ADVERTISEMENT

ಯುಪಿಎಸ್ಸಿ ಪರೀಕ್ಷೆ: ಜಮಖಂಡಿಯ ಆನಂದ ಕಲಾದಗಿಗೆ 446ನೇ ರ್ಯಾಂಕ್

ಐಚ್ಛಿಕ ವಿಷಯವಾಗಿ ಕನ್ನಡ ಸಾಹಿತ್ಯ ಆಯ್ದುಕೊಂಡಿದ್ದ ಮೆಕ್ಯಾನಿಕಲ್ ಎಂಜಿನಿಯರ್

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 11:13 IST
Last Updated 4 ಆಗಸ್ಟ್ 2020, 11:13 IST

ಬಾಗಲಕೋಟೆ: ಜಮಖಂಡಿಯ ಪೆಂಡಾಲ್ (ಶಾಮಿಯಾನ) ಮೇಸ್ತ್ರಿ ಹಾಗೂ ಡಾ.ರಾಜಕುಮಾರ ಅಭಿಮಾನಿಗಳ ಸಂಘದ ಅಧ್ಯಕ್ಷ ವೀರೇಶ ಕಲಾದಗಿ ಹಾಗೂ ಸುಮಿತ್ರಾ ದಂಪತಿ ಪುತ್ರ ಆನಂದ ಕಲಾದಗಿ ಮಂಗಳವಾರ ಪ್ರಕಟವಾದ ಯುಪಿಎಸ್ಸಿ ಪರೀಕ್ಷೆ ಫಲಿತಾಂಶದಲ್ಲಿ 446 ನೇ ರ‌್ಯಾಂಕ್‌ ಗಳಿಸಿದ್ದಾರೆ.

ಬೆಳಗಾವಿಯ ಗೋಗಟೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದಿರುವ ಆನಂದ ಯುಪಿಎಸ್ಸಿ ಪರೀಕ್ಷೆ ಎರಡನೇ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ.

ಮೊದಲ ಬಾರಿಗೆ ಪರೀಕ್ಷೆ ಬರೆದಾಗ ಪ್ರಿಲಿಮ್ಸ್ ಕೂಡ ತೇರ್ಗಡೆ ಆಗಿರಲಿಲ್ಲ. ಈ ಬಾರಿಯ ರ್ಯಾಂಕಿಂಗ್ ನಲ್ಲಿ ಐಪಿಎಸ್ ಹುದ್ದೆಗೆ ಅವಕಾಶ ಸಿಗಬಹುದು. ಇಲ್ಲದಿದ್ದರೆ ಕಂದಾಯ ಸೇವೆಗೆ ಅವಕಾಶವಾಗಲಿದೆ. ಐಪಿಎಸ್ ಹುದ್ದೆ ಸಿಗದಿದ್ದಲ್ಲಿ ಮತ್ತೊಮ್ಮೆ ಪರೀಕ್ಷೆ ಬರೆಯುವೆ ಎಂದು ಆನಂದ ಪ್ರಜಾವಾಣಿಗೆ ಪ್ರತಿಕ್ರಿಯಿಸಿದರು.

ADVERTISEMENT

ಐಎಎಸ್ ಪರೀಕ್ಷೆಯಲ್ಲಿ ಕನ್ನಡ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ಆಯ್ದುಕೊಂಡಿದ್ದ ಆನಂದ ದೆಹಲಿಯ ವಾಜಿರಾಮ್ ಇನ್ ಸ್ಟಿಟ್ಯೂಟ್ ನಲ್ಲಿ 9 ತಿಂಗಳು ತರಬೇತಿ ಪಡೆದಿದ್ದಾರೆ.

ವೀರೇಶ ಕಲಾದಗಿ ದಂಪತಿಗೆ ಐವರು ಮಕ್ಕಳು. ಅವರಲ್ಲಿ ಆನಂದ ಮೊದಲನೆಯವರು. ಜಮಖಂಡಿಯ ತುಂಗಳ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ 8 ನೇ ತರಗತಿವರೆಗೆ ಹಾಗೂ ಅಲ್ಲಿಯೇ ಪಿಯುಸಿವರೆಗೆ ಕಲಿತಿದ್ದಾರೆ.

ಅಪ್ಪ ಡಾ.ರಾಜಕುಮಾರ ಅವರ ಆಭಿಮಾನಿ ಆಗಿರುವುದರಿಂದ ಬಾಲ್ಯದಿಂದಲೂ ಮನೆಯಲ್ಲಿ ಕಲೆ- ಸಾಹಿತ್ಯದ ನಂಟು ಇತ್ತು. ಅದು ಕನ್ನಡ ಸಾಹಿತ್ಯದ ಬಗ್ಗೆ ನನಗೆ ವಿಶೇಷ ಪ್ರೀತಿ ಬೆಳೆಯಲು ಕಾರಣವಾಯಿತು. ಕೋಲಾರದ ಕೆ.ಆರ್. ನಂದಿನಿ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ ಇಡೀ ದೇಶಕ್ಕೆ ಮೊದಲ ರ‌್ಯಾಂಕ್‌ ಗಳಿಸಿದ್ದು ನನಗೆ ನಾಗರಿಕ ಸೇವಾ ಪರೀಕ್ಷೆ ಬರೆಯಲು ಪ್ರೇರಣೆಯಾಯಿತು. ನನ್ನ ಪರೀಕ್ಷಾ ತಯಾರಿಗೆ 'ಪ್ರಜಾವಾಣಿ' ಓದಿನಿಂದ ಬಹಳಷ್ಟು ನೆರವಾಗಿದೆ. ನನ್ನಂತೆಯೇ ಪರೀಕ್ಷೆ ತಯಾರಿ ನಡೆಸುವವರ ನೆಚ್ಚಿನ ಪತ್ರಿಕೆ ಅದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.