ADVERTISEMENT

ಅನಧಿಕೃತ ಬ್ಯಾನರ್: ಉಪಲೋಕಾಯುಕ್ತ ಸಿಡಿಮಿಡಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2013, 10:00 IST
Last Updated 13 ಜುಲೈ 2013, 10:00 IST

ಬಳ್ಳಾರಿ: ನಗರದಲ್ಲಿ ಎಲ್ಲಿ ನೋಡಿದರೂ ಫ್ಲೆಕ್ಸ್‌ಗಳು, ಕಟೌಟ್‌ಗಳು, ಬ್ಯಾನರ್‌ಗಳು ಕಾಣುತ್ತವೆ. ಅವನ್ನು ಅಳವಡಿಸಲು ಪರವಾನಗಿ ನೀಡಲಾಗಿದೆಯೇ ಅಥವಾ ಅನಧಿಕೃತವಗಿಯೇ ಅಳವಡಿಸಲಾಗಿದೆಯೇ ಎಂದು ಉಪಲೋಕಾಯುಕ್ತ ನ್ಯಾ. ಸುಭಾಷ್ ಆದಿ ಮಹಾನಗರ ಪಾಲಿಕೆ ಅಧಿಕಾರಿಗಳನ್ನು ಪ್ರಶ್ನಿಸಿದರು.

ಸ್ಥಳೀಯ ಜೋಳದರಾಶಿ ಡಾ.ದೊಡ್ಡನಗೌಡ ರಂಗಮಂದಿರದಲ್ಲಿ ಶುಕ್ರವಾರ ಸಾರ್ವಜನಿಕರ ಕುಂದುಕೊರತೆಗಳಿಗೆ ಸಂಬಂಧಿಸಿದ ಅಹವಾಲುಗಳ ವಿಚಾರಣೆ ವೇಳೆ ನಗರದಲ್ಲಿನ ಫ್ಲೆಕ್ಸ್ ಹಾವಳಿ ಬಗ್ಗೆ ಅವರು ವೈಯಕ್ತಿಕವಾದ ಅನುಭವವನ್ನು ಹೇಳಳಿಕೊಂಡರು.

`ನಾನೂ ನಿನ್ನೆಯಿಂದ ನೋಡುತ್ತಿದ್ದೇನೆ. ಅದೆಷ್ಟು ಹೋರ್ಡಿಂಗ್ಸ್‌ಗಳು ಕಂಡುಬರುತ್ತವೆ. ಅವೆಲ್ಲ ಅಧಿಕೃತವೇ' ಎಂದು ಪ್ರಶ್ನಿಸಿದ ಅವರು, ಒಂದೊಮ್ಮೆ ಅಧಿಕೃತವೇ ಆಗಿದ್ದರೆ, ಅದರಿಂದ ಬಂದ ಆದಾಯ ಎಷ್ಟು ಎಂಬ ಮಾಹಿತಿ ಕೊಡಿ ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

ರಾಜಕಾರಣಿಗಳ ಜನ್ಮದಿನಕ್ಕೆ ಶುಭಾಶಯ ಕೋರಲು ನೂರಾರು ಫ್ಲೆಕ್ಸ್‌ಗಳನ್ನು ಅಳವಡಿಸುವ ಪದ್ಧತಿ ಕುರಿತು ಗಮನ ಸೆಳೆದಾಗ, ತೀವ್ರ ಅಚ್ಚರಿ ವ್ಯಕ್ತಪಡಿಸಿದ ಉಪ ಲೋಕಾಯುಕ್ತರು, `ಅನಧಿಕೃತ ಹೋರ್ಡಿಂಗ್ಸ್‌ಗಳ ಬಗ್ಗೆ ಗಮನ ಹರಿಸಿ, ನಿಯಂತ್ರಿಸಿ. ಇಲ್ಲದಿದ್ದರೆ ನಿಮ್ಮ ಸಂಬಳದಿಂದಲೇ ಹೋರ್ಡಿಂಗ್ಸ್‌ಗಳ ಶುಲ್ಕ ವಸೂಲಿ ಮಾಡಲಾಗುವುದು' ಎಂದು ಎಚ್ಚರಿಸಿದರು.

ಜನರ ಗಮನವನ್ನು ತಮ್ಮತ್ತ ಸೆಳೆಯಲು ಯಾರ‌್ಯಾರೋ ನಗರದಲ್ಲಿ ಫ್ಲೆಕ್ಸ್ ಅಳವಡಿಸುತ್ತಾರೆ. ಇದರಿಂದ ನಗರದ ಅಂದ ಹಾಳಾಗುತ್ತಿದೆ. ವಾಹನ ಸವಾರರಿಗೆ ಗೊಂದಲ ಉಂಟಾಗುತ್ತದೆ ಎಂದು ರಾಜು ಎಂಬ ಯುವಕ ಅಹವಾಲು ಸಲ್ಲಿಸಿದರಲ್ಲದೆ, ಇದಕ್ಕೆ ಕಡಿವಾಣ ಹಾಕಬೇಕು ಎಂದು ಕೋರಿದರು.

ಈ ಅಧಿಕಾರಿಗಳು ಮಹಾನಗರ ಪಾಲಿಕೆಯನ್ನು ಫ್ಲೆಕ್ಸ್ ಹಾಕುವವರಿಗೆ ಮಾರಾಟ ಮಾಡಿದ್ದಾರೆ ಎಂದು ಕಟುವಾಗಿ ಟೀಕಿಸಿದ ನ್ಯಾ. ಆದಿ, `ಈ ಬಗ್ಗೆ ಕ್ರಮ ಕೈಗೊಳ್ಳಿ. ನಾನು ಇಲ್ಲಿಂದ ಹೋದ ನಂತರವೂ ಈ ವಿಷಯವನ್ನು ಮರೆಯುವುದಿಲ್ಲ. ಈ ಬಗ್ಗೆ ಮಾಹಿತಿ ತರಿಸಿಕೊಳ್ಳುವೆ' ಎಂದು ಸಿಡಿಮಿಡಿಗೊಂಡರು.

`ಹೋರ್ಡಿಂಗ್ಸ್ ಹಾವಳಿಯಿಂದಾಗಿ ನಗರದ ರಸ್ತೆಗಳಲ್ಲಿ ಓಡಾಡುವಂತಿಲ್ಲ. ಜನ ಈ ಬಗ್ಗೆ ದೂರು ನೀಡಲು ಮುಂದೆ ಬರುವುದಿಲ್ಲ. ನಮ್ಮಂಥವರೇ ಇದನ್ನು ನೋಡಿ ಸುಮ್ಮನೆ ಹೋಗುತ್ತೇವೆ. ಆದರೆ, ಯಾರಾದರೂ ದೂರು ನೀಡಿದಾಗಲಾದರೂ ಗಮನಿಸಿ ಕ್ರಮ ಕೈಗೊಳ್ಳಬೇಕಲ್ಲವೇ' ಎಂದು ಅವರು ಕಳಕಳಿ ವ್ಯಕ್ತಪಡಿಸಿದರು.

ಹೋರ್ಡಿಂಗ್ಸ್‌ಗಳ ಅಳವಡಿಕೆಗೆ ಪರವಾನಗಿ ನೀಡುವ ಸಂದರ್ಭ ನಿಯಮಗಳನ್ನು  ಗಾಳಿಗೆ ತೂರಲಾಗುತ್ತಿದೆ. ಈ ಬಗ್ಗೆ ಸೂಕ್ತ ನಿಯಮ ರೂಪಿಸಿ ಆದಾಯ ಹೆಚ್ಚಳಕ್ಕೆ ಅನುವು ಮಾಡಿಕೊಟ್ಟರೂ, ಕೇವಲ ಶೇ 10ರಷ್ಟು ಶುಲ್ಕವನ್ನು ಮಾತ್ರ ಆಕರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಸಹ ದೂರಿದರು.

ಬ್ಯಾನರ್ ತೆರವು
ಜನ್ಮದಿನದ ಅಂಗವಾಗಿ ರಾಜಕಾರಣಿಯೊಬ್ಬರಿಗೆ ಶುಭಾಶಯ ಕೋರಲೆಂದೇ ನಗರದಾದ್ಯಂತ ಒಂದು ವಾರದಿಂದ ಅಳವಡಿಸಲಾಗಿದ್ದ ಬ್ಯಾನರ್‌ಗಳನ್ನು ಶುಕ್ರವಾರ ಸಂಜೆಯ ವೇಳೆಗೆ ಮಹಾನಗರ ಪಾಲಿಕೆ ಸಿಬ್ಬಂದಿ ತರಾತುರಿಯಲ್ಲಿ ತೆರವುಗೊಳಿಸಿದರು.

ಗ್ರಾನೈಟ್ ಅಡ್ಡೆ ತೆರವುಗೊಳಿಸಿ
ಸ್ಥಳೀಯ ವಿಶಾಲ ನಗರದಲ್ಲಿರುವ ಜನವಸತಿ ಪ್ರದೇಶದಲ್ಲಿ ಉದ್ಯಮಿಯೊಬ್ಬರಿಗೆ ಭಾರಿ ಗಾತ್ರದ ಗ್ರಾನೈಟ್ ಇರಿಸಲು ಅನುಮತಿ ನೀಡಲಾಗಿದೆ. ಲಾರಿಗಳು ಬರುವುದರಿಂದ ಅಕ್ಕಪಕ್ಕದಲ್ಲಿ ವಾಸಿಸುವ ಜನತೆಗೆ ಹಗಲು, ರಾತ್ರಿ ತೀವ್ರ ಸಮಸ್ಯೆ ಎದುರಾಗುತ್ತಿದೆ ಎಂದು ರಾಜಶೇಖರ್ ಅವರು ಸಲ್ಲಿಸಿದ ದೂರಿನ ಕುರಿತು ವಿಚಾರಣೆ ನಡೆಸಲಾಯಿತು.

ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿ ಜನವಸತಿ ಪ್ರದೇಶದಲ್ಲಿ ವ್ಯಾಪಾರಿ ಚಟುವಟಿಕೆಗೆ ಅನುಮತಿ ನೀಡಬಾರದು. ಈ ಬಗ್ಗೆ ಗಮನ ಹರಿಸಿ ಕೂಡಲೇ ಆ ವ್ಯವಹಾರ ಸ್ಥಗಿತಗೊಳಿಸಿ ಎಂದು ಆದಿ ಅವರು ಪಾಲಿಕೆ ಸಿಬ್ಬಂದಿಗೆ ಸೂಚಿಸಿದರು.

ಸ್ಮಶಾನಕ್ಕೆ ಕಂಪೌಂಡ್ ಕಟ್ಟಿ
ತಮ್ಮ ಬಡಾವಣೆಯಲ್ಲಿ ಅನೇಕ ಸಮಸ್ಯೆಗಳಿದ್ದು, ಕೂಡಲೇ ಅವುಗಳ ಬಗ್ಗೆ ಗಮನ ಹರಿಸುವಂತೆ ಕೋರಿ ರಾಮೇಶ್ವರಿ ನಗರದ ರುದ್ರಪ್ಪ ಅವರು ಸಲ್ಲಿಸಿದ ದೂರಿಗೆ ಸಂಬಂಧಿಸಿದಂತೆ ಕೂಲಂಕಷವಾಗಿ ವಿಚಾರಣೆ ನಡೆಸಲಾಯಿತು.

ಮನೆಗಳ ಎದುರೇ ಇರುವ ಸ್ಮಶಾನದಲ್ಲಿ ಶವಸಂಸ್ಕಾರ ಮಾಡುವುದನ್ನು ಆ ಪ್ರದೇಶದ ಜನ ನಿತ್ಯವೂ ನೋಡುವ ಸ್ಥಿತಿ ಇದೆ. ಈ ಬಗ್ಗೆ ಗಮನ ಹರಿಸಿ ಕಂಪೌಂಡ್ ನಿರ್ಮಿಸಿ ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ ಉಪ ಲೋಕಾಯುಕ್ತರು, ಈ ಪ್ರದೇಶದಲ್ಲಿ ಮದುವೆ ಸಮಾರಂಭ ಹಮ್ಮಿಕೊಳ್ಳುವವರು ಅನಧಿಕೃತವಾಗಿ ವಿದ್ಯುತ್ ಪಡೆಯುವುದನ್ನು ತಪ್ಪಿಸುವಂತೆ ಹೆಸ್ಕಾಂ ಸಿಬ್ಬಂದಿಗೆ ಆದೇಶಿಸಿದರಲ್ಲದೆ, ವಿದ್ಯುತ್ ಪೋಲಾಗುವುದನ್ನು ತಡೆಯುವಂತೆ ಸೂಚಿಸಿದರು.

`ಸಾರ್ವಜನಿಕರು ವಿದ್ಯುತ್ ಬಿಲ್ ಕಟ್ಟದಿದ್ದರೆ ಸಂಪರ್ಕ ಕಡಿತಗೊಳಿಸುತ್ತೀರಿ. ಕಂಬದಲ್ಲಿನ ತಂತಿಗೆ ಹುಕ್ ಹಾಕಿ ವಿದ್ಯುತ್ ಕದ್ದರೆ ಆ ಬಿಲ್ ಅನ್ನು ಪಾಲಿಕೆಯವರು  ಕಟ್ಟಬೇಕಾಗುತ್ತದೆ. ಈ ಕುರಿತು ಗಮನಿಸಿ ಕ್ರಮ ಕೈಗೊಳ್ಳದಿದ್ದರೆ ನಿಮ್ಮ ಸಂಬಳದಿಂದಲೇ ಬಿಲ್ ಪಾವತಿಸಿಕೊಳ್ಳಬೇಕಾಗುತ್ತದೆ' ಎಂದೂ ಅವರು ಎಚ್ಚರಿಸಿದರು.

ಒಳಚರಂಡಿ, ಚರಂಡಿ, ಕುಡಿಯುವ ನೀರು ಪೂರೈಕೆಯ ವೇಳೆ ಬದಲಾವಣೆ ಹಾಗೂ  ಆಸ್ತಿ ವ್ಯಾಜ್ಯಗಳಿಗೆ ಸಂಬಂಧಿಸಿದ ಅನೇಕ ದೂರುಗಳನ್ನು ಉಪ ಲೋಕಾಯುಕ್ತರಿಗೆ  ಸಲ್ಲಿಸಲಾಗಿತ್ತು. ಸಂಬಂಧಿಸಿದವರ ಗಮನಕ್ಕೇ ತಾರದೆ ಆಸ್ತಿಯನ್ನು ಪರಭಾರೆ ಮಾಡಿರುವುದರ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮುರ್ತಿಯವರು, ಸಿವಿಲ್ ವ್ಯಾಜ್ಯಗಳಿಗೆ ಅವಕಾಶವಾಗದಂತೆ ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಭೂದಾಖಲೆಗಳ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.