ಜಮಖಂಡಿ: ಚಾಲುಕ್ಯರ ಕಾಲದ ಜಂಬುಕೇಶ್ವರ ದೇವಾಲಯದಿಂದ ನಗರಕ್ಕೆ ಜಮಖಂಡಿ ಎಂದು ಹೆಸರು ಬಂದಿದೆ. ಜಂಬುಕೇಶ್ವರ ಜಾಗೃತ ದೇವರಿದ್ದು, ಜಮಖಂಡಿ ಸುತ್ತಮುತ್ತಲಿನ ನಗರಗಳ ಭಕ್ತರು ಭಕ್ತಿ ಭಾವದಿಂದ ನಡೆದುಕೊಳ್ಳುತ್ತಾರೆ. ದೇವಸ್ಥಾನವು ಚಾಲುಕ್ಯರ ಕಾಲದ ಪ್ರಸಿದ್ಧ ಕೆತ್ತನೆ ಹೊಂದಿದೆ.
ಈ ದೇವಾಲಯ ಸುಮಾರು 800ರಿಂದ 900 ವರ್ಷಗಳ ಹಿಂದಿನದಿರಬಹುದೆಂದು ಅಂದಾಜಿಸಲಾಗಿದೆ. ಪ್ರವೇಶ ದ್ವಾರವು ಪೂರ್ವಾಭಿಮುಖವಾಗಿದ್ದು, ಮುಂಭಾಗದ ಬಲಬದಿಗೆ ಐರಾವತ ಮತ್ತು ಎಡಬದಿಗೆ ನಂದಿಯ ಮೂರ್ತಿಗಳಿವೆ, ಅಲ್ಲಿಂದ 8 ಪಾವಟಿಗೆಗಳನ್ನು ಇಳಿದು ಹೋದಾಗ ಗುಡಿಯ ಪ್ರವೇಶದ್ವಾರವಿದೆ. ಪ್ರವೇಶ ದ್ವಾರದಿಂದ 7 ಪಾವಟಿಗಳನ್ನು ಇಳಿದಾಗ ದೇವಸ್ಥಾನದ ಆವರಣವಿದೆ.
ದೇವಸ್ಥಾನದ ಮುಂದೆ ಹೋಮ ಮಾಡುವ ಸ್ಥಳವಿದೆ. ಅಲ್ಲಿ ಕೆತ್ತನೆ ಮಾಡಿದ ಕಲ್ಲನ್ನು ಮುಚ್ಚಲಾಗಿದೆ. ಹೋಮ ಮಾಡುವಾಗ ಕಲ್ಲನ್ನು ತೆಗೆದು ಹೋಮ ಮಾಡಿದರೆ ಬೇಡಿಕೊಂಡಿರುವ ವರಗಳ ಪ್ರಾಪ್ತಿಯಾಗುತ್ತಿದ್ದವು ಎಂಬ ನಂಬಿಕೆ ಸ್ಥಲೀಯರಲ್ಲಿ ಇದೆ.
ದೇವಾಲಯ ಅಷ್ಟಕೋನಾಕೃತಿಯ ಜಗಲಿಯ ಮೇಲೆ ನಿರ್ಮಾಣವಾಗಿದ್ದು, ಇದು ಕಲ್ಯಾಣದ ಚಾಲುಕ್ಯರ ಶಿಲ್ಪ ಶೈಲಿಯ ಕಟ್ಟಡವಾಗಿದೆ. ದೇವಾಲಯ ಸಂಪೂರ್ಣ ಕಲ್ಲಿನಲ್ಲಿ ನಿರ್ಮಿತವಾಗಿ ಉತ್ತರಾಭಿಮುಖವಾಗಿದೆ. ಜಂಬುಕೇಶ್ವರ ದೇವಾಲಯವು ತ್ರಿಕೂಟೇಶ್ವರವಾಗಿದ್ದು, ಮೂರು ಗರ್ಭಗುಡಿ ಹಾಗೂ ಮುಂದೆ ಅರ್ಧ ಮಂಟಪ ಹೊಂದಿದೆ. ಮಧ್ಯದಲ್ಲಿ ವಿಶಾಲವಾದ ನವರಂಗವಿದ್ದು, ನಾಲ್ಕು ಚತುರ್ಭುಜಾಕಾರದ ಕಲ್ಯಾಣ ಚಾಲುಕ್ಯ ಶೈಲಿಯ ಸ್ತಂಭಗಳಿವೆ. ಅದರ ಮಧ್ಯದಲ್ಲಿ ಜಂಬುಕೇಶ್ವರನಿಗೆ ಮುಖಮಾಡಿ ಕುಳಿತಿರುವ ಏಕಶಿಲಾ ನಂದಿಯ ಮೂರ್ತಿಯಿದೆ.
ಪ್ರಾಚೀನ ಪಾಣಿಪೀಠದ ಮೇಲೆ ಜಂಬುಕೇಶ್ವರ ಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಗರ್ಭಗೃಹದ ಛತ್ತಿನಲ್ಲಿ ಭುವನೇಶ್ವರಿಯ ಅರ್ಧಗೋಲಾಕಾರದ ಅಲ೦ಕಾರವು ಚಾಲುಕ್ಯ ಶೈಲಿಯಲ್ಲಿದೆ. ಮುಂದೆ ಬಲಕ್ಕೆ ಗಣೇಶನ ಮೂರ್ತಿ, ಎಡಕ್ಕೆ ನವಿಲು ವಾಹನದ ಷಣ್ಮುಖನ ಮೂರ್ತಿಗಲಿವೆ. ಬಲಭಾಗದ ಗರ್ಭಗುಡಿಯಲ್ಲಿ ರಾಮೇಶ್ವರಲಿಂಗವಿದ್ದು, ಎಡಭಾಗದ ಗರ್ಭಗುಡಿಯಲ್ಲಿ ವಿಶ್ವನಾಥಲಿಂಗವಿದೆ.
ನವರಂಗದ ಮುಂಭಾಗದಲ್ಲಿ ಕಕ್ಷಾಸನವಿರುವ ಮುಖಮಂಟಪವಿದ್ದು, ಅದರಲ್ಲಿರುವ ಕಿರು ಸ್ತಂಭಗಳ ಕೆತ್ತನೆ ಚಾಲುಕ್ಯರ ಶೈಲಿಯನ್ನು ಹೋಲುತ್ತವೆ. ಮೇಲ್ಬಾಗದಲ್ಲಿ ಸಿಂಹಾಕೃತಿಯ ಪ್ರಭಾವಳಿಯಿದ್ದು, ಎಡ-ಬಲಕ್ಕೆ ಐರಾವತದ ಮೂರ್ತಿಗಳಿವೆ. ಮಧ್ಯದಲ್ಲಿ ಶಿವನ ಚಿತ್ರವಿದೆ. ಮುಂಭಾಗದಲ್ಲಿ ಧರ್ಮಶಾಲೆ ಇದೆ. ಮೊದಲು ಭಕ್ತರು ಬಂದರೆ ಉಳಿದುಕೊಳ್ಳಲು ಧರ್ಮಶಾಲೆ ಬಳಸುತ್ತಿದ್ದರು. ದೇವಸ್ಥಾನದ ಮೇಲೆ ಇತ್ತೀಚಿನ ದಿನಗಳಲ್ಲಿ ಶಿವನ ಮೂರ್ತಿಯನ್ನು ನಿರ್ಮಿಸಿದ್ದಾರೆ.
ದೇವಸ್ಥಾನದ ಎಡಗಡೆ ಪೂಜೆ ನೀರಿಗಾಗಿ ಬಾವಿ ಇದೆ, ಇಂದಿನವರೆಗೆ ಅಲ್ಲಿನ ನೀರನ್ನೆ ಪೂಜೆಗೆ ಬಳಸುತ್ತಾರೆ, ಕಳೆದ ಹಲವಾರು ವರ್ಷಗಳಿಂದ ಜಮಖಂಡಿ ನಗರಸಭೆಯವರು ಈ ಬಾವಿಯಿಂದ ಜಮಖಂಡಿಯ ಸಾರ್ವಜನಿಕರಿಗೆ ನೀರು ಒದಗಿಸಲು ಸಂಪರ್ಕ ಹೊಂದಿದ್ದಾರೆ. ದೇವಸ್ಥಾನದ ಬಲಬಾಗದಲ್ಲಿ ನಾಲ್ಕು ಸಮಾಧಿಗಳಿದ್ದು ಅವುಗಳು ಅರ್ಚಕರ ಸಮಾಧಿಗಳು ಇರಬಹುದು ಎನ್ನುತ್ತಾರೆ ಅರ್ಚಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.