ಹೊಸಪೇಟೆ: ನಾವು ಮಾಡುವ ಸೇವೆ ಇತರರಿಗೆ ಪ್ರೇರಣೆ ಮತ್ತು ಹೊಸ ಚೈತನ್ಯ ತುಂಬುವಂತಾಗಬೇಕು ಎಂದು ಬಳ್ಳಾರಿ ಜಿಲ್ಲಾಧಿಕಾರಿ ಆಮ್ಲನ್ ಆದಿತ್ಯ ಬಿಸ್ವಾಸ್ ಹೇಳಿದರು.
ಹೊಸಪೇಟೆಯ ತಾಲ್ಲೂಕು ಕ್ರೀಡಾಂಗಣದಲ್ಲಿ ಎಂಎಸ್‌ಪಿಎಲ್, ಭಗವಾನ್ ಮಹಾವೀರ ಜೈಪುರ ಅಂಗವಿಕಲ ಸೇವಾ ಸಮಿತಿ ಸಹಯೋಗದಲ್ಲಿ ನಡೆದ 5 ದಿನಗಳ ಕೃತಕ ಕಾಲು ಜೋಡಣೆ ಹಾಗೂ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು.
ಆತ್ಮತೃಪ್ತಿಯಿಂದ ಕರ್ತವ್ಯ ನಿರ್ವಹಿಸಬೇಕು. ನಂತರ ಸಮಾಜಸೇವೆ ಮಾಡಬಹುದು ಎಂಬುದಕ್ಕೆ ವಿಶ್ವದಲ್ಲಿ 12 ಲಕ್ಷ ಅಂಗವಿಕಲರಿಗೆ ಸಹಕಾರಿ ಯಾದ ಪದ್ಮಭೂಷಣ ಮೆಹತಾ ಮಾದರಿಯಾಗಿದ್ದಾರೆ. ಪ್ರತಿಯೊಬ್ಬರೂ ಈ ಪ್ರೇರಣೆ ಪಡೆಯುವಂತಾಗಬೇಕು ಎಂದರು.
ಡಿ.ಆರ್. ಮೆಹತಾ ಮಾತನಾಡಿ, ಸೇವಾ ಅವಧಿಯಲ್ಲಿ ಕಂಡ ಘಟನೆಗಳು ಜೈಪುರದಲ್ಲಿ ಸೇವಾ ಸಂಸ್ಥೆ ಸ್ಥಾಪನೆಗೆ ಪ್ರೇರಣೆ ನೀಡಿತು. ತಾಂತ್ರಿಕ ಬದಲಾವಣೆಯಂತೆ ಸೌಲಭ್ಯವೂ ಸಿಗುವಂತಾಗಬೇಕು. ಅಂಗವಿಕಲರು ಸಾಮಾನ್ಯರಂತಾಗಿ, ಸ್ವಾವಲಂಬಿಗಳಾಗ ಬೇಕು ಎಂಬುದು ತಮ್ಮ ಆಶಯ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ನರೇಂದ್ರಕುಮಾರ ಬಲ್ಡೋಟಾ ಮಾತನಾಡಿ, ಸಮಾಜ ದಿಂದ ದೊರೆತಿರುವ ಸಂಪತ್ತು ಸಮಾಜಕ್ಕೆ ಸಲ್ಲಿಕೆಯಾಗಬೇಕು ಎಂಬ ಕಾರಣದಿಂದ ಮೂರು ವರ್ಷಗಳಿಂದ ಗಣಿಗಾರಿಕೆ ಸ್ಥಗಿತಗೊಂಡಿದ್ದರೂ ಕೆಲಸ ನಿರ್ವಹಿಸುತ್ತಿದ್ದ 3 ಸಾವಿರ ಉದ್ಯೋಗಿ ಗಳಿಗೆ ರಕ್ಷಣೆ ನೀಡಲಾಗಿದೆ ಎಂದು ನುಡಿದರು.
ಶಿಬಿರದಲ್ಲಿ ಒಟ್ಟು 461 ಫಲಾನುಭವಿಗಳು 110 ಲಿಂಬ್ಸ್, 120 ಕ್ಯಾಲಿಪರ್ಸ್‌ಗಳು, 12 ವೀಲ್‌ಚೇರ್‌ಗಳು, 12 ಟ್ರೈಸಿಕಲ್‌ಗಳನ್ನು ವಿತರಿಸಲಾಯಿತು. ಚಿಕಿತ್ಸೆ, ಸಲಹೆ, ಮಾರ್ಗದರ್ಶನ ನೀಡಿದ ಜೈಪುರದ ತಜ್ಞರನ್ನು ಸತ್ಕರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.