ಬಾಗಲಕೋಟೆ: ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಯುವಜನೋತ್ಸವದಲ್ಲಿ ತುರ್ತು ಪರಿಸ್ಥಿತಿಯ ವಿರುದ್ಧವಾಗಿ ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ ಹೇಳಿಕೆ ನೀಡಿದರೆ, ಶಾಸಕ ಎಚ್.ವೈ. ಮೇಟಿ ಅವರು ಇಂದಿರಾಗಾಂಧಿ ತೆಗೆದುಕೊಂಡಿದ್ದ ನಿರ್ಧಾರವನ್ನು ಸಮರ್ಥಿಸಿಕೊಂಡ ಘಟನೆ ನಡೆಯಿತು.
‘ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಏನು ಅನಾಹುತಗಳಾದವು. ಸಂವಿಧಾನದ ಕುತ್ತಿಗೆ ಹೇಗೆ ಹಿಸುಕಲಾಯಿತು ಎಂದು ಯುವ ಜನತೆಗೆ ತಿಳಿಸಲು, ಮುಂದಿನ ದಿನಗಳಲ್ಲಿ ಇಂತಹ ಪರಿಸ್ಥಿತಿ ಬರಬಾರದು ಎಂದು ತುರ್ತು ಪರಿಸ್ಥಿತಿ ಬಗ್ಗೆ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ’ ಎಂದು ರಾಜ್ಯಸಭೆ ಸದಸ್ಯ ನಾರಾಯಣ ಭಾಂಡಗೆ ಹೇಳಿದರು.
‘ದೇಶದಲ್ಲಿ ತುರ್ತು ಪರಿಸ್ಥಿತಿ ಅವಧಿ ಮತ್ತು ಸಂವಿಧಾನ ಉಲ್ಲಂಘನೆ ಹಾಗೂ ಪ್ರಜಾಪ್ರಭುತ್ವವನ್ನು ಕಾಪಾಡುವುದು, ಪ್ರಜಾಸತ್ತಾತ್ಮಕ ಮೌಲ್ಯಗಳು‘ ಎಂಬ ವಿಷಯದ ಭಾಷಣ ಸ್ಪರ್ಧೆಗೆ ಉಳಿದವರಂತೆ ನನಗೂ ಏಳು ನಿಮಿಷ ಕೊಡಿ’ ಎಂದು ಕೇಳಿಕೊಂಡರು.
‘50 ವರ್ಷಗಳ ಹಿಂದೆ ಆಗಿರುವುದರಿಂದ ಮರೆತು ಹೋಗಿದ್ದೇವೆ. ತುರ್ತು ಪರಿಸ್ಥಿತಿ ಏಕೆ ಜಾರಿ ಮಾಡಲಾಯಿತು?, ಯಾರು ಜಾರಿ ಮಾಡಿದರು? ಅದು ಎಷ್ಟು ದಿನ ಇತ್ತು. ಆ ಸಂದರ್ಭದಲ್ಲಿ ದೇಶದಲ್ಲಿ ಏನೇನು ಅನಾಹುತಗಳು ಆದವು. ಇದು ಬಹಳಷ್ಟು ಜನರಿಗೆ ಅಧ್ಯಯನ ಮಾಡುವ ಸಲುವಾಗಿ, ಯುವ ಜನತೆಗೆ ತುರ್ತು ಪರಿಸ್ಥಿತಿಯಿಂದ ಎಷ್ಟು ಅನಾಹುತವಾಯಿತು. ಸಂವಿಧಾನದ ಕುತ್ತಿಗೆ ಹೇಗೆ ಹಿಸುಕಲಾಯಿತು ಎಂದು ತಿಳಿಸಲು ಭಾಷಣ ಸ್ಪರ್ಧೆಗೆ ಈ ವಿಷಯ ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದು ಭಾವಿಸುತ್ತೇನೆ’ ಎಂದರು.
‘ತುರ್ತು ಪರಿಸ್ಥಿತಿಯ 21 ತಿಂಗಳು ದೇಶ ಜೈಲಾಗಿತ್ತು. ರಾಜಕೀಯ ನಾಯಕರನ್ನು, ಭಾರತ ಮಾತಾಕೀ ಜೈ ಅಂದವರನ್ನೂ ಜೈಲಿಗೆ ಕಳುಹಿಸಲಾಗಿತ್ತು. ಅಂದಿನ ಪ್ರಧಾನಮಂತ್ರಿ ಇಂದಿರಾಗಾಂಧಿ ಚುನಾವಣೆಗೆ ಸ್ಪರ್ಧಿಸುವುದನ್ನು ನ್ಯಾಯಾಲಯ ಆರು ವರ್ಷ ನಿಷೇಧಿಸಿತ್ತು. ತಮ್ಮ ಕುರ್ಚಿಗೆ ಬಂದ ಗಂಡಾಂತರವನ್ನು ಪ್ರಧಾನಮಂತ್ರಿ ದೇಶಕ್ಕೆ ಬಂದ ಗಂಡಾಂತರ ಎಂದುಕೊಂಡು ಎಲ್ಲ ಪಕ್ಷದ ನಾಯಕರನ್ನು ಜೈಲಿಗೆ ಕಳುಹಿಸಿದರು. ಮಾಧ್ಯಮಗಳಿಗೂ ನಿರ್ಬಂಧ ವಿಧಿಸಲಾಗಿತ್ತು’ ಎಂದು ತಿಳಿಸಿದರು.
‘ಆರ್‌ಎಸ್‌ಎಸ್‌ನ ಒಂದು ಲಕ್ಷ ಕಾರ್ಯಕರ್ತರನ್ನು ಜೈಲಿನಲ್ಲಿಡಲಾಯಿತು. ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ, ಜಾರ್ಜ್ ಫರ್ನಾಂಡೀಸ್ ಸೇರಿದಂತೆ ಅನೇಕ ದೇಶಭಕ್ತರನ್ನು ಜೈಲಿಗೆ ಕಳುಹಿಸಲಾಯಿತು. ಮುಂದಿನ ಪೀಳಿಗೆ ನಿಜ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಸತ್ಯ ಮಾತನಾಡಬೇಕು’ ಎಂದರು.
ನಂತರ ಮಾತನಾಡಿದ ಶಾಸಕ ಎಚ್.ವೈ. ಮೇಟಿ, ‘ಮಕ್ಕಳಿಗೆ ತುರ್ತು ಪರಿಸ್ಥಿತಿ ಬಗ್ಗೆ ಹೇಳಬೇಕಾದ ಅವಶ್ಯಕತೆ ಇಲ್ಲ. ಇವತ್ತು ಅದು ಅಪ್ರಸ್ತುತ. ಭಾಂಡಗೆ ಬಿಜೆಪಿ ಅಥವಾ ಆರ್‌ಎಸ್‌ಎಸ್ ಸಂಘಟಕರಾಗಿರುವುದರಿಂದ ಹೇಳುವುದು ರೂಢಿ. ಅದನ್ನು ತಲೆಯಲ್ಲಿ ಹಾಕಿಕೊಳ್ಳಬೇಡಿ. ತುರ್ತು ಪರಿಸ್ಥಿತಿ ಬಗ್ಗೆ ಅಧ್ಯಯನ ಮಾಡುವ ಅವಶ್ಯಕತೆ ಇಲ್ಲ’ ಎಂದು ಹೇಳಿದರು.
‘ದೇಶಕ್ಕೆ ಸಮಸ್ಯೆ ಆಗಬಹುದು ಎಂಬ ಉದ್ದೇಶವಿಟ್ಟುಕೊಂಡು ಪ್ರಧಾನಿ ಇಂದಿರಾಗಾಂಧಿ ಅವರು ಮಾಡಿದ್ದಾರೆ. ಆಗ ನಾವೂ ಬೇರೆ ಪಕ್ಷದಲ್ಲಿದ್ದೆವು. ಆದರೂ, ಜೈಲಿಗೆ ಕಳುಹಿಸಿಲ್ಲ. ತುರ್ತು ಪರಿಸ್ಥಿತಿ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಚೆನ್ನಾಗಿ ಓದಿ, ಐಪಿಎಸ್, ಎಐಎಸ್ ಆಗುವ ಮನೋಭಾವ ಬೆಳೆಸಿಕೊಳ್ಳಿರಿ’ ಎಂದು ಸಲಹೆ ಮಾಡಿದರು.
ಬಾಗಲಕೋಟೆ: ಯುವ ಸಮೂಹ ದೇಶದ ಸಂಪತ್ತಾಗಿದೆ. ಜನಪದ ಕಲೆ ಉಳಿಸಿ ಬೆಳೆಸುವಲ್ಲಿ ಯುವ ಸಮೂಹದ ಪಾತ್ರ ಮುಖ್ಯವಾಗಿದೆ. ಯುವ ಜನೋತ್ಸವದಿಂದ ಪ್ರತಿಭೆಗಳನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದು ಶಾಸಕ ಎಚ್.ವೈ. ಮೇಟಿ ಹೇಳಿದರು.
ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಬುಧವಾರ ಜಿಲ್ಲಾ ಮಟ್ಟದ ಯುವಜನೋತ್ಸವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯುವಕರು ನಮ್ಮ ಕನ್ನಡ ನಾಡಿನ ಶ್ರೀಮಂತ ಸಾಂಸ್ಕೃತಿಕ ಕಲೆಗಳ ಮಹತ್ವ ತಿಳಿಯಬೇಕು. ನಮ್ಮ ನೆಲದ ಸಂಪ್ರದಾಯ ಸಂಸ್ಕಾರ ಪರಂಪರೆಯ ಉಳಿಸುವ ಪ್ರತಿಭಾವಂತರಾಗಬೇಕು. ಉತ್ತಮ ಶಿಕ್ಷಣ ಪಡೆದು ಐ.ಎ.ಎಸ್ ಐ.ಪಿ.ಎಸ್ ಅಧಿಕಾರಿಗಳಾಗಿ ಸಮಾಜದಲ್ಲಿ ಆದರ್ಶ ಪ್ರಜೆಗಳಾಗಬೇಕು ಎಂದು ಹೇಳಿದರು.
ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ ಮಾತನಾಡಿ ‘ಯುವ ಜನತೆಯಲ್ಲಿ ನಾಡಿನ ದೇಶದ ಸಾಂಸ್ಕೃತಿಕ ಕಲೆಗಳ ಉತ್ತೇಜಿಸುವಲ್ಲಿ ಇಂತಹ ಕಾರ್ಯಕ್ರಮಗಳು ಅಗತ್ಯವಾಗಿವೆ. ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದರು. ಜಿಲ್ಲಾಧಿಕಾರಿ ಸಂಗಪ್ಪ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿದರು. ನಗರಸಭೆ ಅಧ್ಯಕ್ಷ ಸವಿತಾ ಲೆಂಕೆಣ್ಣವರ ಕಾಲೇಜಿನ ಪ್ರಾಚಾರ್ಯ ಅರುಣಕುಮಾರ ಗಾಳಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ ಉಪಸ್ಥಿತರಿದ್ದರು. ಚಂದ್ರಶೇಖರ ಕಾಳನ್ನವರ ನಿರೂಪಿಸಿದರು. ಎನ್ಎಸ್ಎಸ್ ನೋಡಲ್ ಅಧಿಕಾರಿ ಮಾರುತಿ ಪಾಟೋಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.