ADVERTISEMENT

ಅರಣ್ಯ ಇಲಾಖೆ ನರ್ಸರಿಯಲ್ಲಿ ನಳನಳಿಸುತ್ತಿರುವ ಸಸ್ಯಗಳು

​ಪ್ರಜಾವಾಣಿ ವಾರ್ತೆ
Published 5 ಜೂನ್ 2018, 13:26 IST
Last Updated 5 ಜೂನ್ 2018, 13:26 IST

ಸಂಡೂರು: ಜೂನ್ ತಿಂಗಳಿ ನೊಂದಿಗೆ ಮಳೆಗಾಲವೂ ಆರಂಭ ಆಗುವುದರಿಂದ ಮತ್ತು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಎಲ್ಲೆಡೆ ವನ ಮಹೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಇಂತಹ ಕಾರ್ಯಕ್ರಮಗಳಿಗೆ ವಿವಿಧ ಜಾತಿಯ ಗಿಡಗಳ ಅಗತ್ಯವಿರುತ್ತದೆ. ಗಿಡಗಳ ಅಗತ್ಯವನ್ನು ಪೂರೈಸುವಲ್ಲಿ ಅರಣ್ಯ ಇಲಾಖೆಯ ನರ್ಸರಿಗಳು ಮಹತ್ವದ ಪಾತ್ರವನ್ನು ವಹಿಸುತ್ತದೆ. ಪ್ರಸಕ್ತ ವರ್ಷದಲ್ಲಿ ತಾಲ್ಲೂಕಿನ ಅರಣ್ಯ ಇಲಾಖೆಯ ಉತ್ತರ ಹಾಗೂ ದಕ್ಷಿಣ ವಲಯ ಮತ್ತು ಸಾಮಾಜಿಕ ಅರಣ್ಯ ವಿಭಾಗಗಳ ಸುಪರ್ದಿಯಲ್ಲಿರುವ ರಾಘಾಪುರ, ಅಂಕಮನಾಳ್ ಹಾಗೂ ಗುಂಡಿನ ಹೊಳೆ ನರ್ಸರಿಗಳಲ್ಲಿ ಸುಮಾರು ನಾಲ್ಕು ಲಕ್ಷ ವಿವಿಧ ಜಾತಿಯ ಸಸ್ಯಗಳನ್ನು ಅಭಿವೃದ್ಧಿ ಪಡಿಸಿವೆ.

ಇವುಗಳಲ್ಲಿ ಕೆಲವನ್ನು ರಿಯಾಯಿತಿ ದರದಲ್ಲಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ವಿತರಿಸಿದರೆ, ಉಳಿದವುಗಳನ್ನು ಅರಣ್ಯ ಪ್ರದೇಶದಲ್ಲಿ ನೆಡುತೋಪು ನಿರ್ಮಾಣ, ಶಾಲಾ ಕಾಲೇಜು, ಕಚೇರಿ ಆವರಣ, ರಸ್ತೆ ಬದಿ ಮುಂತಾದ ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟು ಅಭಿವೃದ್ಧಿ ಪಡಿಸಲು ಉಪಯೋಗಿಸಲಾಗುತ್ತದೆ ಎನ್ನುತ್ತಾರೆ ವಲಯ ಅರಣ್ಯಾಧಿಕಾರಿಗಳಾದ ನರಸಿಂಹಮೂರ್ತಿ, ಶಶಿಧರ್ ಹಾಗೂ ರುದ್ರೇಶ್.

ADVERTISEMENT

ಇಲ್ಲಿನ ವಾತಾವರಣದಲ್ಲಿ ಸಮೃದ್ಧವಾಗಿ ಬೆಳೆಯುವ ಸಸ್ಯಗಳನ್ನೇ ಇಲ್ಲಿನ ನರ್ಸರಿಗಳಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಈ ಭಾಗದ ಕಾಡುಗಳಲ್ಲಿ ಹೆಚ್ಚಾಗಿ ಕಂಡು ಬರುವ ಕಮರ, ಹೆಬ್ಬೇವು, ಸಿಲ್ವರ್ ಓಕ್, ಹಿಪ್ಪೆ, ಮಳೆ ಮರ, ಕಾಡು ಬಾದಾಮಿ, ಹೊಳೆಮತ್ತಿ, ತಾರೆ, ಬೀಟೆ, ಸಾಗವಾನಿ, ಬೇವು,.ನುಗ್ಗೆ, ಹೊಂಗೆ, ಅರಳಿ, ಅತ್ತಿ, ಶಿವನೆ, ಸಿಸ್ಸು, ಉದಯ ಮುಂತಾದ ಗಿಡಗಳ ಜೊತೆಗೆ ಸಿಹಿ ಹುಣಿಸೆ, ಹಲಸು, ನೇರಳೆ, ಚಳ್ಳೆ ಮುಂತಾದ ಹಣ್ಣಿನ ಸಸಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ.

ಕಾಡಿನಲ್ಲಿ ಹಣ್ಣಿನ ಮರಗಳು ಹೆಚ್ಚಾದರೆ, ಸಸ್ಯಹಾರಿ ಪ್ರಾಣಿಗಳು ಆಹಾರ ಅರಸಿ ನಾಡಿಗೆ ಬರುವುದನ್ನು ತಪ್ಪುತ್ತದೆ. ಈ ಹಿನ್ನೆಲೆಯಲ್ಲಿ ಕಾಡಿನಲ್ಲಿ ಹಾಗೂ ರಸ್ತೆ ಬದಿಗಳಲ್ಲಿ ಆಲಂಕಾರಿಕ ಮರ–ಗಿಡಗಳ ಜೊತೆಯಲ್ಲಿ ಹಣ್ಣಿನ ಮರಗಳ ಸಂಖ್ಯೆ ಹೆಚ್ಚಬೇಕೆಂಬ ಮಾತುಗಳು ಕೇಳಿಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.