ADVERTISEMENT

ಆರೋಪಿಗಳೂ ಪತ್ತೆಯಿಲ್ಲ, ಪರಿಹಾರವೂ ಇಲ್ಲ

ಸೆಕ್ಯೂರಿಟಿ ಗಾರ್ಡ್ ಗಿಡ್ಡಯ್ಯನ ಕೊಲೆ

ಸಿದ್ದಯ್ಯ ಹಿರೇಮಠ
Published 27 ಡಿಸೆಂಬರ್ 2012, 9:03 IST
Last Updated 27 ಡಿಸೆಂಬರ್ 2012, 9:03 IST
ಪರಿಹಾರವೇ ದೊರೆಯದೆ ಕಂಗಾಲಾಗಿರುವ ಗಿಡ್ಡಯ್ಯನ ಕುಟುಂಬ ಸದಸ್ಯರು.
ಪರಿಹಾರವೇ ದೊರೆಯದೆ ಕಂಗಾಲಾಗಿರುವ ಗಿಡ್ಡಯ್ಯನ ಕುಟುಂಬ ಸದಸ್ಯರು.   

ಬಳ್ಳಾರಿ: `ಕೆಲಸಕ್ಕೆ ಹೋದ ಅಪ್ಪ ಮರಳಿ ಮನೆಗೆ ಬರಲೇ ಇಲ್ಲ. ಆತ ಕೊಲೆಯಾಗಿದ್ದಾನೆ ಎಂಬ ಸುದ್ದಿ ಬರಸಿಡಿಲಿನಂತೆ ಬಂದೆರಗಿತ್ತು. ಹಗಲು- ರಾತ್ರಿ ಕಾವಲು ಕಾಯುವ ಕೆಲಸ ಮಾಡುತ್ತಿದ್ದ ಅಪ್ಪ ಹೊರಟು ಹೋದ. ನಮಗೀಗ ದೇವರೇ ದಿಕ್ಕು'.

ಸ್ಥಳೀಯ ಕೋಟೆ ಪ್ರದೇಶದಲ್ಲಿರುವ ಲಕ್ಷ್ಮಿವಿಲಾಸ ಬ್ಯಾಂಕ್‌ನ ಎಟಿಎಂ ಎದುರು ಕರ್ತವ್ಯ ನಿರತನಾಗಿದ್ದಾಗಲೇ ಕೊಲೆಗೀಡಾದ ಕಾವಲುಗಾರ ಗಿಡ್ಡಯ್ಯನ ಹಿರಿಯ ಮಗ ಗಿರೀಶ ಈ ರೀತಿ ಹೇಳುತ್ತಿರುವಾಗ ಆತನ ಕಣ್ಣಾಲಿಗಳು ತುಂಬಿಬಂದವು. ಗಿಡ್ಡಯ್ಯನ ಕೊಲೆಯಾಗಿ (ಸೆ.23) ಮೂರು ತಿಂಗಳು ಕಳೆದಿವೆ. ಆದರೆ, ಈತನನ್ನು ಕೊಂದವರ ಬಗ್ಗೆ ಪೊಲೀಸರಿಗೆ ಸುಳಿವೇ ದೊರೆತಿಲ್ಲ. ನಗರದ ಬಂಡಿಹಟ್ಟಿಯ ರಾಮಗನಗರ ನಿವಾಸಿ ಗಿಡ್ಡಯ್ಯ ಕಳೆದ ಸೆಪ್ಟೆಂಬರ್ 22ರಂದು ರಾತ್ರಿ ಕೆಲಸಕ್ಕೆ ಹೋದವ ಬೆಳಗಿನ ಜಾವ ರಕ್ತದ ಮಡುವಿನಲ್ಲಿ ಶವವಾಗಿ ದೊರೆತಿದ್ದ. ಎಟಿಎಂ ಕೇಂದ್ರ ದೋಚಲು ಬಂದಿದ್ದ ತಂಡ ಆತನ ತಲೆಯ ಮೇಲೆ ದೊಡ್ಡದೊಂದು ಕಲ್ಲು ಎತ್ತಿ ಹಾಕಿ ಪರಾರಿಯಾಗಿತ್ತು. ಇದುವರೆಗೂ ಅವರ ಸುಳಿವು ದೊರೆತಿಲ್ಲ.

ಕೆಲಸ ಕೊಟ್ವರು ಬರಲೇ ಇಲ್ಲ: `ಯಾರೊಂದಿಗೂ ಗಟ್ಟಿಯಾಗಿ ಮಾತನಾಡದ ಗಂಡನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಅವರು ಸತ್ತ ದಿನ ಶವ ಸಂಸ್ಕಾರಕ್ಕೆಂದು ಬ್ಯಾಂಕ್‌ನವರು ರೂ 5 ಸಾವಿರ ಕೊಟ್ಟಿದ್ದರು. ಒಂದು ವಾರದ ನಂತರ ಮತ್ತೆ ರೂ 10 ಸಾವಿರ ಕೊಟ್ಟರು. ಅಷ್ಟು ಬಿಟ್ಟರೆ ನಮಗೆ ಪರಿಹಾರವೇ ದೊರೆತಿಲ್ಲ' ಎಂದು ಪತ್ನಿ ಚಂದ್ರಮ್ಮ `ಪ್ರಜಾವಾಣಿ' ಎದುರು ಅಳಲು ತೋಡಿಕೊಂಡರು.

`ಇಬ್ಬರು ಗಂಡುಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಹಾಗೂ ಅತ್ತೆ ಮನೆಯಲ್ಲಿದ್ದಾರೆ. ಗಂಡು ಮಕ್ಕಳಿಬ್ಬರೂ ಹೇರ್ ಕಟಿಂಗ್ ಸಲೂನ್‌ನಲ್ಲಿ ನಿತ್ಯ ನೂರಿನ್ನೂರು ರೂಪಾಯಿ ದುಡಿದು ತಂದು ನಮ್ಮನ್ನು ಸಾಕುತ್ತಿದ್ದಾರೆ. ಹೆಣ್ಣು ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ದ್ವೇಷವೆಂದರೆ ಏನೆಂಬುದೇ ಗೊತ್ತಿರದ ಗಂಡನನ್ನು ಕೊಂದವರು ಮಾತ್ರ ಪೊಲೀಸರಿಗೆ ಸಿಗುತ್ತಲೇ ಇಲ್ಲ' ಎಂದು ಅವರು ಕಣ್ಣೀರು ಸುರಿಸುತ್ತಾರೆ.

`ಹೇರ್‌ಕಟಿಂಗ್ ಅಂಗಡಿಯಲ್ಲಿನ ಕೆಲಸ ಬಿಟ್ಟು, ಬೆಂಗಳೂರು ಮೂಲದ ಸೆಕ್ಯೂರರ್ ಸೆಕ್ಯೂರಿಟಿ ಏಜೆನ್ಸಿಯಲ್ಲಿ ಎರಡೂವರೆ ವರ್ಷದ ಹಿಂದೆ ಕೆಲಸಕ್ಕೆ ಸೇರಿಕೊಂಡಿದ್ದ ಗಿಡ್ಡಯ್ಯ ಕೆಲಸ ಮಾಡುತ್ತಿದ್ದ ಕಂಪೆನಿಯವರ‌್ಯಾರೂ ಇದುವರೆಗೆ ಅವರ ಮನೆಗೆ ಬಂದು ಸಾಂತ್ವನ ಹೇಳಿಲ್ಲ.

ಪ್ರತಿ ತಿಂಗಳೂ ಸಂಬಳ ನೀಡುತ್ತಿದ್ದ ನಾಗರಾಜ ಎಂಬುವವರು ವಿಮ್ಸ ಶವಾಗಾರದ ಬಳಿ ಅಂದೇ ಭೇಟಿಯಾಗಿ ಹೋಗಿದ್ದಾರೆ. ಅಮಾನುಷವಾಗಿ ಕೊಲೆಯಾಗಿರುವ ಆತನ ಕುಟುಂಬಕ್ಕೆ ಬ್ಯಾಂಕ್‌ನಿಂದ ರೂ 15 ಸಾವಿರ ದೊರೆತಿದ್ದನ್ನು ಬಿಟ್ಟರೆ ಬಿಡಿಗಾಸೂ ಸಿಕ್ಕಿಲ್ಲ. ಭವಿಷ್ಯನಿಧಿ, ಇಎಸ್‌ಐ, ಗುಂಪು ವಿಮೆ ಮತ್ತಿತರ ಸೌಲಭ್ಯಗಳ ಕುರಿತು ಅನಕ್ಷರಸ್ಥನಾಗಿದ್ದ ಅಪ್ಪನಿಗೆ ಕಂಪೆನಿಯವರು ತಿಳಿಸಿರಲೇ ಇಲ್ಲ. ಅವರ ಗುರುತಿನ ಚೀಟಿಯೂ ಇಲ್ಲ ಎಂದು ಗಿಡ್ಡಯ್ಯನ ಮಕ್ಕಳು ತಿಳಿಸುತ್ತಾರೆ.

ಕಾರ್ಮಿಕ ಕಾಯ್ದೆ ಅಡಿ ಪರಿಹಾರ ಕೋರಿ ಸೆಕ್ಯೂರರ್ ಸೆಕ್ಯೂರಿಟಿ ಏಜೆನ್ಸಿ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿ, ನೋಟಿಸ್ ನೀಡಲಾಗಿದೆ. ಅದಕ್ಕೆ ಉತ್ತರ ನೀಡದಿದ್ದರೆ ಸಾಕ್ಷ್ಯ ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ. ಗುಂಪು ವಿಮೆ ಮಾಡಿಸದಿದ್ದರೆ ಕಂಪೆನಿಯ ಮಾಲೀಕರೇ ಸಂಬಳ ಮತ್ತು ವಯಸ್ಸಿಗೆ ಅನುಗುಣವಾದ ಪರಿಹಾರ ನೀಡಲೇಬೇಕಾಗುತ್ತದೆ ಎಂದು ಗಿಡ್ಡಯ್ಯನ ಕುಟುಂಬಕ್ಕೆ ಪರಿಹಾರ ದೊರಕಿಸಿಕೊಡಲು ಯತ್ನಿಸುತ್ತಿರುವ ವಕೀಲ ಅಶೋಕ್‌ರಾಜ್ ಹೇಳುತ್ತಾರೆ.

ಗಿಡ್ಡಯ್ಯನ ಕೊಲೆ ಘಟನೆಗೆ ಮುನ್ನ ನಗರದ ಹೊಸಪೇಟೆ ರಸ್ತೆಯಲ್ಲಿರುವ ಸಣ್ಣ ನೀರಾವರಿ ಇಲಾಖೆ ಕಚೇರಿಯ ಭದ್ರತಾ ಸಿಬ್ಬಂದಿಯೊಬ್ಬನ ಕೊಲೆಯೂ ನಡೆದಿದ್ದು, ಈವರೆಗೆ ಆ ಕೊಲೆಗಾರರ ಸುಳಿವು ದೊರೆತಿಲ್ಲ. ಅಷ್ಟೇ ಅಲ್ಲ, ಬಳ್ಳಾರಿಯ ಗಾಂಧಿನಗರದ ಕೆಎಚ್‌ಬಿ ಕಾಲೋನಿ ಮತ್ತು ಬ್ರೂಸ್‌ಪೇಟೆ ಬಳಿಯ ಸಭಾಪತಿ ಬೀದಿಯಲ್ಲಿ ಇತ್ತೀಚೆಗೆ ನಡೆದಿರುವ ವೃದ್ಧೆಯರಿಬ್ಬರ ಪ್ರತ್ಯೇಕ ಕೊಲೆ ಪ್ರಕರಣಗಳ ಪೊಲೀಸರಿಗೆ ಸುಳಿವೂ ದೊರೆತಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.