ಮಹಾಲಿಂಗಪುರ: ಪಟ್ಟಣದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಸವಾರರು, ಪಾದಚಾರಿಗಳು ರಸ್ತೆ ನಿಯಮ ಪಾಲಿಸದ ಕಾರಣ ಸಂಚಾರ ದಟ್ಟಣೆಯಿಂದಾಗಿ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿವೆ.
ಬಸ್ ನಿಲ್ದಾಣ ಬಳಿಯ ಚನ್ನಮ್ಮ ವೃತ್ತ ಹಾಗೂ ಮುಧೋಳ ರಸ್ತೆಯ ಬಸವೇಶ್ವರ ವೃತ್ತದಲ್ಲಿ ಸಂಚರಿಸಬೇಕಾದರೆ ಸಾರ್ವಜನಿಕರು ಹರಸಾಹಸ ಪಡಬೇಕಿದೆ. ಡಬಲ್ ರಸ್ತೆ, ಎಪಿಎಂಸಿ ರಸ್ತೆ, ಜವಳಿ ಬಜಾರ್, ಮುಖ್ಯರಸ್ತೆಗಳಲ್ಲಿ ಇದು ನಿತ್ಯ ಸಮಸ್ಯೆ ಆಗಿದೆ.
ಸುತ್ತಲಿನ ಹತ್ತಾರು ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿರುವ ಪಟ್ಟಣಕ್ಕೆ ವ್ಯಾಪಾರ ವಹಿವಾಟಿಗೆ ಸಾವಿರಾರು ಜನ ನಿತ್ಯ ಬರುತ್ತಾರೆ. ಏಕಮುಖ ಸಂಚಾರ ರಸ್ತೆಗಳಲ್ಲಿ (ಒನ್ ವೇ) ವಿರುದ್ಧ ದಿಕ್ಕಿನಲ್ಲಿ ವಾಹನಗಳು ಸಂಚರಿಸುವುದು ಒಂದೆಡೆಯಾದರೆ ಇನ್ನೊಂದೆಡೆ ರಸ್ತೆ ಬದಿಯಲ್ಲಿ ಬೇಕಾಬಿಟ್ಟಿ ವಾಹನ ನಿಲ್ಲಿಸುವುದು ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ.
ಸಾರ್ವಜನಿಕರು ರಸ್ತೆ ನಿಯಮ ಪಾಲಿಸುತ್ತಿಲ್ಲ. ಇದರಿಂದ ದಿನಂಪ್ರತಿ ಸಣ್ಣಪುಟ್ಟ ಅಪಘಾತಗಳು ಸಾಮಾನ್ಯವಾಗಿವೆ. ವಾಹನ ಚಾಲಕರು, ಪಾದಚಾರಿಗಳು ಕೂಡ ನಿಯಮ ಪಾಲಿಸುತ್ತಿಲ್ಲ. ಬೈಕ್ ಮೇಲೆ ಮೂರು ಜನ ಕುಳಿತು ಸಂಚರಿಸುವುದು ಸಾಮಾನ್ಯ ದೃಶ್ಯ. ರಿಕ್ಷಾ ಹಾಗೂ ಬಾಡಿಗೆ ಗೂಡ್ಸ್ ವಾಹನಗಳನ್ನು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತದೆ.
ಪಟ್ಟಣದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಮುಖ್ಯರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಿರಲು ದಿನ ಬಿಟ್ಟು ದಿನಕ್ಕೆ ಒಂದೊಂದು ಬದಿಗೆ ವಾಹನ ನಿಲ್ಲಿಸಲು ಪೊಲೀಸ್ ಇಲಾಖೆ ನಿಯಮ ರೂಪಿಸಿದ್ದರೂ ಪಾಲನೆಯಾಗುತ್ತಿಲ್ಲ. ಗಾಂಧಿ ವೃತ್ತದಿಂದ ಚನ್ನಮ್ಮ ವೃತ್ತಕ್ಕೆ ತೆರಳಬೇಕಾದರೆ ಜೀವ ಕೈಯಲ್ಲಿ ಹಿಡಿದೇ ಸಂಚರಿಸಬೇಕು.
ಪಾದಚಾರಿ ಮಾರ್ಗಗಳು ಅತಿಕ್ರಮಣಗೊಂಡಿದ್ದರಿಂದ, ಪಾದಚಾರಿಗಳು ರಸ್ತೆ ಮೇಲೆ ಓಡಾಡುವುದು ಅನಿವಾರ್ಯವಾಗಿದೆ. ಯಾವ ಕಡೆ ಯಾವ ವಾಹನ ಬರುತ್ತದೆ ಎಂಬುದೇ ತಿಳಿಯದೇ ಅಪಘಾತಕ್ಕೆ ಕಾರಣವಾಗುತ್ತಿದೆ. ಪೊಲೀಸರು ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಮೂಡಿಸಿದರೂ ಜನತೆ ನಿಯಮ ಪಾಲಿಸುತ್ತಿಲ್ಲ.
ಸಂಚಾರ ದಟ್ಟಣೆ ನಿಯಂತ್ರಣಕ್ಕೆ ರಸ್ತೆ ಅಭಿವೃದ್ಧಿ ಆಗಬೇಕು. ಬಹುಮಹಡಿ ಕಟ್ಟಡ ನಿರ್ಮಿಸುವಾಗ ಪಾರ್ಕಿಂಗ್‍ಗೆ ಸ್ಥಳ ಬಿಡಬೇಕು. ಸಂಚಾರ ನಿಯಮ ಪಾಲಿಸುವಂತೆ ಸವಾರರಿಗೆ ತಿಳಿ ಹೇಳಲಾಗುತ್ತಿದೆಸಂಜೀವ ಬಳೇಗಾರ, ಸಿಪಿಐ ಬನಹಟ್ಟಿ ವೃತ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.