
ಬೀಳಗಿ: ಟಿ.ವಿ.ಮತ್ತು ಮೊಬೈಲ್ ಮಕ್ಕಳ ಆರೋಗ್ಯ ಮತ್ತು ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಮಕ್ಕಳನ್ನು ಇವುಗಳ ದಾಸರಾಗದಂತೆ ನೋಡಿಕೊಂಡು ಅವರಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ದೇಶಭಕ್ತಿಯನ್ನು ಕಲಿಸಿಕೊಡುವುದು ಇಂದಿನ ಅಗತ್ಯವಾಗಿದೆ ಎಂದು ಸಿಪಿಐ ಹನಮಂತ ಸಣಮನಿ ಹೇಳಿದರು.
ತಾಲ್ಲೂಕಿನ ಬೂದಿಹಾಳ ಎಸ್.ಜಿ ಗ್ರಾಮದ ಫಕೀರೇಶ್ವರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನಿವೃತ್ತ ಉಪನ್ಯಾಸಕ ಗುರುಪಾದಪ್ಪ ಮುರುಗೆಪ್ಪ ಚನ್ನಪ್ಪಗೋಳ ಮಾತನಾಡಿ, ಈಗಿನ ಕಾಲದ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸಿದರೆ ವೃದ್ಧಾಪ್ಯದಲ್ಲಿ ನಮ್ಮನ್ನು ಸಾಕಿ ಸಲಹುತ್ತಾರೆ. ಆದರೆ ನಾವಿಂದು ಇಂಗ್ಲಿಷ್ ಮಾಧ್ಯಮದ ಶಿಕ್ಷಣಕ್ಕೆ ಜ್ಯೋತು ಬಿದ್ದ ಪರಿಣಾಮ ಅವರು ನಮ್ಮನ್ನು ವೃದ್ಧಾಶ್ರಮಕ್ಕೆ ಕಳುಹಿಸುತ್ತಿದ್ದಾರೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಆದಪುರ ಮಾತನಾಡಿ, ಹಣ ಗಳಿಕೆಯೊಂದೇ ಬದುಕಿನ ಗುರಿಯಾಗಬಾರದು. ಮೌಲ್ಯಗಳಿಲ್ಲದ ಶ್ರೀಮಂತಿಕೆ ವ್ಯರ್ಥ ಎಂದರು.
ಶಾಲೆಯ ಕಾರ್ಯದರ್ಶಿ ಬಸವರಾಜ ಮಂಟೂರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ ಜಂಬಗಿ ಅಡವಿ ಸಿದ್ದೇಶ್ವರ ಸ್ವಾಮೀಜಿ ಹಿರೇಮಠ ಮಾತನಾಡಿ, ‘ಸಂಸ್ಕಾರವಿಲ್ಲದ ಮಕ್ಕಳು ಹಾದಿ ತಪ್ಪುವುದು ಸಹಜ. ಇತ್ತೀಚಿನ ದಿನಗಳಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ಸಮಾಜದ ದುರಂತ. ಮಗ ಓದದಿದ್ದರೂ ಪರವಾಗಿಲ್ಲ, ಆದರೆ ಸಂಸ್ಕಾರವಂತನಾಗಿರಬೇಕು ಎಂದು ಹೇಳಿದರು.
ಕ್ಷೇತ್ರ ಸಮನ್ವಯಾಧಿಕಾರಿ ಶಿವಾಜಿ ಕಾಂಬಳೆ, ಶಿಕ್ಷಣ ಸಂಯೋಜಕ ಜಗದೀಶ ಖೋತ, ಶಿಕ್ಷಕ ಜಗದೀಶ ಮುಚ್ಚಂಡಿ,ರವಿ ಮರಡಿ, ಶಶಿಕುಮಾರ ಹೆರಕಲ್ಲ, ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕ ಅಕ್ಷಯ ನಾಯ್ಕರ, ಪಾಲಕರ ಪ್ರತಿನಿಧಿಗಳಾದ ಸಂಗಯ್ಯ ಚಿಗರಿಮಠ, ಸದಾಶಿವ ತೋಳಮಟ್ಟಿ, ಡಿ.ಎಸ್ ಕರಿಗಾರ, ರಂಗನಾಥ ಬಿರಾದಾರ, ಬಸಪ್ಪ ಕಡಪಟ್ಟಿ, ಬಸಲಿಂಗಪ್ಪ ಕುಸ್ತಿ, ಹಾಗೂ ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳು, ಶಿಕ್ಷಕರು ಮತ್ತು ಪಾಲಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.