ADVERTISEMENT

ಅಧ್ಯಕ್ಷರ ಆರೋಪಗಳಿಗೆ ಬೇಸತ್ತು ಸಭೆ ಬಹಿಷ್ಕಾರ

ಆರೋಪ–ವಾಗ್ವಾದದಲ್ಲಿ ಮುಗಿದ ಸಭೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2018, 10:48 IST
Last Updated 28 ಮಾರ್ಚ್ 2018, 10:48 IST

ಕೂಡ್ಲಿಗಿ: ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ಮಾಸಿಕ ಪ್ರಗತಿ ಪರಿಶೀಲನಾ ಸಭೆ ಆರೋಪ, ವಾಗ್ವಾದದಲ್ಲೆ ಕಳೆದು ಹೋಯಿತು.‘ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರು ಇಲ್ಲದ ಆರೋಪ ಮಾಡುತ್ತಿದ್ದಾರೆ’ ಎಂದು ತಾಲ್ಲೂಕು ಮಟ್ಟದ ಅಧಿಕಾರಿಗಳು ಮಾಸಿಕ ಪ್ರಗತಿ ಪರಿಶೀಲನಾ ಸಭೆ ಬಹಿಷ್ಕರಿಸಿ ಹೊರ ನಡೆದರು.

ಸಭೆಯ ಆರಂಭದಲ್ಲಿ ಅಧ್ಯಕ್ಷ ಬಿ. ವೆಂಕಟೇಶ್ ನಾಯ್ಕ್ ತೋಟಗಾರಿಕೆ ಇಲಾಖೆಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ‘ಇತ್ತೀಚೆಗೆ ರೈತರಿಗೆ ವಿತರಿಸಿದ್ದ ಟ್ರ್ಯಾಕ್ಟರ್ ಹಾಗೂ ನೀರಿನ ಟ್ಯಾಂಕರ್‌ಗಳ ಮಾಹಿತಿಯನ್ನು ಅಧ್ಯಕ್ಷರ ಗಮನಕ್ಕೆ ತರದೆ ಕಮಿಷನ್ ಪಡೆದು ಅವರಿಗೆ ಹಸ್ತಾಂತರ ಮಾಡಲಾಗಿದೆ’ ಎಂದು ದೂರಿದರು. ‘ಕೇವಲ ಡಾಬಾಗಳಲ್ಲಿ ಊಟ ಮಾಡುವುದೇ ಅಧಿಕಾರಿಗಳ ಕೆಲಸವಾಗಿದೆ’ ಎಂದು ಟೀಕಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ತೋಟಗಾರಿಕೆ ಇಲಾಖೆಯ ಸಹಾಯಕ ಅಧಿಕಾರಿ ಕೊಟ್ರೇಶ್, ‘ಟ್ರ್ಯಾಕ್ಟರ್ ಹಾಗೂ ನೀರಿನ ಟ್ಯಾಂಕರ್ ನೀಡಲು ರೈತರಿಂದ ಅರ್ಜಿಗಳನ್ನು ಪಡೆಯಲಾಗಿತ್ತು. ಅರ್ಹತೆಯ ಅಧಾರದ ಮೇಲೆ ಜಿಲ್ಲಾ ಪಂಚಾಯ್ತಿ ಸದಸ್ಯರ ಉಪಸ್ಥಿತಿಯಲ್ಲಿ ಲಾಟರಿ ಎತ್ತುವ ಮೂಲಕ ಫಲಾನುಭವಿಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡಲಾಗಿದೆ’ ಎಂದು ಉತ್ತರಿಸಿದರು.

ADVERTISEMENT

ನಂತರ ಅಧ್ಯಕ್ಷ ವೆಂಕಟೇಶ್, ‘ಜಿಲ್ಲಾ ಪಂಚಾಯ್ತಿಯ 30-54 ಯೋಜನೆ ಅಡಿಯಲ್ಲಿ ಪ್ರತಿ ವರ್ಷ ₹71 ಲಕ್ಷ ಅನುದಾನ ಬರುತ್ತದೆ.  ಅದನ್ನು ಯಾವ ಅಭಿವೃದ್ಧಿಗೆ ಕಾರ್ಯಗಳಿಗೆ ಬಳಸಿದ್ದೀ‌ರಿ? ಕೆಲಸ ಮಾಡಿಸದೇ ಹಣವನ್ನು ಬಿಡುಗಡೆ ಮಾಡಿದ್ದಿರಾ? ಎಂದು ಕೇಳಿದರು.

ಇದಕ್ಕೆ ಉತ್ತರಿಸಿದ ಸಹಾಯಕ ಎಂಜಿನಿಯರ್ ರೇವಣ ಸಿದ್ದಪ್ಪ, ‘ಈ ಯೋಜನೆಯ ಹಣಕಾಸು ವಿಷಯದ ಬಗ್ಗೆ ನಮಗೆ ಮಾಹಿತಿ ಇಲ್ಲ’ ಎಂದರು. ‘ನೀವು ಅಧ್ಯಕ್ಷ ಸ್ಥಾನದಲ್ಲಿ ಕುಳಿತು ಆಧಾರ ರಹಿತವಾಗಿ ಪ್ರತಿ ಸಭೆಗಳಲ್ಲಿ ತಾಲ್ಲೂಕಿನ ಅಧಿಕಾರಿಗಳ ವಿರುದ್ಧ ಆರೋಪ ಮಾಡುವುದು ಸರಿಯಲ್ಲ. ಯಾವುದೇ ಇಲಾಖೆಯಲ್ಲಿ ಅಕ್ರಮ ನಡೆದಿದ್ದರೆ ದಾಖಲೆಗಳ ಸಹಿತ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು’ ಎಂದರು.

ಮಧ್ಯ ಪ್ರವೇಶಿಸಿದ ತಾಲ್ಲೂಕು ಪಂಚಾಯ್ತಿ ಇ.ಒ ಎನ್.ಸತೀಶ್ರೆಡ್ಡಿ, ‘ತಾಲ್ಲೂಕು ಪಂಚಾಯ್ತಿಗೆ ಸಂಬಂಧಿಸಿದ ವಿಷಯಗಳನ್ನು ಮಾತ್ರ ಚರ್ಚಿಸಬೇಕು. ಅನಗತ್ಯ ವಿಷಯ ಪ್ರಾಸ್ತಾಪಿಸಿ ಆರೋಪ ಮಾಡುವುದು ಸರಿಯಲ್ಲ. ನಿಮ್ಮಲ್ಲಿ ನಿರ್ದಿಷ್ಟ ದಾಖಲೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ, ಇಲ್ಲವೇ ಮೆಲಾಧಿಕಾರಿಗಳಿಗೆ ದೂರು ನೀಡಿ’ ಎಂದು ಖಾರವಾಗಿ ನುಡಿದರು.

ಬಳಿಕ ಅಧಿಕಾರಿಗಳು ಸಭೆ ಬಹಿಷ್ಕರಿಸಿ ಹೊರ ನಡೆದರು. ನಂತರ ಅಧಿಕಾರಿಗಳೊಂದಿಗೆ ತಮ್ಮ ಕಚೇರಿಯಲ್ಲಿ ಸಭೆ ನಡೆಸಿದ ಸತೀಶ್ ರೆಡ್ಡಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿ ಅವರಿಗೆ ಪೋನ್ ಮೂಲಕ ಮಾಹಿತಿ ನೀಡಿದರು. ಜೊತೆಗೆ ಜಿಲ್ಲಾಧಿಕಾರಿಗೂ ಲಿಖಿತವಾಗಿ ದೂರು ರವಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.