ADVERTISEMENT

ಅಭಿಮಾನಿಗಳ ದುಃಖದ ಕೋಡಿ ಹರಿಯಿತು...

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 7:40 IST
Last Updated 11 ಫೆಬ್ರುವರಿ 2011, 7:40 IST

ಹೂವಿನಹಡಗಲಿ:  ಸಜ್ಜನ, ಸುಂಸ್ಕೃತ ರಾಜಕಾರಣಿ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಅವರ ಪಾರ್ಥಿವಶರೀರ ಗುರುವಾರ ಬೆಳಗಿನ ಜಾವ 3 ಗಂಟೆಗೆ ಹಡಗಲಿಯ ಅವರ ತೋಟದ ನಿವಾಸಕ್ಕೆ ಬಂದಾಗ ಅವರ ದರ್ಶನಕ್ಕಾಗಿ ಕಾದು ಕುಳಿತ್ತಿದ್ದ ಅಭಿಮಾನಿಗಳ ಮಡುಗಟ್ಟಿದ ದುಃಖದ ಕೋಡಿ ಒಡೆಯಿತು. ಜನರು ಬಿಕ್ಕಿ ಬಿಕ್ಕಿ ರೋದಿಸಿದರು.

ಅವರ ದರ್ಶನಕ್ಕಾಗಿ ಸಾಲಗಿ ನಿಂತು ಪುಷ್ಪಹಾಕಿ ಅಂತಿಮ ನಮನ ಸಲ್ಲಿಸಿದರು. ಬೆಳಿಗ್ಗೆ 9.30ಕ್ಕೆ ಪಟ್ಟಣದ ಜಿ.ಪಿ.ಜಿ. ಪದವಿ ಪೂರ್ವಕಾಲೇಜಿನ ಕ್ರೀಡಾ ಮೈದಾನಕ್ಕೆ ಪ್ರಕಾಶರ ಪಾರ್ಥಿವ ಶರೀರವನ್ನು ತರಲಾಯಿತು.ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಅವರ ಅಭಿಮಾನಿಗಳು ಬ್ಯಾರಿಕೇಟ್ ಮೂಲಕ ಶಾಂತಿಯಿಂದ ದರ್ಶನಕ್ಕೆ ಬಂದರು.ದಾವಣಗೆರೆ, ಹಾವೇರಿ, ಗದಗ, ವಿಜಾಪುರ, ಚಿತ್ರದುರ್ಗ, ಧಾರವಾಡ, ಹುಬ್ಬಳ್ಳಿ, ಬಳ್ಳಾರಿ, ಹೊಸಪೇಟೆ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಕೊಟ್ಟರು, ಹರಪನಹಳ್ಳಿ, ಮುಂಡರಗಿ, ನವಲಗುಂದ, ರಾಯಚೂರು, ಕಾರವಾರ ಸೇರಿದಂತೆ ಅನೇಕ ಭಾಗಗಳಿಂದ ಆಗಮಿಸಿದ್ದ ಅಭಿಮಾನಿಗಳು ಅಂತಿಮ ದರ್ಶನ ಪಡೆದರು.

ಪಟ್ಟಣದಲ್ಲಿ ಸ್ಮಶಾನ ಮೌನ ಆವರಿಸಿತ್ತು. ಗುರುವಾರ ಕೂಡ ವ್ಯಾಪಾರಸ್ಥರು ಸ್ವಪ್ರೇರಣೆಯಿಂದ ಹೊಟೇಲ್, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಅಭಿಮಾನ ತೋರಿದರು. ಬೇರೆಡೆಯಿಂದ ಬಂದಿದ್ದ ಜನರಿಗೆ ಯಾವುದೇ ತೊಂದರೆಯಾಗದಂತೆ  ಅನೇಕ ಸಂಘಟನೆಗಳು ತಿಂಡಿ ಮತ್ತು ನೀರಿನ ವ್ಯವಸ್ಥೆ ಮಾಡಿದ್ದವು.  ಬರುವ ಸಾರ್ವಜನಿಕರನ್ನು ಕರೆದು ಅವರಿಗೆ ಉಪಚರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಮಾಗಳ ಗ್ರಾಮದ ಪ್ರಕಾಶ ಅಭಿಮಾನಿಗಳು ಟ್ರ್ಯಾಕ್ಟ್‌ರ್‌ನಲ್ಲಿ ಉಪ್ಪಿಟ್ಟಿನ ಡಬರಿಯನ್ನು ಇಟ್ಟುಕೊಂಡು ವಿತರಿಸಿದರು.  ಗುತ್ತಿಗೆದಾರರ ಸಂಘ ಮತ್ತು ವೀರಶೈವ ವಿದ್ಯಾವರ್ಧಕ ಸಂಘದ ವತಿಯಿಂದ ಜಿಬಿಆರ್ ಕಾಲೇಜಿನಲ್ಲಿಯೂ ತಿಂಡಿ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿತ್ತು.  ನಾಳೆ ನಮ್ಮ ದೇವರು ನಮಗೆ ಸಿಗುವುದಿಲ್ಲ ಅವರಿಗಾಗಿ ಸ್ವಲ್ಪವಾದರೂ ಕೆಲಸ ಮಾಡಿದರೆ ನಮಗೆ ತೃಪ್ತಿ ಎಂದು ಸೇವೆ ಸಲ್ಲಿಸುತ್ತಿದ್ದ ಜನರು ತಮ್ಮತಮ್ಮಲ್ಲಿ ಮಾತನಾಡಿಕೊಳ್ಳುತ್ತಿದ್ದರು.

ಪ್ರಕಾಶ್ ಅವರಿಂದಲೇ ಹೆಚ್ಚು ಪ್ರಚಲಿತವಾದ ಊರು ಹೂವಿನಹಡಗಲಿ. ಈಗ ಅವರಿಲ್ಲ ಎಂದರೆ ಇಡೀ ಹಡಗಲಿ ಕತ್ತಲಲ್ಲಿ ಮುಳುಗಿದಂತೆ ಎಂದು ಪಟ್ಟಣದ, ಹಳ್ಳಿಗಳಿಂದ ಬಂದಿದ್ದ ಜನರು ನೋವಿನಿಂದ ಹೇಳುತ್ತಿದ್ದರು.ಪಟ್ಟಣದಲ್ಲಿ ಎಲ್ಲಿ ನೋಡಿದರಲ್ಲಿ ಜನರೇ ಕಾಣುತ್ತಿದ್ದರು. ಗುರುವಾರ ಬೆಳಿಗ್ಗೆ ಹಡಗಲಿಯ ತೋಟದ ಮನೆಯಲ್ಲಿ ಪಾರ್ಥಿವ ಶರೀರಕ್ಕೆ ಶ್ರೀಶೈಲ ಜಗದ್ಗುರು ಚನ್ನಸಿದ್ಧರಾಮ ಭಗವತ್ಪಾದರು, ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅಂತಿಮ ಪೂಜೆ ಸಲ್ಲಿಸಿದರು. ಗವಿಮಠದ ಪಂಪಯ್ಯ ದೇವರು, ಕುರುಬಗೊಂಡದ ಪಂಚಾಕ್ಷರಿ ಶಾಸ್ತ್ರಿ, ಗುರುಶಾಂತದೇವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.