ADVERTISEMENT

ಆಸ್ಪತ್ರೆ ಕಟ್ಟಡ ಪೂರ್ಣಗೊಳಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 5:30 IST
Last Updated 4 ಸೆಪ್ಟೆಂಬರ್ 2013, 5:30 IST

ಹೂವಿನಹಡಗಲಿ: ತಾಲ್ಲೂಕಿನ ಹಿರೇಹಡಗಲಿಯಲ್ಲಿ ಕಳೆದ 10 ವರ್ಷದಿಂದ ನನೆಗುದಿಗೆ ಬಿದ್ದಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ಮಂಗಳವಾರ ಪ್ರತಿಪರ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ನಡೆಸಿತು.

ಗ್ರಾಮದ ಮುಖ್ಯ ಬೀದಿಯಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿ ಉಪತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನಾ ರರ್‍ಯಾಲಿ ಉದ್ದೇಶಿಸಿ ಎಸ್‌ಯುಸಿಐ ಸಂಚಾಲಕ ರಹಮತ್ ಬೀರಬ್ಬಿ ಮಾತನಾಡಿ, ಗ್ರಾಮದಲ್ಲಿ ಆರೋಗ್ಯ ಕೇಂದ್ರ ಕಟ್ಟಡದ ಅಲ್ಪ ಸ್ವಲ್ಪ ಕೆಲಸ ಬಾಕಿ ಉಳಿದು 10 ವರ್ಷಗಳೆ ಕಳೆದಿವೆ. ಸರ್ಕಾರಗಳು ಇತ್ತ ಕಡೆ ಗಮನಹರಿಸದಿರುವುದರಿಂದ ಬಡ ಜನತೆಗೆ ತೊಂದರೆಯಾಗಿದೆ ಎಂದರು.

ಸೋನಿಯಾ ಪ್ಯಾಕೇಜ್ ಅಡಿ ತಾಲ್ಲೂಕಿನಲ್ಲಿ ಕೈಗೆತ್ತಿಕೊಂಡ ಎಲ್ಲ ಕಾಮಗಾರಿಗಳು ಅಪೂರ್ಣವಾಗಿ ಅವಶೇಷಗಳಂತೆ ನಿಂತಿವೆ. ಕೋಟ್ಯಾಂತರ ರೂ. ಖರ್ಚು ಮಾಡಿದ್ದರೂ ಕಾಮಗಾರಿ ಪೂರ್ಣಗೊಳಿಸದೇ ಸಾರ್ವಜನಿಕರ ತೆರಿಗೆ ಹಣವನ್ನು ಸರ್ಕಾರಗಳೇ ಪೋಲು ಮಾಡುತ್ತಿವೆ ಎಂದು ಕಿಡಿಕಾರಿದರು.

ಜನಹಿತ ಕಾರ್ಯದಲ್ಲಿ ಸ್ವಾರ್ಥ ರಾಜಕೀಯ ಬದಿಗಿಡಬೇಕು. ತಾಲ್ಲೂಕಿನಲ್ಲಿ ಅಪೂರ್ಣಗೊಂಡಿರುವ ಎಲ್ಲ ಕಾಮಗಾರಿಗಳಿಗೂ ಅನುದಾನ ಒದಗಿಸಿ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದರು.

ರೈತ ಸಂಘದ ಮುಖಂಡರಾದ ಎಸ್.ಅನಿಲ್‌ಕುಮಾರ್, ಟಿ.ನಿಂಗಪ್ಪ, ಹಾಲಸ್ವಾಮಿ, ಕಾರ್ಮಿಕ ಸಂಘಟನೆಯ ಶಬ್ಬೀರ್‌ಬಾಷಾ  ಮಾತನಾಡಿ, ಸ್ವಾತಂತ್ರ್ಯ ಬಂದು 67ವರ್ಷ ಗತಿಸಿದರೂ ಇನ್ನೂ ಮೂಲ ಸೌಕರ್ಯಗಳ ಬೇಡಿಕೆ ಈಡೇರಿಕೆಗೆ ಕೂಲಿ ಕೆಲಸ ಬಿಟ್ಟು ಬೀದಿಗಿಳಿಯುವಂತಾಗಿರುವುದು ನೋವಿನ ಸಂಗತಿಯಾಗಿದೆ. ಹಿರೇಹಡಗಲಿ ಆಸ್ಪತ್ರೆ ಮತ್ತು ಎಎನ್‌ಎಂ ಕಟ್ಟಡ ಪೂರ್ಣಗೊಳಿಸಿ, ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ಅನುಕೂಲ ಕಲ್ಪಿಸುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಪಿ.ಸುಭಾಸ್, ಹಾಲಸ್ವಾಮಿ, ಎಸ್.ವೀರಭದ್ರಪ್ಪ, ಎಐಡಿವೈಒ ಮಲ್ಲಿಕಾರ್ಜುನ, ಕೋಟೆಪ್ಪ, ಹಳ್ಳಿಕೊಟ್ರೇಶ್, ಬಂದಳ್ಳಿ ವೀರಣ್ಣ ಇತರರು ಭಾಗವಹಿಸಿದ್ದರು.

ದೌರ್ಜನ್ಯ ಖಂಡಿಸಿ ಖಾಸಗಿ ವೈದ್ಯರ ಮುಷ್ಕರ
ಹೊಸಪೇಟೆ:
ಕಳೆದ ಕೆಲ ವರ್ಷಗಳಿಂದ ಖಾಸಗಿ ವೈದ್ಯರುಗಳ ಮೇಲೆ ನಡೆಯುತ್ತಿರುವ ಹಲ್ಲೆ ಹಾಗೂ ತಾವುರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ಅಖಿಲ ಭಾರತ ವೈದ್ಯಕೀಯ ಸಂಘದ ಹೊಸಪೇಟೆ ಘಟಕದ ಪದಾಧಿಕಾರಿಗಳು ದಿಢೀರ್ ಮುಷ್ಕರ ನಡೆಸಿದರು.

ಮಂಗಳವಾರ ಹೊಸಪೇಟೆ ತಹಶೀಲ್ದಾರ್‌ರ ಮುಖಾಂತರ ಸರ್ಕಾರದ ವಿವಿಧ ಇಲಾಖಾಧಿಕಾರಿಗಳಿಗೆ  ತಮ್ಮ ಸೇವೆಯನ್ನು ಸ್ಥಗಿತಗೊಳಿಸಿ ಸಲ್ಲಿಸಿದ ಮನವಿಯಲ್ಲಿ ಸರ್ಕಾರ ತಮ್ಮ ರಕ್ಷಣೆಗೆ ಮುಂದಾಗಿ, ಕೆಲ ಪಟ್ಟಭದ್ರ ಹಿತಾಶಕ್ತಿಗಳು ನಡೆಸುವ ದೌರ್ಜನ್ಯವನ್ನು ತಡೆಯುವಂತೆ ಮನವಿ ಮಾಡಿದರು.

ಸೋಮವಾರ  ರಾಘಮ್ಮ ಸ್ಮಾರಕ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ ಎಂದು ಆರೋಪಿಸಿದ ಮಗುವಿನ ಪಾಲಕರು ಹಾಗೂ ಸಂಬಂಧಿಕರು ಸೋಮವಾರ ದಿಢೀರ್ ಪ್ರತಿಭಟನೆ ನಡೆಸಿ ವೈದ್ಯರುಗಳ ಮೇಲೆ ಹಲ್ಲೆಗೆ ಮುಂದಾಗಿದ್ದನ್ನು ಖಂಡಿಸಿ  ವೈದ್ಯರು ಪ್ರತಿಭಟನೆ ಮಾಡಿದರು. ಇದರಿಂದ ಅನೇಕ ರೋಗಿಗಳು ಪರದಾಡುವಂತಾಗಿತ್ತು. ವೈದ್ಯಕೀಯ ಸಂಘದ  ಅಧ್ಯಕ್ಷ ಡಾ.ಗುರುರಾಜ ಆಚಾರ್ಯ ಸೇರಿದಂತೆ ಕಾರ್ಯದರ್ಶಿ ಡಾ.ಶ್ರೀನಿವಾಸ ದೇಶಪಾಂಡೆ ಆಡಳಿತ ಮಂಡಳಿಯ ಸದಸ್ಯರು ಸೇರಿದಂತೆ ಹಿರಿಯ ವೈದ್ಯರುಗಳು, ಔಷಧಿ ವಿತರಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.