ರಬಕವಿ ಬನಹಟ್ಟಿ: ನೇಕಾರರು ಪಾವತಿಸಬೇಕಾದ ಬಾಕಿ ವಿದ್ಯುತ್ ಬಿಲ್‌ನ್ನು ಪಾವತಿಸುವುದಿಲ್ಲ. ವಿದ್ಯುತ್ ಬಿಲ್‌ನ್ನು ರಾಜ್ಯ ಸರ್ಕಾರವೇ ಭರಿಸಬೇಕು ಎಂದು ಬನಹಟ್ಟಿಯ ನೇಕಾರ ಮುಖಂಡ ಮಹಾದೇವ ನುಚ್ಚಿ ತಿಳಿಸಿದರು.
ಪಟ್ಟಣದ ಈಶ್ವರಲಿಂಗ ಮೈದಾನದಲ್ಲಿರುವ ಅಂಚೆ ಕಚೇರಿಯ ಹತ್ತಿರ ಬುಧವಾರ ಪತ್ರಗಳನ್ನು ರಾಜ್ಯ ಸರ್ಕಾರಕ್ಕೆ ರವಾನಿಸಿ ಅವರು ಮಾತನಾಡಿದರು.
ಈಗಾಗಲೇ ನೇಕಾರರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಬಾಕಿ ವಿದ್ಯುತ್ ಬಿಲ್ ನ್ನು ನೇಕಾರರು ಪಾವತಿಸುವುದು ಸಾಧ್ಯವಾಗುವುದಿಲ್ಲ. ಸರ್ಕಾರ ರೈತರಂತೆ ನೇಕಾರರಿಗೂ ಸೌಲಭ್ಯಗಳನ್ನು ನೀಡಲಿ. ಸರ್ಕಾರ ನೇಕಾರರಿಗೆ ಕಾರ್ಮಿಕರ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಬೆಂಗಳೂರು, ಬಾಗಲಕೋಟೆ ಸೇರಿದಂತೆ ಅನೇಕ ಕಡೆಗಳಲ್ಲಿ ಪ್ರತಿಭಟನೆ ಕೈಗೊಳ್ಳಲಾಗಿತ್ತು ಮತ್ತು ಅಧಿಕಾರಿಗಳಿಗೂ ಮನವಿ ನೀಡಲಾಗಿತ್ತು. ಜನ ಸ್ಪಂದನ ಕಾರ್ಯಕ್ರಮದಲ್ಲಿ ಬಾಗಲಕೋಟೆ ಜಿಲ್ಲಾಧಿಕಾರಿಗೂ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ ಇದುವರೆಗೆ ಸರ್ಕಾರವಾಗಲಿ ಮತ್ತು ಅಧಿಕಾರಿಗಳು ನೇಕಾರರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ನೇಕಾರರು ವಿದ್ಯುತ್ ಬಿಲ್ ನ್ನು ಪಾವತಿಸುವುದಿಲ್ಲ ಎಂದು ನುಚ್ಚಿ ತಿಳಿಸಿದರು.
ನೇಕಾರ ಮುಖಂಡರಾದ ಆನಂದ ಜಗದಾಳ, ಮುತ್ತು ಮಠದ, ಪರಮಾನಂದ ಭಾವಿಕಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.