ADVERTISEMENT

ಆಲಮಟ್ಟಿ ಹಿನ್ನೀರು ಪ್ರದೇಶಕ್ಕೆ ರಾಶಿ, ರಾಶಿ ತ್ಯಾಜ್ಯ

ಒಂದೆಡೆ ಹೂಳೆತ್ತಲು ಸರ್ಕಾರ ಹೆಣಗಾಟ, ಇನ್ನೊಂದೆಡೆ ಹಿನ್ನೀರಿನ ಮಡಿಲಿಗೆ ಮಣ್ಣು, ಕಟ್ಟಡ ತ್ಯಾಜ್ಯ

ಬಸವರಾಜ ಹವಾಲ್ದಾರ
Published 9 ಜೂನ್ 2023, 4:19 IST
Last Updated 9 ಜೂನ್ 2023, 4:19 IST
ಬಾಗಲಕೋಟೆ ಬಳಿ ಆಲಮಟ್ಟಿ ಹಿನ್ನೀರಿ ಪ್ರದೇಶದಲ್ಲಿ ರಾಶಿ, ರಾಶಿ ಮಣ್ಣು, ತ್ಯಾಜ್ಯ ತಂದು ಸುರಿದಿರುವುದು
ಬಾಗಲಕೋಟೆ ಬಳಿ ಆಲಮಟ್ಟಿ ಹಿನ್ನೀರಿ ಪ್ರದೇಶದಲ್ಲಿ ರಾಶಿ, ರಾಶಿ ಮಣ್ಣು, ತ್ಯಾಜ್ಯ ತಂದು ಸುರಿದಿರುವುದು   

ಬಾಗಲಕೋಟೆ:  ಬಾಗಲಕೋಟೆಯಲ್ಲಿ ಆಲಮಟ್ಟಿ ಹಿನ್ನೀರು ನಿಲ್ಲುವ ಸ್ಥಳದಲ್ಲಿ ನೂರಾರು ಲಾರಿ ಮಣ್ಣು, ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿದೆ. ಇದರಿಂದ ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹ ಪ್ರಮಾಣದ ಕಡಿಮೆಯಾಗಲಿದೆ.

ಆಲಮಟ್ಟಿ ಜಲಾಶಯವು ಪೂರ್ಣ ಪ್ರಮಾಣದಲ್ಲಿ (519.60 ಮೀಟರ್‌) ಭರ್ತಿಯಾದಾಗ 123 ಟಿಎಂಸಿ ಅಡಿ ನೀರು ಸಂಗ್ರಹವಾಗುತ್ತದೆ. ಈಗ 507.88 ಮೀಟರ್‌ ಇದ್ದು, 20.97 ಟಿಎಂಸಿ ಅಡಿ ನೀರಿದೆ. ಅದರಲ್ಲಿ ಡೆಡ್‌ ಸ್ಟೋರೇಜ್‌ ಹೊರತುಪಡಿಸಿ 3.35 ಬಳಸಬಹುದಾಗಿದೆ.

ಆಲಮಟ್ಟಿ ಜಲಾಶಯದಲ್ಲಿಯೂ ಸಂಗ್ರಹವಾಗಿರುವ ಹೂಳಿನ ಕುರಿತು ಕರ್ನಾಟಕ ಎಂಜಿನಿಯರಿಂಗ್ ಸಂಶೋಧನಾ ಕೇಂದ್ರ (ಕೆಇಆರ್ ಎಸ್) ಸರ್ವೆ ಮಾಡಿದೆ. ಕೇಂದ್ರ ಜಲ ಆಯೋಗಕ್ಕೆ ವರದಿ ಸಲ್ಲಿಸಬೇಕಿದೆ. 2008ರಲ್ಲಿ ದೆಹಲಿ ಮೂಲದ ತೇಜೋವಿಕಾಸ ಲಿಮಿಟೆಡ್ ಸಂಸ್ಥೆ ಅಧ್ಯಯನ ನಡೆಸಿ, 2.78 ಟಿಎಂಸಿ ಅಡಿ ಹೂಳು ಸಂಗ್ರಹವಾಗಿದೆ ಎಂದು ವರದಿ ನೀಡಿತ್ತು.

ADVERTISEMENT

ತುಂಗಭದ್ರಾ ಜಲಾಶಯದಲ್ಲಿ 30 ಟಿಎಂಸಿ ಅಡಿಯಷ್ಟು ಹೂಳು ತುಂಬಿಕೊಂಡ ಕಾರಣ ನೀರಿನ ಸಂಗ್ರಹ ಪ್ರಮಾಣ ಕಡಿಮೆಯಾಗಿದೆ. ಹೂಳೆತ್ತಲು ಸಾಧ್ಯವಿಲ್ಲದಂತಹ ಸ್ಥಿತಿ ನಿರ್ಮಾಣಗೊಂಡಿದೆ. ಪರ್ಯಾಯ ಜಲಾಶಯ ನಿರ್ಮಾಣಕ್ಕೂ ಸಾಧ್ಯವಾಗುತ್ತಿಲ್ಲ. ನೀರಾವರಿ ಪ್ರಮಾಣ ಕಡಿಮೆಯಾಗುತ್ತಿದೆ

ನೈಸರ್ಗಿಕವಾಗಿ ಬಂದು ಸೇರುವ ಹೂಳಿನ ಜತೆಗೆ ಇಂತಹ ತ್ಯಾಜ್ಯ ತಂದು ಹಾಕಿದರೆ, ಹೂಳು‌ ಸಂಗ್ರಹದ ಪ್ರಮಾಣ ಹೆಚ್ಚಾಗಲಿದೆ. ಹಿನ್ನೀರು ನಿಲ್ಲುವ ಇದೇ ಜಾಗದಲ್ಲಿ ದ್ವಿಪಥವಿದ್ದ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪ‍ಥಕ್ಕೆ ವಿಸ್ತರಿಸಲಾಗುತ್ತಿದೆ. ರಸ್ತೆ ನಿರ್ಮಾಣಕ್ಕಾಗಿಯೂ ಕಲ್ಲು, ಮಣ್ಣು ತಂದು ಸುರಿಯಲಾಗುತ್ತಿದೆ. ಅದನ್ನು ನೋಡಿದ ಸಾರ್ವಜನಿಕರೂ ಕಟ್ಟಡಗಳ ತ್ಯಾಜ್ಯ ತಂದು ಸುರಿಯುತ್ತಿದ್ದಾರೆ.

‘ಮುಂಗಾರು ಮಳೆಯಾಗುತ್ತಿದ್ದಂತೆಯೇ ಘಟಪ್ರಭಾ ನದಿಯಲ್ಲಿ ಈ ತ್ಯಾಜ್ಯ ಕೊಚ್ಚಿಕೊಂಡು ಹೋಗಿ ಆಲಮಟ್ಟಿ ಹಿನ್ನೀರು ಸೇರಲಿದೆ. ಉಳಿದದ್ದು ಸಹ ಹಿನ್ನೀರಿನಲ್ಲಿ ಮುಳುಗಿ ಹೋಗಲಿದೆ’ ಎನ್ನುವ ಆತಂಕ ವ್ಯಕ್ತಪಡಿಸುತ್ತಾರೆ ಬಾಗಲಕೋಟೆಯ ಸಂಗಮೇಶ ದೊಡ್ಡಮನಿ.

ಕೊಳಚೆ ನೀರು ಸೇರ್ಪಡೆ: ಬಾಗಲಕೋಟೆ ಪಟ್ಟಣದ ಕೊಳಚೆ ನೀರೂ ಸಹ ಘಟಪ್ರಭಾದ ಮೂಲಕ ಆಲಮಟ್ಟಿ ಹಿನ್ನೀರು ಸೇರುತ್ತಿದೆ. ಇಲ್ಲಿಯ ನೀರನ್ನೇ ಪಟ್ಟಣ ಸೇರಿದಂತೆ ಹಲವು ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಬಳಸಲಾಗುತ್ತದೆ.

ಆಲಮಟ್ಟಿ ಹಿನ್ನೀರಿನಲ್ಲಿ ತ್ಯಾಜ್ಯ ತಂದು ಹಾಕುತ್ತಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸುತ್ತೇನೆ

–ನವೀದ್ ಖಾಜಿ ಜೂನಿಯರ್‌ ಎಂಜಿನಿಯರ್‌ ನಗರಸಭೆ ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.