ADVERTISEMENT

ಅಕ್ರಮದಲ್ಲಿ ಜಿ.ಪಂ. ಅಧಿಕಾರಿಗಳ ಭಾಗಿ

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ವೆಂಕಟೇಶ್ ನಾಯ್ಕ್ ಆರೋಪ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2018, 6:29 IST
Last Updated 14 ಮಾರ್ಚ್ 2018, 6:29 IST

ಕೂಡ್ಲಿಗಿ: ‘ಜಿಲ್ಲಾ ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿಗಳು ಕಳ್ಳರ ಸಂತೆಯಾಗಿವೆ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಬಿ. ವೆಂಕಟೇಶ್ ನಾಯ್ಕ್ ಗಂಭೀರ ಆರೋಪಿಸಿದರು.

ತಾಲ್ಲೂಕು ಪಂಚಾಯ್ತಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ತಾಲ್ಲೂಕಿನ ಕಂದಗಲ್ಲು ಹಾಗೂ ಹ್ಯಾಳ್ಯಾ ಗ್ರಾಮ ಪಂಚಾಯ್ತಿಯಲ್ಲಿ ಆಶ್ರಯ ಮನೆ ಹಾಗೂ ಶೌಚಾಲಯ ನಿರ್ಮಾಣದ ಅವ್ಯವಹಾರ ಹಾಗೂ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಸಿಮೆಂಟ್ ಇಟ್ಟಿಗೆ ತಯಾರಿಸಲು ಕುಡಿಯುವ ನೀರು ಬಳಸುತ್ತಿದ್ದಾರೆ ಎಂದು ದೂರನ್ನು ನೀಡಿದ್ದರಿಂದ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು ಪಂಚಾಯ್ತಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು’ ಎಂದು ಹೇಳಿದರು.

‘ಈ ಆರೋಪಗಳು ಮೇಲ್ನೋಟಕ್ಕೆ ಸಾಬೀತವಾಗಿವೆ ಎಂದು ತನಿಖಾಧಿಕಾರಿ ತಿಳಿಸಿದ್ದರು. ಈ ಬಗ್ಗೆ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ತನಿಖಾಧಿಕಾರಿಯನ್ನು ಅವರನ್ನು ಸಂಪರ್ಕಿಸಲು ಕರೆ ಮಾಡಿದರೆ ನಂಬರನ್ನೆ ಬ್ಲಾಕ್ ಲಿಸ್ಟ್‌ನಲ್ಲಿ ಇಟ್ಟಿದ್ದಾರೆ. ಅಕ್ರಮ ಎಸಗಿದ ಅಧಿಕಾರಿಗಳನ್ನು ಅಮಾನತ್ತಿನಲ್ಲಿಡಬೇಕಾಗಿತ್ತು. ಅಥವಾ ಕೆಲಸದಿಂದ ವಜಾ ಮಾಡಬೇಕಾಗಿತ್ತು. ಆದರೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುವ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು, ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಅನುಮಾನ ಮೂಡುತ್ತಿದೆ’ ಎಂದರು.

ADVERTISEMENT

‘ಹಿಂದೆ ಗ್ರಾಮ ಪಂಚಾಯ್ತಿ ಹಾಗೂ ತಾಲ್ಲೂಕು ಪಂಚಾಯ್ತಿ ಅನುದಾನದ ಕಾಮಗಾರಿಗಳಿಗೆ ತಾಲ್ಲೂಕು ಪಂಚಾಯ್ತಿಯಿಂದಲೇ ಅನುಮೋದನೆ ನೀಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ಈ ಎಲ್ಲ ಅನುಮೋದನೆಗಳನ್ನು ಜಿಲ್ಲಾ ಪಂಚಾಯ್ತಿಯಿಂದ ಮಾಡಿಕೊಡಲಾಗುತ್ತಿದೆ. ಈ ಕಾಮಗಾರಿಗಳಲ್ಲಿ ಕಮಿಷನ್ ಪಡೆಯುವ ಉದ್ದೇಶವೇ ಇದಕ್ಕೆ ಮುಖ್ಯ ಕಾರಣ’ ಎಂದು ದೂರಿದರು.

‘ತಾಲ್ಲೂಕು ಪಂಚಾಯ್ತಿ ಕಚೇರಿಯಲ್ಲಿ ಕೆಲಸ ಮಾಡಲು ಸಿಬ್ಬಂದಿಯೇ ಇಲ್ಲ. ಆದರೂ ಪ್ರತಿ ದಿನ ತಾಲ್ಲೂಕು ಪಂಚಾಯ್ತಿ ಸಿಬ್ಬಂದಿಯೊಬ್ಬರು ಕಡತಗಳನ್ನು ಹೊತ್ತುಕೊಂಡು ಬಳ್ಳಾರಿಗೆ ಹೋಗಬೇಕಾಗಿದ್ದು, ಅಲ್ಲಿಗೆ ಹೋದರೆ ಕೆಲಸವಾಗುತ್ತವೆ ಎಂಬ ಯಾವ ಭರವಸೆಯೂ ಇರುವುದಿಲ್ಲ. ತಾವು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರಾಗಿ ಎರಡು ವರ್ಷ ಕಳೆದರು ಇದುವರೆಗೂ ಸರ್ಕಾರದಿಂದ ನೀಡುವ ವಾಹನದ ಇಂಧನ ಭತ್ಯೆಯ ಬಿಲ್ಲನ್ನು ನೀಡಿಲ್ಲ ಎಂದು ದೂರಿದರು. ಉಪಾಧ್ಯಕ್ಷೆ ಹಾಲಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.