ಜಮಖಂಡಿ: ಶರೀರ ಮತ್ತು ಮನಸ್ಸಿಗೆ ಯೋಗ ಬೇಕು. ಯೋಗದಿಂದ ಮನಸ್ಸು ಶುದ್ಧವಾಗುತ್ತದೆ. ಶುದ್ಧವಾದ ಮನಸ್ಸಿನಿಂದ ವಿಶೇಷ ಚೈತನ್ಯ ಹರಿದು ಮಾನವನನ್ನು ದೈವತ್ವದೆಡೆಗೆ ಒಯ್ದು ನಿಲ್ಲಿಸುತ್ತದೆ ಎಂದು ಬಸವಕಲ್ಯಾಣದ ಬಸವ ಭಾರತಿ ಯೋಗಧಾಮದ ಲೋಕೇಶ ಗುರೂಜಿ ಹೇಳಿದರು.
ತಾಲ್ಲೂಕಿನ ಹುಲ್ಯಾಳ ಗುರುದೇವಾಶ್ರಮದ ಶ್ರೀಗುರುದೇವ ಸತ್ಸಂಗ ಬಳಗದ ಆಶ್ರಯದಲ್ಲಿ ಪ್ರತಿ ತಿಂಗಳ ನಾಲ್ಕನೇ ಭಾನುವಾರ ಹಮ್ಮಿಕೊಳ್ಳುವ ‘ಶ್ರೀಗುರುದೇವ ಸತ್ಸಂಗ’ ಜೂ.22ರ ಮಾಸಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ‘ಯೋಗ ಜೀವನ’ ಕುರಿತು ಅನುಭಾವ ಹಂಚಿಕೊಂಡರು.
ಆನಂದದ ಬದುಕಿಗೆ ಹಂಬಲಿಸಿದಾಗ ಯೋಗದ ಕಡೆಗೆ ಹೆಜ್ಜೆ ಇರಿಸಿದ್ದೇವೆ ಎಂದರ್ಥ. ಯೋಗದ ಮೂಲಕ ತನ್ನನ್ನು ತಾನು ನೋಡಿಕೊಂಡು ತನ್ನ ಮೂಲ ಅಸ್ತಿತ್ವ ಗೊತ್ತಾದಾಗ ತನ್ನನ್ನು ತಾನು ದರ್ಶನ ಮಾಡಿಕೊಳ್ಳುತ್ತಾನೆ. ಆಗ ಮನಸ್ಸು ಅಂತರ್ಮುಖಗೊಂಡು ಆತ್ಮಕ್ಕೆ ಸಂತೃಪ್ತಿ ಭಾವ ಮೂಡುತ್ತದೆ ಎಂದರು.
ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಶ್ರೀಗಳು ನೇತೃತ್ವ ವಹಿಸಿ ಮಾತನಾಡಿ, ಯೋಗ ಎಂದರೆ ಕೂಡುವುದು. ಜೀವ ಮತ್ತು ಪರಮಾತ್ಮ, ಪರವಸ್ತು ಮತ್ತು ಆತ್ಮವಸ್ತು ಒಂದಾಗುವುದೇ ಯೋಗ. ಜೀವನ ಯೋಗದ ಕಡೆಗೆ ಹರಿದಾಗ ಯಾವ ರೋಗಗಳು, ಆತಂಕಗಳು, ದುಗುಡಗಳು ಭಾದಿಸುವುದಿಲ್ಲ ಎಂದರು.
ಸಿದ್ದಾಪುರದ ಅಡವಿಸಿದ್ಧೇಶ್ವರ ಮಠದ ಮಾತೋಶ್ರೀ ಅಕ್ಕಮಹಾದೇವಿ ಆಶೀರ್ವಚನ ನೀಡಿದರು. ನಿವೃತ್ತ ಶಿಕ್ಷಕಿ ಶೋಭಾ ಕಾಗಿ ಅವರು ವಿರಚಿತ ‘ಲೋಕೋದ್ಧಾರಕ’ ಕೃತಿಯ ಲೋಕಾರ್ಪಣೆ ನೆರವೇರಿಸಲಾಯಿತು.
ಬೆಂಗಳೂರಿನ ಸುನೀಲ ಕತ್ನಳ್ಳಿ ಮಹಾಪ್ರಸಾದದ ದಾಸೋಹ ಸೇವೆ ಸಲ್ಲಿಸಿದರು, ಶ್ರೀಗುರುದೇವ ಸಂಗೀತ ಬಳಗದ ಕಲಾವಿದರಾದ ಗುರುಬಸುಗೌಡ ಪಾಟೀಲ, ಪರಮೇಶ್ವರ ತೇಲಿ, ಶಿವಾನಂದ ಬಾಡನವರ, ಸಿದ್ದು ಉಪ್ಪಲದಿನ್ನಿ, ರಾಮಚಂದ್ರ ಹೂಗಾರ ಸಂಗೀತ ಸೇವೆ ಸಲ್ಲಿಸಿದರು. ನಿವೃತ್ತ ಶಿಕ್ಷಕ ಗುರುನಾಥ ಸುತಾರ ಸ್ವಾಗತಿಸಿದರು. ಸಂಗಮೇಶ ತೆಲಸಂಗ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.