ADVERTISEMENT

ಜಮಖಂಡಿ | ಯೂರಿಯಾ ಗೊಬ್ಬರ ಕೊರತೆ: ನ್ಯಾನೊ ದ್ರಾವಣ ಬಳಸಲು ರೈತರ ಹಿಂದೇಟು

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 4:14 IST
Last Updated 21 ಜುಲೈ 2025, 4:14 IST
ಜಮಖಂಡಿ ತಾಲ್ಲೂಕಿನ ಹುಲ್ಯಾಳ ಗ್ರಾಮದ ರುದ್ರಪ್ಪ ಮಲ್ಲಪ್ಪ ಝುಲಪಿ ಇವರ ತೋಟದಲ್ಲಿ ಗೋವಿನಜೋಳ ಬೆಳೆಯಲ್ಲಿ ನ್ಯಾನೊ ಯೂರಿಯಾ ಮತ್ತು  ನ್ಯಾನೊ ಡಿ.ಎ.ಪಿ ಬಳಕೆಯ ಕುರಿತು ಡ್ರೋಣ್ ಮೂಲಕ ಸಿಂಪರಣೆ ಮಾಡುವ ಕುರಿತು ಮಾಹಿತಿ ನೀಡಲಾಯಿತು
ಜಮಖಂಡಿ ತಾಲ್ಲೂಕಿನ ಹುಲ್ಯಾಳ ಗ್ರಾಮದ ರುದ್ರಪ್ಪ ಮಲ್ಲಪ್ಪ ಝುಲಪಿ ಇವರ ತೋಟದಲ್ಲಿ ಗೋವಿನಜೋಳ ಬೆಳೆಯಲ್ಲಿ ನ್ಯಾನೊ ಯೂರಿಯಾ ಮತ್ತು  ನ್ಯಾನೊ ಡಿ.ಎ.ಪಿ ಬಳಕೆಯ ಕುರಿತು ಡ್ರೋಣ್ ಮೂಲಕ ಸಿಂಪರಣೆ ಮಾಡುವ ಕುರಿತು ಮಾಹಿತಿ ನೀಡಲಾಯಿತು   

ಜಮಖಂಡಿ: ತಾಲ್ಲೂಕಿನಲ್ಲಿ ಮುಂಗಾರು ಬೆಳೆಗಳಿಗೆ ಯೂರಿಯಾ ಅಭಾವ ಉಂಟಾಗಿದ್ದು, ರೈತರು ಗೊಬ್ಬರಕ್ಕಾಗಿ ಪರದಾಡುವಂತಾಗಿದೆ.

ಮೆಕ್ಕೆಜೋಳ, ಕಬ್ಬು, ಅರಿಸಿನ ಸೇರಿದಂತೆ ಬಿತ್ತನೆಯಾಗಿ ತಿಂಗಳಾಗಿದೆ. ಮಳೆ ಕೊರತೆ ನಡುವೆ ಬೆಳೆ ಉಳಿಸಿಕೊಳ್ಳುವ ಸವಾಲು ರೈತರಿಗೆ ಎದುರಾಗಿದೆ. ಕೆಲ ದಿನಗಳಿಂದ ತುಂತುರು ಮಳೆ ಸುರಿಯುತ್ತಿರುವುದರಿಂದ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ.

ಸಕಾಲದಲ್ಲಿ ಗೊಬ್ಬರ ನೀಡದಿದ್ದರೆ ಇಳುವರಿ ಬರುವುದಿಲ್ಲ ಎಂಬ ಆತಂಕದಿಂದ ರೈತರು ಅಂಗಡಿಗಳಿಗೆ ಅಲೆಯುತ್ತಿದ್ದಾರೆ. ಆದರೆ ಗೊಬ್ಬರ ಖಾಲಿಯಾಗಿದೆ ಎಂಬ ಉತ್ತರದಿಂದ ನಿರಾಸೆಗೊಂಡಿದ್ದಾರೆ.

ADVERTISEMENT

ಸರ್ಕಾರ ಯೂರಿಯಾ ಗೊಬ್ಬರಕ್ಕೆ ಪೊಟ್ಯಾಷ್, ಡಿಎಪಿ, ನ್ಯಾನೊ ಡಿಎಪಿ, ನ್ಯಾನೊ ಯೂರಿಯಾ ಲಿಂಕ್ ಮಾಡಿದೆ. ಗೊಬ್ಬರ ಮಾರಾಟಗಾರರು ಐದು ಟನ್ ಯೂರಿಯಾಕ್ಕೆ ಬೇಡಿಕೆ ಸಲ್ಲಿಸಿದರೆ 10 ಟನ್ ಪೊಟ್ಯಾಷ್, ಎರಡು ಬಾಕ್ಸ್ ನ್ಯಾನೊ ಡಿಎಪಿ ಕಡ್ಡಾಯವಾಗಿ ಖರೀದಿಸಬೇಕು. ಬೇಡಿಕೆ ಇಲ್ಲದ ಅನವಶ್ಯಕ ಗೊಬ್ಬರಗಳನ್ನು ಲಿಂಕ್ ಮಾಡಿರುವುದರಿಂದ ಇಲ್ಲಿನ ರಸಗೊಬ್ಬರ ಮಾರಾಟಗಾರರು ಯೂರಿಯಾ ಬೇಡಿಕೆ ಸಲ್ಲಿಸುವುದನ್ನು ಬಿಟ್ಟಿದ್ದಾರೆ. ಗೊಬ್ಬರ ಅಭಾವಕ್ಕೆ ಇದು ಕೂಡ ಕಾರಣ ಎಂದು ಹೇಳಲಾಗುತ್ತಿದೆ.

ಕೆಲ ವ್ಯಾಪಾರಿಗಳು ಇದನ್ನೇ ಬಂಡವಾಳ ಮಾಡಿಕೊಂಡು ಯೂರಿಯಾವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ದಾಸ್ತಾನು ಲಭ್ಯವಿದ್ದರೂ ಇಲ್ಲ ಎನ್ನುತ್ತಿದ್ದಾರೆ. ಲಿಂಕ್ ಗೊಬ್ಬರ ಖರೀದಿಗೆ ಒತ್ತಡ ಹೇರುತ್ತಿದ್ದಾರೆ ಎಂಬ ದೂರು ಸಾಮಾನ್ಯವಾಗಿವೆ.

ಯೂರಿಯಾ ಜತೆಗೆ ಲಿಂಕ್‌ನಲ್ಲಿ ಕಳಿಸಿರುವ ಪೊಟ್ಯಾಷ್, ಜಿಂಕ್‌ನಂತಹ ಅನವಶ್ಯಕ ಗೊಬ್ಬರವನ್ನು ರೈತರು ಖರೀದಿಸುವುದಿಲ್ಲ. ಕಂಪನಿಯವರು ಲಿಂಕ್ ಕಡ್ಡಾಯ ಮಾಡಿರುವುದರಿಂದ ಅಂಗಡಿಯವರ ಜೊತೆ ರೈತರು ಜಗಳಕ್ಕೆ ಇಳಿಯುತ್ತಿದ್ದಾರೆ ಎಂದು ಅಂಗಡಿಯ ಮಾಲೀಕರೊಬ್ಬರು ತಿಳಿಸಿದರು.

‘ಸರ್ಕಾರ ಲಿಂಕ್ ನಿಯಮವನ್ನು ಕೈ ಬಿಟ್ಟು ಸಮರ್ಪಕವಾಗಿ ರಸಗೊಬ್ಬರ ಪೂರೈಕೆ ಮಾಡಬೇಕು. ಕೃಷಿ ಇಲಾಖೆಯವರು ಗೊಬ್ಬರ ವಹಿವಾಟಿನ ಮೇಲೆ ನಿಗಾ ಇರಿಸಬೇಕು’ ಎಂದು ರೈತ ಮುಖಂಡ ಕಲ್ಲಪ್ಪ ಬಿರಾದಾರ ಆಗ್ರಹಿಸಿದ್ದಾರೆ.

ನ್ಯಾನೊ ಗೊಬ್ಬರಗಳು ಪರಿಸರ ಸ್ನೇಹಿಯಾಗಿದ್ದು, ವಾತಾವರಣ ವೈಪರೀತ್ಯದ ದುಷ್ಪರಿಣಾಮ ತಡೆಗಟ್ಟುತ್ತದೆ. ನ್ಯಾನೊ ಯೂರಿಯಾ ಲಭ್ಯವಿದ್ದರೂ ಬಳಕೆಗೆ ರೈತರು ಒಲವು ತೋರುತ್ತಿಲ್ಲ, ರೈತರು ಹೆಚ್ಚಾಗಿ ನೇರ ರಸಗೊಬ್ಬರಗಳ ಬಳಕೆ ಮಾಡುತ್ತಿರುವುದರಿಂದ ರಸಗೊಬ್ಬರಗಳ ಅಭಾವ ಹೆಚ್ಚಾಗಿದೆ.

ನ್ಯಾನೊ ಗೊಬ್ಬರ ಬಳಕೆ: ಉತ್ತಮ ಬೆಳೆ
‘ಅರ್ಧ ಲೀಟರಿನ ಒಂದು ಬಾಟಲ್ ಒಂದು ಚೀಲ ಹರಳು ರಸಗೊಬ್ಬರಕ್ಕೆ ಸಮವಾಗಿದೆ. ನ್ಯಾನೊ ಗೊಬ್ಬರಗಳ ಬಳಕೆಯಿಂದ ಬೆಳೆಗಳು ಉತ್ತಮ ರೀತಿಯಲ್ಲಿ ಬೆಳವಣಿಗೆ ಹೊಂದುತ್ತವೆ. ಆದ್ದರಿಂದ ರೈತರು ದ್ರಾವಣವನ್ನು ಬಳಸಬೇಕು’ ಎಂದು ಜಮಖಂಡಿ ಸಹಾಯಕ ಕೃಷಿ ನಿರ್ದೇಶಕ ಸಿದ್ದಪ್ಪ ಪಟ್ಟಿಹಳ್ಳ ತಿಳಿಸಿದರು.
‘ಗುಣಮಟ್ಟ ಇಳುವರಿ ಹೆಚ್ಚಳ’
‘ಇಫ್ಕೋ ಸಂಸ್ಥೆಯು ನ್ಯಾನೊ ತಂತ್ರಜ್ಞಾನವನ್ನು ಬಳಸಿಕೊಂಡು ಯೂರಿಯಾ ಹಾಗೂ ಡಿ.ಎ.ಪಿ ದ್ರಾವಣವನ್ನು ತಯಾರಿಸಿದೆ. ನ್ಯಾನೊ ಯೂರಿಯಾ ಮತ್ತು ನ್ಯಾನೊ ಡಿ.ಎ.ಪಿಗಳ ಬಳಕೆ ಮಾಡುವುದರಿಂದ ಶೇ 50 ರಷ್ಟು ರಸಗೊಬ್ಬರಗಳ ಬಳಕೆ ಕಡಿತಗೊಳಿಸಿ ಬೆಳೆಯ ಗುಣಮಟ್ಟ ಮತ್ತು ಇಳುವರಿ ಹೆಚ್ಚಿಸುತ್ತದೆ’ ಎಂದು ಉಪ ಕೃಷಿ ನಿರ್ದೇಶಕಿ ಮಂಜುಳಾ ಬಸವರೆಡ್ಡಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.