ADVERTISEMENT

ಗುಳೇದಗುಡ್ಡ | ಇಲ್ಲದ ಶಾಶ್ವತ ನ್ಯಾಯಾಲಯ; ತೊಂದರೆ

​ಪ್ರಜಾವಾಣಿ ವಾರ್ತೆ
Published 16 ಮೇ 2024, 6:20 IST
Last Updated 16 ಮೇ 2024, 6:20 IST
ಗುಳೇದಗುಡ್ಡದಲ್ಲಿರುವ ನ್ಯಾಯಾಲಯ ಕಟ್ಟಡದ ನೋಟ
ಗುಳೇದಗುಡ್ಡದಲ್ಲಿರುವ ನ್ಯಾಯಾಲಯ ಕಟ್ಟಡದ ನೋಟ   

ಗುಳೇದಗುಡ್ಡ: ಪಟ್ಟಣವು 2019ರಲ್ಲಿ ತಾಲ್ಲೂಕು ಕೇಂದ್ರವಾಗಿ ಘೋಷಣೆಯಾಗಿ ಐದು ವರ್ಷಗಳಾಗಿವೆ. ಪಟ್ಟಣಕ್ಕೆ ಸಂಚಾರಿ ನ್ಯಾಯಾಲಯ 2014ರಲ್ಲಿ ಸ್ಥಾಪಿಸಿ ಬರುವ ಜೂನ್ 7 ಕ್ಕೆ ಹತ್ತು ವರ್ಷ ಪೂರ್ಣಗೊಂಡರೂ ಇನ್ನು ಶಾಶ್ವತ ನ್ಯಾಯಾಲಯ ಸ್ಥಾಪನೆಯಾಗಿಲ್ಲ.

2014ರಲ್ಲಿ ಸರ್ಕಾರ ಪಟ್ಟಣದ ಪುರಸಭೆಯ ಕಟ್ಟಡದಲ್ಲಿ ತಾತ್ಕಾಲಿಕ ಕೋರ್ಟ್‌ ಸ್ಥಾಪಿಸಿದೆ. ಇಲ್ಲಿ ನ್ಯಾಯಾಲಯದ ಕಟ್ಟಡ ತೀರಾ ಸಣ್ಣದಾಗಿದ್ದು 10 ವರ್ಷದ ಹಿಂದೆಯೇ ತಾತ್ಕಾಲಿಕವಾಗಿ ಈ ಕಟ್ಟಡ ಆಯ್ಕೆ ಮಾಡಿಕೊಳ್ಳಲಾಗಿತ್ತು. ಅಲ್ಲಿಯೇ ನ್ಯಾಯಾಲಯದ ಕಲಾಪಗಳು ಮುಂದುವರೆದಿವೆ. ಜಾಗದ ಕೊರತೆ ಇದೆ. ಈ ಸ್ಥಳದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಇಲ್ಲ. ಕಕ್ಷಿದಾರರು ಮತ್ತು ಸಾರ್ವಜನಿಕರು ವಕೀಲರೊಂದಿಗೆ ಚರ್ಚಿಸಲು ಬಂದರೆ, ರಸ್ತೆಯಲ್ಲಿ ನಿಂತು ಮಾತನಾಡುವ ಸ್ಥಿತಿ ಇದೆ.

ವಾರಕ್ಕೆ ಪ್ರಸ್ತುತ ಕೇವಲ ಎರಡು ದಿನ ಕೋರ್ಟ್‌ ಕಲಾಪ ನಡೆಯುತ್ತದೆ. ಹೀಗಾಗಿ ತಾಲ್ಲೂಕಿನ ಎಲ್ಲ ಕಕ್ಷಿದಾರರಿಗೂ ಮತ್ತು ಸಾರ್ವಜನಿಕರಿಗೆ ತೊಂದರೆಯಾಗಿದೆ. ಸರ್ಕಾರ ಕೂಡಲೇ ಶಾಶ್ವತ ನ್ಯಾಯಾಲಯ ಸ್ಥಾಪಿಸಬೇಕು ಎಂದು ಸಾರ್ವಜನಿಕರು ಅಗ್ರಹಿಸುತ್ತಿದ್ದಾರೆ.

ADVERTISEMENT

ಸ್ಥಳ ಪರೀಶೀಲನೆ: ‘ಪೂರ್ಣ ಪ್ರಮಾಣದ ನ್ಯಾಯಾಲಯ ಆರಂಭಿಸಲು ಶಾಶ್ವತ ಕಟ್ಟಡ ಕಟ್ಟಲು ಒಂದು ವರ್ಷದ ಹಿಂದೆ ಹೈಕೋರ್ಟ್‌ ನ್ಯಾಯಾಧೀಶರು ಹಾಗೂ ಮೂರು ತಿಂಗಳ ಹಿಂದೆ ಜಿಲ್ಲಾ ಸತ್ರ ನ್ಯಾಯಾಧೀಶರು ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಪೆಟ್ರೋಲ್ ಬಂಕ್ ಹಿಂದುಗಡೆ ಹಾಗೂ ಸಮೀಪದ ಪರ್ವತಿ ಗ್ರಾಮದ ಹತ್ತಿರ ಸ್ಥಳ ಪರೀಶೀಲನೆ ಮಾಡಿದ್ದಾರೆ. ಆದರೆ ಅದು ಇಂದಿಗೂ ಅಂತಿಮವಾಗಿಲ್ಲ.
ಪೂರ್ಣ ಪ್ರಮಾಣದ ನ್ಯಾಯಾಲಯ ಪಟ್ಟಣದಲ್ಲಿ ಅವಶ್ಯವಾಗಿದ್ದು ಕೂಡಲೇ ಶಾಶ್ವತ ನ್ಯಾಯಾಲಯ ಸ್ಥಾಪಿಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆ‘ ಎಂದು ಪಟ್ಟಣದ ಈರಣ್ಣ ಅಲದಿ ಹೇಳುತ್ತಾರೆ.

ಸರ್ಕಾರಕ್ಕೆ ನಿರಂತರ ಮನವಿ ನೀಡಿದರೂ ಯಾವುದೇ ಸಕಾರಾತ್ಮಕ ಕ್ರಮ ಕೈಗೊಂಡಿಲ್ಲ. ಹೈಕೋರ್ಟ್‌ ಪೂರ್ಣ ಪೀಠ ನ್ಯಾಯಾಲಯ ಸ್ಥಾಪಿಸಲು ಸರ್ಕಾರಕ್ಕೆ ನಿರ್ದೇಶನ ನೀಡಿದರೂ ಪ್ರಯೋಜನವಾಗಿಲ್ಲ. ಕೂಡಲೇ ಪಟ್ಟಣದಲ್ಲಿ ಶಾಶ್ವತ ನ್ಯಾಯಾಲಯ ಸ್ಥಾಪಿಸಬೇಕು
ಎಸ್.ಆರ್.ಬರಹಣಾಪೂರ ವಕೀಲರ ಸಂಘದ ಅಧ್ಯಕ್ಷ ಗುಳೇದಗುಡ್ಡ
ಗುಳೇದಗುಡ್ಡದಲ್ಲಿ ಸಂಚಾರಿ ನ್ಯಾಯಾಲಯ ಸ್ಥಾಪನೆಯಾಗಿದೆ. ತಾಲ್ಲೂಕಿನ ಕಕ್ಷಿದಾರರಿಗೆ ವಕೀಲರಿಗೆ ಅನುಕೂಲದ ದೃಷ್ಟಿಯಿಂದ ಶಾಶ್ವತ ನ್ಯಾಲಯ ಸ್ಥಾಪನೆಯಾಗಬೇಕು
ಸುಭಾಸ ಹೊಸಮನಿ ಕಾರ್ಯದರ್ಶಿ ವಕೀಲರ ಸಂಘ ಗುಳೇದಗುಡ್ಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.