ರಬಕವಿ ಬನಹಟ್ಟಿ: ಹೋಳಿ ಹಬ್ಬಕ್ಕೆ ಅವಳಿ ನಗರಗಳು ಸಜ್ಜಾಗಿವೆ. ಮಾರ್ಚ್ 13ರಂದು ಕಾಮ ದೇವತೆಯ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದ್ದು, 14ರಂದು ಬಣ್ಣದಾಟ ನಡೆಯಲಿದೆ.
ಇಲ್ಲಿನ ಕನ್ನಡ ಶಾಲೆಯ ಮುಂಭಾಗದಲ್ಲಿ ಬಕರೆ ಮನೆತನದ ನಿತ್ಯಾನಂದ, ಸಂಜಯ ಮತ್ತು ಅಕ್ಷಯ ಕಾಮಣ್ಣ ಮೂರ್ತಿಗಳನ್ನು ತಯಾರಿಸುತ್ತಿದ್ದು, ಅಂದಾಜು ಮೂರು ನೂರಕ್ಕೂ ಹೆಚ್ಚು ಮೂರ್ತಿಗಳನ್ನು ಕಳೆದ ಒಂದು ತಿಂಗಳಿಂದ ಮಾಡುತ್ತಿದ್ದಾರೆ. ತಹರೇವಾರಿ ಕಾಮಣ್ಣನ ಮೂರ್ತಿಗಳಿವೆ.
ಸ್ಕೂಟರ್, ಟ್ರ್ಯಾಕ್ಟರ್ ಓಡಿಸುತ್ತಿರುವ ಕಾಮಣ್ಣ, ಪ್ರಾಣಿ ಮತ್ತು ಪಕ್ಷಿಗಳ ಮೇಲೆ ಸವಾರಿ ಮಾಡುತ್ತಿರುವುದು, ಚೋಟಾ ಭೀಮನ ಮೇಲೆ ಕುಳಿತ ಕಾಮಣ‍್ಣ, ಪುನೀತ್ ರಾಜ್‌ಕುಮಾರ್ ಜೊತೆಗೆ ಸೇರಿದಂತೆ ವೈವಿಧ್ಯಮಯವಾದ ಕಾಮಣ್ಣನ ಮೂರ್ತಿಗಳನ್ನು ತಯಾರು ಮಾಡಿದ್ದಾರೆ. ₹100ರಿಂದ ₹750ರ ವೆರೆಗೆ ಬೆಲೆ ಇದೆ.
ರಬಕವಿ, ಬನಹಟ್ಟಿ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮೀಣ ಪ್ರದೇಶದ ಜನರು ಬುಧವಾರ ಸಂಜೆ ಮೆರವಣಿಗೆಯಲ್ಲಿ ಕಾಮಣ್ಣನ ಮೂರ್ತಿಗಳನ್ನು ತೆಗೆದುಕೊಂಡು ಹೋಗುತ್ತಾರೆ.
‘ಮಂಗಳವಾರ ಪೇಟೆಯಲ್ಲಿ ಬಣ್ಣದ ವ್ಯಾಪಾರ ಜೋರಾಗಿದ್ದು, ಮಕ್ಕಳು ಸೇರಿದಂತೆ ಮಹಿಳೆಯರು ಕೂಡ ಬಣ್ಣಗಳನ್ನು ಖರೀದಿ ಮಾಡುತ್ತಿದ್ದಾರೆ. ಇಲ್ಲಿನ ಬಹುತೇಕ ವ್ಯಾಪಾರಿಗಳು ಹುಬ್ಬಳ್ಳಿ ಮತ್ತು ಮುಂಬೈಗಳಿಂದ ಬಣ್ಣಗಳನ್ನು ತರುತ್ತಾರೆ. ನೈಸರ್ಗಿಕ ಬಣ್ಣಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಂಡು ಬರಲಾಗಿದೆ. ಪಿಚಕಾರಿ ಹಾಗೂ ಮುಖವಾಡಗಳೂ ಮಾರಾಟವಾಗುತ್ತಿವೆ’ ಎಂದು ಬಣ‍್ಣದ ವ್ಯಾಪಾರಸ್ಥ ಭೀಮಶಿ ರಾವಳ ತಿಳಿಸಿದರು.
ಹೆಚ್ಚಿದ ಹಲಗೆ ಸದ್ದು: ಹೋಳಿ ಹಬ್ಬ ಹತ್ತಿರವಾಗುತ್ತಿದ್ದಂತೆ ನಗರದಲ್ಲಿ ಹಲಗೆ ಸದ್ದು ಹೆಚ್ಚಾಗುತ್ತಿದೆ. ಸಂಜೆಯಾಗುತ್ತಿದ್ದಂತೆ ಯುವಕರು ಹಲಗೆ ನುಡಿಸುತ್ತಾರೆ. ರಾತ್ರಿ ಸಮಯದಲ್ಲಿ ಹಲಗೆ ಬಾರಿಸುತ್ತ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.