ್ವ ಎಂದರು.

ಕಾದಂಬರಿಕಾರ, ಯಕ್ಷಗಾನ ಪ್ರಯೋಗಶೀಲ, ಪರಿಸರ ತಜ್ಞ, ನಾಟಕಕಾರ, ವೈಜ್ಞಾನಿಕ ಬರಹಗಾರ, ಕವಿ, ಅನುವಾದಕರಾಗಿದ್ದರು. ಆಡು ಮುಟ್ಟದ ಸೊಪ್ಪಿಲ್ಲ ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲ ಎಂದು ಹೇಳಬಹುದು. ಮೂಕಜ್ಜಿಯ ಕನಸುಗಳಲ್ಲಿ ಪ್ರಕೃತಿ ಹಾಗೂ ದೈವತ್ವವನ್ನು ವೈಜ್ಞಾನಿಕ ನೆಲೆಯಲ್ಲಿ ನೋಡಿದ್ದಾರೆ ಎಂದರು.

ADVERTISEMENT

ದೇವರ ಹಾಗೂ ಮನುಷ್ಯನ ಅಸ್ತಿತ್ವದ ಹುಡುಕಾಟ, ಕಲ್ಪನೆ ಹಾಗೂ ವಾಸ್ತವ ಒಟ್ಟಿಗೆ ಸಾಗುವ ಜಗತ್ತಿನ ಪ್ರತಿಕ್ಷಣದ ಅನುಭವವನ್ನು ಅನುಭೂತಿಗೊಳಿಸಿದ್ದಾರೆ. ಜೀವನ ತತ್ವ, ಕಲೆ ತತ್ವವನ್ನು ಸಾರುವ ಸಂಕಿರ್ಣವಾದ ಕಾದಂಬರಿಯು ಮನುಷ್ಯ ತನ್ನೊಳಗಿನ ನೈತಿಕತೆಯನ್ನು ಹೆಚ್ಚಿಸುವ ತಾತ್ವಿಕ ಚಿಂತನೆಯಿಂದ ಕೂಡಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ‌ದ್ದ ಬಿ.ವಿ.ವಿ.ಸಂಘದ ಆಡಳಿತಾಧೀಕಾರಿ ವಿಜಯಕುಮಾರ ಕಟಗಿಹಳ್ಳಿಮಠ ಮಾತನಾಡಿ, ಕಾರಂತರು ಭಾರತೀಯ ಸಂಸ್ಕೃತಿಯನ್ನು ಮೂಕಜ್ಜಿಯ ಕನಸುಗಳ ಮೂಲಕ ಹೇಳಿಸಿದ್ದಾರೆ. ಮಾನವರಿಗೆ ತಮ್ಮ ಅತೀಂದ್ರೀಯ ಶಕ್ತಿಯ ಅರಿವು ಅಗಬೇಕಿದೆ ಎಂದರು.

ಎಸ್.ಆರ್‌. ಮನಹಳ್ಳಿ, ಎ.ಎಸ್. ಪಾವಟೆ, ನಂಜುಂಡಸ್ವಾಮಿ. ಬಸವರಾಜ ಖೋತ, ಐ.ಕೆ.ಮಠದ, ವಿಜಯಲಕ್ಷ್ಮೀ ಭದ್ರಶೆಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.