ಮುಧೋಳ: ನಗರದ ಸಿದ್ಧರಾಮೇಶ್ವರ ಕಾಲೊನಿಯಲ್ಲಿ ಮನೆಯೊಂದರಲ್ಲಿ ವಾಸವಾಗಿರುವ ನಿವೃತ್ತ ಪಿಡಬ್ಲ್ಯುಡಿ ಎಂಜಿನಿಯರ್ ಹನುಮಂತಗೌಡ ಸಂಕಪ್ಪನವರ ಮನೆಯಲ್ಲಿ ಮಂಗಳವಾರ ಕಳ್ಳತನದ ಯತ್ನ ನಡೆದಿದ್ದು, ಸಿಸಿಟಿವಿ ಕ್ಯಾಮೆರಾದ ಎಚ್ಚರಿಕೆ ಸಂದೇಶದಿಂದಾಗಿ ಕಳ್ಳತನವಾಗುವುದನ್ನು ತಡೆಯಲಾಗಿದೆ.
ಹನುಮಂತಗೌಡ ಅವರ ಮಗಳು ಶೃತಿ ಅಮೆರಿಕದಲ್ಲಿ ನೆಲೆಸಿದ್ದು, ಇಲ್ಲಿಯ ಸಿಸಿಟಿವಿ ಕ್ಯಾಮೆರಾದ ಮೂಲಕ ಮನೆಯ ಸುತ್ತ ಮುತ್ತಲಿನ ಚಟುವಟಿಕೆ ಗಮನಿಸುತ್ತಿದ್ದರು. ಅದರಂತೆ ಕಳ್ಳರು ಮನೆಯೊಳಗೆ ನುಗ್ಗುತ್ತಿದ್ದಂತೆ ಅವರಿಗೆ ಎಚ್ಚರಿಕೆಯ ಸಂದೇಶ ಹೋಗಿದೆ. ತಕ್ಷಣ ತನ್ನ ತಂದೆಯನ್ನು ಶೃತಿ ಜಾಗೃತಗೊಳಿಸಿದ್ದಾರೆ. ಇದರಿಂದ ಕಳ್ಳತನವಾಗದಂತೆ ಶೃತಿ ತಡೆದಿದ್ದಾರೆ.
ಅದೇ ರಾತ್ರಿ ಸಿದ್ಧರಾಮೇಶ್ವರ ನಗರದ ಅಶೋಕ ಕರೆಹೊನ್ನ ಅವರ ಮನೆಗೆ ನುಗ್ಗಿದ ಕಳ್ಳರು, ಮಲಗುವ ಕೋಣೆಯ ಕಿಟಕಿಯ ಸರಳುಗಳನ್ನು ಕೊರೆದು 75 ಗ್ರಾಂ ಬಂಗಾರದ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಈ ಕುರಿತು ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.