ADVERTISEMENT

ಗುಳೇದಗುಡ್ಡ: ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ

ತೆಗ್ಗಿ ಗ್ರಾಮದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ

​ಪ್ರಜಾವಾಣಿ ವಾರ್ತೆ
Published 20 ಮೇ 2025, 6:30 IST
Last Updated 20 ಮೇ 2025, 6:30 IST
ತಾಲ್ಲೂಕಿನ ತೆಗ್ಗಿ ಗ್ರಾಮದಲ್ಲಿ ನೀರಿಗಾಗಿ ಗ್ರಾಮ ಪಂಚಾಯತಿಯ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು
ತಾಲ್ಲೂಕಿನ ತೆಗ್ಗಿ ಗ್ರಾಮದಲ್ಲಿ ನೀರಿಗಾಗಿ ಗ್ರಾಮ ಪಂಚಾಯತಿಯ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು   

ಗುಳೇದಗುಡ್ಡ: ತಾಲ್ಲೂಕು 38 ಹಳ್ಳಿಗಳ ವ್ಯಾಪ್ತಿ ಹೊಂದಿದೆ. ಅದರಲ್ಲಿ ಅರ್ಧಕ್ಕೂ ಹೆಚ್ಚು ಹಳ್ಳಿಗಳು ನೀರಿನ ಸಮಸ್ಯೆ ಎದುರಿಸುತ್ತಿವೆ.

ಆಸಂಗಿ, ಲಾಯದಗುಂದಿ, ನಾಗರಾಳ, ಸಬ್ಬಲಹುಣಸಿ ಗ್ರಾಮಗಳಿಗೆ ಆಸಂಗಿಯ ಹತ್ತಿರ ಕೆರೆ ನಿರ್ಮಾಣ ಮಾಡಿ ಮಲಪ್ರಭಾ ನದಿಯ ನೀರನ್ನು ಸಂಗ್ರಹಿಸಿ ಸರಬರಾಜು ಮಾಡಲಾಗುತ್ತಿದೆ ಆದರೆ ನೀರು ಕಲುಷಿತವಾಗಿರುವುದರಿಂದ ಅದನ್ನು ಕುಡಿಯಲು ಉಪಯೋಗಿಸದೇ, ಇತರ ಬಳಕೆಗೆ ಹಾಗೂ ದನಕರುಗಳಿಗೆ ಮಾತ್ರ ಕುಡಿಯಲು ಉಪಯೋಗಿಸಲಾಗುತ್ತಿದೆ. ಗ್ರಾಮಕ್ಕೊಂದು ಕೊಳವೆ ಬಾವಿ ಇದೆ. ಅದರಿಂದ ನೀರು ಸಂಗ್ರಹಿಸಿ ಕುಡಿಯಲು ಸರಬರಾಜು ಮಾಡಲಾಗುತ್ತಿದೆ. ವಿದ್ಯುತ್ ಕೈಕೊಟ್ಟರೆ, ಕೊಳವೆಬಾವಿ ಹಾಳಾದರೆ ನೀರಿನ ತೀವ್ರ ತೊಂದರೆ ಎದುರಿಸಬೇಕಾಗುತ್ತದೆ. ತಾಲ್ಲೂಕಿನ ಹುಲ್ಲಿಕೇರಿ ಗ್ರಾಮದಲ್ಲಿ ಒಂದೇ ಕೊಳವೆ ಬಾವಿ ಇದ್ದು ಅದು ಹಾಳಾದರೆ ಟ್ಯಾಂಕರ್ ನೀರೇ ಗತಿ.

ತೆಗ್ಗಿ ಗ್ರಾಮದಲ್ಲಿ ನೀರಿನ ತೀವ್ರ ತೊಂದರೆ ಇದ್ದು ಈಚಿಗೆ ಗ್ರಾಮಸ್ಥರು ಕೆಲವಡಿ ಗ್ರಾಮ ಪಂಚಾಯತಿಗೆ ಖಾಲಿ ಕೊಡಗಳೊಂದಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರು. ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ತೆಗ್ಗಿ ಗ್ರಾಮಕ್ಕೆ ಪೂರೈಸಲಾಗುತ್ತಿದೆ.

ADVERTISEMENT

ಕಾರ್ಯಗತಗೊಳ್ಳದ ಜಲಜೀವನ್ ಮಿಷನ್‌: ‘ಬಹುಗ್ರಾಮ ಕುಡಿಯುವ ನೀರಿಗಾಗಿ ಜಲಜೀವನ ಮಿಷನ್‌ ಅನ್ನು ಎಲ್ಲ ಗ್ರಾಮಗಳಲ್ಲಿ ಜಾರಿಗೊಳಿಸಲಾಗಿದೆ. ಆದರೆ ಇದುವರೆಗೆ ನೀರು ಬಂದಿಲ್ಲ. ಗ್ರಾಮದ ಮುಖ್ಯ ರಸ್ತೆ ಅಗೆದು ಸರಿಯಾಗಿ ಮುಚ್ಚದೇ ಹೋಗಿದ್ದಾರೆ’ ಎಂದು ಹುಲ್ಲಿಕೇರಿ ಗ್ರಾಮದ ಮುಖಂಡ ರಮೇಶ ಬೂದಿಹಾಳ ದೂರುತ್ತಾರೆ.

ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ: ಪಟ್ಟಣದಲ್ಲಿ 8ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು ಅದರಲ್ಲಿ 4 ಸ್ಥಗಿತಗೊಂಡಿವೆ. ಶುದ್ಧ ನೀರಿಗಾಗಿ ಪಟ್ಟಣದ ಜನರು ಅಲೆಯುವಂತಾಗಿದೆ. ಕೆಲವು ಶುದ್ಧ ನೀರಿನ ಘಟಕಗಳನ್ನು ಟೆಂಡರ್ ಕರೆದು ಗುತ್ತಿಗೆ ನೀಡದೇ ಇರುವುದು ತೊಂದರೆಯಾಗಿದೆ. ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಇದೆ ಸ್ಥಿತಿ ಇದೆ. ಆದಷ್ಟು ಬೇಗನೇ ಶುದ್ಧ ನೀರಿನ ವ್ಯವಸ್ಥೆ ಮಾಡಬೇಕು ಎಂದು ಪುರಸಭೆ ಸದಸ್ಯ ಉಮೇಶ ಹುನಗುಂದ ಒತ್ತಾಯಿಸಿದ್ದಾರೆ.

ಅರ್ಧಕ್ಕೆ ನಿಂತ ಕೆರೆ ತುಂಬುವ ಯೋಜನೆ: ಮಲಪ್ರಭಾ ನದಿಯಿಂದ ಪಟ್ಟಣಕ್ಕೆ ಹೊಂದಿಕೊಂಡಿರುವ ಪರ್ವತಿ ಕೆರೆಗೆ ನೀರು ತುಂಬಿಸುವ ₹ 2 ಕೋಟಿ ವೆಚ್ಚದ ಕೆಲಸ ಆರಂಭವಾಗಿತ್ತು. ಅನಿವಾರ್ಯ ಕಾರಣ ಹೇಳಿ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ಕೆಲವು ಹಳ್ಳಿಗಳಿಗೆ ನೀರಿನ ತೊಂದರೆಯಾಗಿದೆ.

ತಾಂಡಾ ಮತ್ತು ಆಶ್ರಯ ಕಾಲೊನಿಗಳಲ್ಲಿ ನೀರಿನ ತೊಂದರೆ: ಪಟ್ಟಣದ ತಾಂಡಾ ಮತ್ತು ಆಶ್ರಯ ಕಾಲೊನಿಗಳಲ್ಲಿ ನೀರಿಗೆ ತೊಂದರೆಯಿದೆ. ಆಲಮಟ್ಟಿ ನೀರನ್ನು ಪೂರೈಸುತ್ತಿದ್ದರೂ ಕೆಲವು ಸಂದರ್ಭಗಳಲ್ಲಿ ಸಮಸ್ಯೆ ಉಂಟಾಗುತ್ತಿದೆ.

ಗುಳೇದಗುಡ್ಡ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಇರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿ ಮಾಡಿಸದೇ ಎರಡು ವರ್ಷಗಳಾಗಿವೆ.

ತಾಲ್ಲೂಕಿನ ಹಳ್ಳಿಗಳಲ್ಲಿ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲು ಗ್ರಾಮ ಪಂಚಾಯಿತಿ ಪಿಡಿಒಗಳಿಗೆ ಸೂಚಿಸಲಾಗಿದೆ. ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ

ಮಲ್ಲಿಕಾರ್ಜುನ ಬಡಿಗೇರ ತಾಲ್ಲೂಕು ಪಂಚಾಯಿತಿ ಇಒ ಗುಳೇದಗುಡ್ಡ

ಕಾರ್ಯಗತಗೊಳ್ಳದ 24X7 ಯೋಜನೆ

ವಾರದ 24 ಗಂಟೆ ಕುಡಿಯುವ ನೀರು ಸರಬರಾಜು ಮಾಡುವ ಮೊದಲ ಹಂತದ ಯೋಜನೆ ಜಾರಿಗೊಂಡರೂ ಗುಳೇದಗುಡ್ಡ ಪಟ್ಟಣಕ್ಕೆ ವಾರದಲ್ಲಿ ಎರಡು ದಿನ ಮಾತ್ರ ನೀರು ಪೂರೈಸಲಾಗುತ್ತಿದೆ. ಆದರೆ ಈಚೆಗೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರು ಎರಡನೇ ಹಂತದ ಶಾಶ್ವತ ಕುಡಿಯುವ ನೀರಿನ ಯೋಜನೆ ಉದ್ಘಾಟನೆ ಮಾಡಿದ್ದಾರೆ. ಆದರೆ ಪಟ್ಟಣದ ತುಂಬ ರಸ್ತೆ ಅಗೆದು ಪೈಪ್ ಲೈನ್ ಅಳವಡಿಸುವ ಕಾರ್ಯ ವರ್ಷವಾದರೂ ಇನ್ನೂ ಮುಗಿದಿಲ್ಲ. ಪಟ್ಟಣದಲ್ಲಿರುವ ಉತ್ತಮ ಸಿಸಿ ರಸ್ತೆ ಅಗೆದಿರುವುದರಿಂದ ಜನರು ಅಡ್ಡಾಡಲು ಸಹ ಪರದಾಡುತ್ತಿದ್ದಾರೆ. ನಲ್ಲಿಗಳಲ್ಲಿ ನೀರು ಯಾವಾಗ ಬರುತ್ತದೆ ಎಂದು ಕಾಯುವಂಥ ಸ್ಥಿತಿ ಉಂಟಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.