ADVERTISEMENT

ವಿಶ್ವ ಮಹಿಳಾ ದಿನಕ್ಕೆ ನಳ ಮಹಾರಾಜರಿಂದ ಮುನ್ನುಡಿ!

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 13:22 IST
Last Updated 7 ಮಾರ್ಚ್ 2020, 13:22 IST
ವಿಶ್ವ ಮಹಿಳಾ ದಿನದ ಅಂಗವಾಗಿ ಬಾಗಲಕೋಟೆಯಲ್ಲಿ ಶನಿವಾರ ನಡೆದ ಪುರುಷರ ಅಡುಗೆ ಸ್ಪರ್ಧೆಯನ್ನು ಸಿಇಒ ಗಂಗೂಬಾಯಿ ಮಾನಕರ ವೀಕ್ಷಣೆ ಮಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ರಡ್ಡಿ ಇದ್ದರು
ವಿಶ್ವ ಮಹಿಳಾ ದಿನದ ಅಂಗವಾಗಿ ಬಾಗಲಕೋಟೆಯಲ್ಲಿ ಶನಿವಾರ ನಡೆದ ಪುರುಷರ ಅಡುಗೆ ಸ್ಪರ್ಧೆಯನ್ನು ಸಿಇಒ ಗಂಗೂಬಾಯಿ ಮಾನಕರ ವೀಕ್ಷಣೆ ಮಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ರಡ್ಡಿ ಇದ್ದರು   

ಬಾಗಲಕೋಟೆ: ವಿಶ್ವ ಮಹಿಳಾ ದಿನಕ್ಕೆ ಮುನ್ನುಡಿ ಬರೆಯಲು ಇಲ್ಲಿನ ಜಿಲ್ಲಾ ಪಂಚಾಯ್ತಿ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಪುರುಷರ ಅಡಿಗೆ ಸ್ಪರ್ಧೆಯಲ್ಲಿ ನಳ ಮಹಾರಾಜರು ಗಮ್ಮತ್ತು ಮೆರೆದರು.

ಪಾತ್ರೆ ತೊಳೆದುಕೊಂಡು, ಸ್ಟೋವ್ ಹಚ್ಚಿಕೊಂಡು ಕಣ್ಣಲ್ಲಿ ನೀರು ಸುರಿಸಿಕೊಳ್ಳುತ್ತಾ ಈರುಳ್ಳಿ ಸೇರಿದಂತೆ ಬೇರೆ ಬೇರೆ ತರಕಾರಿ ಹೆಚ್ಚಿಕೊಂಡು ಇಂಗು-ತೆಂಗಿನ ವಗ್ಗರಣೆ ಹಾಕಿದರು. ಹಿಟ್ಟು ಕಲಸಿದರು. ಕುಕ್ಕರ್ ಕೂಗಿಸಿ ವಿವಿಧ ಬಾತ್‌ಗಳನ್ನು ಮಾಡಿದರು.

ಅಡುಗೆ ಮಾಡಲು ಒಂದು ತಾಸು ಸಮಯ ನಿಗದಿಗೊಳಿಸಲಾಗಿತ್ತು. ಹೋಳಿಗೆ, ಕಡುಬು, ಉಪ್ಪಿಟ್ಟು, ಜಾಮೂನು, ಕಟ್ಲೆಟ್, ಈರುಳ್ಳಿ ಬಜಿ, ಮೈಸೂರು ಬಜಿ, ಫ್ರೈಡ್ ರೈಸ್, ಶಾವಿಗೆ ಪಾಯಸ, ಎಗ್ ಪುಲಾವ್ ಹೀಗೆ ಬಾಯಲ್ಲಿ ನೀರೂರಿಸುವ ವೈವಿಧ್ಯಮಯ ಖಾದ್ಯಗಳ ಮಾಡಿದರು.

ADVERTISEMENT

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಂಗೂಬಾಯಿ ಮಾನಕರ ಅಡುಗೆ ಸ್ಪರ್ಧೆಗೆ ಚಾಲನೆ ನೀಡಿದರು. ಸ್ಪರ್ಧಿಗಳಿಂದ ಅವರು ಮಾಡುವ ಅಡುಗೆಯ ರೆಸಿಪಿ ಹಾಗೂ ವಿಧಾನದ ಬಗ್ಗೆ ಕೇಳಿತಿಳಿದುಕೊಂಡರು. ಮಾಡಿಟ್ಟ ಖಾದ್ಯಗಳ ರುಚಿ ನೋಡಿ ಬೆನ್ನು ತಟ್ಟಿದರು.

ಮಹಿಳಾ ಮತ್ತು ಮಕ್ಜಳ ಅಭಿವೃದ್ಧಿ ಇಲಾಖೆಯ ಸಿಡಿಪಿಒಗಳಾದ ಅನ್ನಪೂರ್ಣ ಕುಬಕಟ್ಟಿ, ಮೌನೇಶ್ವರಿ ಹಾಗೂ ಹೇಮಾವತಿ ತೀರ್ಪುಗಾರರಾಗಿ ಕೆಲಸ ಮಾಡಿದರು. ಹೋಟೆಲ್‌ನಲ್ಲಿ ಕೆಲಸ ಮಾಡುವ ಬಾಣಸಿಗರಿಗೆ ಸ್ಪರ್ಧೆಯಲ್ಲಿ ಅವಕಾಶವಿರಲಿಲ್ಲ. ಅಡುಗೆ ಮಾಡಲು ಬೇರೆಯವರ ಸಹಾಯ ಪಡೆಯುವಂತಿಲ್ಲ, ಸಿದ್ಧಗೊಂಡ ಅಡುಗೆ ತಕ್ಷಣ ತಿನ್ನಲು ಸಾಧ್ಯವಿರಬೇಕು.

ಮನೆಯಿಂದ ಅಡುಗೆ ಸಿದ್ಧಪಡಿಸಿಕೊಂಡು ಬರುವಂತಿಲ್ಲ. ಮಾಡಿದ ಅಡುಗೆ ಗರ್ಭಿಣಿ ಹಾಗೂ ಬಾಣಂತಿಯರು ತಿನ್ನುವಷ್ಟು ಪೌಷ್ಠಿಕಾಂಶದಿಂದ ಕೂಡಿರಬೇಕು ಎಂಬ ಷರತ್ತುಗಳ ವಿಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.