ADVERTISEMENT

ಇಲ್ಲದ ಬಸ್ ಓಡಾಟ; ಜನರ ಪರದಾಟ

ಸಿದ್ದಯ್ಯ ಹಿರೇಮಠ
Published 22 ಮಾರ್ಚ್ 2011, 7:45 IST
Last Updated 22 ಮಾರ್ಚ್ 2011, 7:45 IST

ಬಳ್ಳಾರಿ: ದೊಡ್ಡ ದೊಡ್ಡ ತಗ್ಗುಗಳಿಂದ ಕಂಗೊಳಿಸುತ್ತ ಕೆಟ್ಟು ಹೋಗಿರುವ ರಸ್ತೆಗಳು, ಎದುರು ಬರುವ ವಾಹನಗಳನ್ನು ಕಿಂಚಿತ್ ಲೆಕ್ಕಿಸದೆ ಅವೇ ರಸ್ತೆಯಲ್ಲಿ ವೇಗದಿಂದ ಚಲಿಸುವ ಅದಿರು ತುಂಬಿದ ಲಾರಿಗಳು, ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುವ ಜನಸಮೂಹ. ಇದು ಅಪಾರ ಗಣಿ ಸಂಪತ್ತನ್ನು ಹೊಂದಿರುವ ಜಿಲ್ಲೆಯ ಸಂಡೂರು ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ನಿತ್ಯವೂ ಕಂಡು ಬರುವ ಚಿತ್ರಣ.

ಇದ್ದೂ ಇಲ್ಲದಂತಾಗಿರುವ ರಸ್ತೆಗಳಿಂದಾಗಿ ಹತ್ತಿಪ್ಪತ್ತು ಕಿಲೋಮೀಟರ್‌ಗಳ ಅಂತರದ ಸಂಚಾರವೂ ದುಸ್ತರವಾಗಿ ಪರಿಣಮಿಸಿದ್ದು, ಹತ್ತಾರು ಗ್ರಾಮಗಳ ಜನತೆ ಸರಕಾರಿ ಬಸ್ ಸೌಲಭ್ಯ ಇಲ್ಲದೇ ಪರಿತಪಿಸುತ್ತಿದೆ. ಸಂಡೂರಿನಿಂದ ಸುಶೀಲಾನಗರ ಮಾರ್ಗವಾಗಿ ಕೇವಲ 27 ಕಿಮೀ ದೂರದಲ್ಲಿರುವ ಹೊಸಪೇಟೆಗೆ ಕಳೆದ ಒಂದೂವರೆ ವರ್ಷದಿಂದ ಬಸ್ ಸಂಚಾರವನ್ನೇ ಸ್ಥಗಿತಗೊಳಿಸಿದ್ದರಿಂದ ಸುಶೀಲಾನಗರ, ಜಯಸಿಂಗ್‌ಪುರ, ರಾಮಗಡ, ಸಿದ್ದಾಪುರ, ವೆಂಕಟಗಿರಿ, ಕಲ್ಲಳ್ಳಿ, ರಾಜಾಪುರ ಮತ್ತಿತರ ಗ್ರಾಮಗಳ ಜನತೆ ಅಗತ್ಯ ಕೆಲಸಕ್ಕೆ ಸಂಡೂರಿಗೆ ಬರಬೇಕೆಂದರೆ ಅನಿವಾರ್ಯವಾಗಿ ಖಾಸಗಿ ವಾಹನಗಳನ್ನು ಅವಲಂಬಿಸುವಂತಾಗಿದೆ.

ಶಾಲೆ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೂ ಇದರಿಂದ ತೀವ್ರ ತೊಂದರೆ ಎದುರಾಗಿದ್ದು, ರಿಯಾಯಿತಿ ದರದ ಪಾಸ್ ಒದಗಿಸಿ ಸಾಕಷ್ಟು ಅನುಕೂಲ ಕಲ್ಪಿಸುವ ಬಸ್ ಸೌಲಭ್ಯ ಇಲ್ಲದ್ದರಿಂದ ದುಡ್ಡು ಕೊಟ್ಟು ಪಟ್ಟಣಕ್ಕೆ ತೆರಳಿ ಶಿಕ್ಷಣ ಪಡೆಯುವುದು ಅಸಾಧ್ಯವಾಗಿದೆ ಎಂಬುದು ಅವರ ಅಳಲು. ಇನ್ನು 27 ಕಿಮೀ ಅಂತರದ ಈ ರಸ್ತೆ ಅದಿರು ಲಾರಿಗಳ ಸಂಚಾರದಿಂದ ಸಂಪೂರ್ಣ ಹದಗೆಟ್ಟಿದ್ದು, ಅನೇಕ ವರ್ಷಗಳಾದರೂ ದುರಸ್ತಿ ಮಾಡುವ ಗೋಜಿಗೆ ಹೋಗಿಲ್ಲ. ಕೆಲವು ತಿಂಗಳುಗಳ ಹಿಂದೆಯೇ ಈ ರಸ್ತೆ ದುರಸ್ತಿಗೆ ರೂ 97 ಕೋಟಿ ಅನುದಾನದಡಿ ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಜನಪ್ರತಿನಿಧಿಗಳು ತಿಳಿಸಿದ್ದರೂ ಈವರೆಗೆ ಕಾರ್ಯರೂಪಕ್ಕೆ ಬಂದಿಲ್ಲ ಎನ್ನುತ್ತಾರೆ ಸುಶೀಲಾನಗರದ ಜನತೆ.

ರಸ್ತೆಗೆ ನೀರು: ಮಿತಿಮೀರಿದ ವೇಗದಿಂದ ಸಾಗುವ ಅದಿರು ಸಾಗಣೆ ಲಾರಿಗಳಿಂದಾಗಿ ಊರಲ್ಲೆಲ್ಲ ಧೂಳು ಆವರಿಸಿಕೊಂಡು, ಗ್ರಾಮಸ್ಥರಿಗೆ ಆರೋಗ್ಯ ಸಮಸ್ಯೆ ಕಂಡುಬರುತ್ತಿದೆ. ಕೆಲವು ಗಣಿ ಮಾಲೀಕರು ಗ್ರಾಮಗಳಿದ್ದಲ್ಲಿ ರಸ್ತೆಗೆ ನೀರು ಸಿಂಪಡಿಸಲು ಟ್ಯಾಂಕರ್‌ಗಳನ್ನು ನೇಮಿಸಿದ್ದು, ನಿತ್ಯವೂ ಮೂರು ಬಾರಿ ರಸ್ತೆಗೆ ನೀರು ಹೊಡೆಯಲಾಗುತ್ತಿದೆ.

ಬಿಸಿಲು ಬಿದ್ದ ಕೂಡಲೇ ತೇವಾಂಶ ಕಡಿಮೆಯಾಗಿ ಮತ್ತೆ ಧೂಳು ಮುಗಿಲು ಮುಟ್ಟುತ್ತದೆ. ಅಷ್ಟೆಲ್ಲ ಖರ್ಚು ಮಾಡಿ ನೀರು ಹೊಡೆಯುವ ಬದಲು ಸುಸಜ್ಜಿತ ರಸ್ತೆಗಳನ್ನಾದರೂ ನಿರ್ಮಿಸುವತ್ತ ಗಣಿ ಮಾಲೀಕರು ಆಲೋಚಿಸಬೇಕು ಎಂದೂ ಅವರು ಕೋರುತ್ತಾರೆ. ಆದರೆ, ರಸ್ತೆ ದುರಸ್ತಿ ಕಾಮಗಾರಿ ಆರಂಭಿಸಿದರೆ, ಅದಿರು ಲಾರಿಗಳ ಸಾಗಣೆಯನ್ನು ರದ್ದುಗೊಳಿಸಬೇಕಾಗುತ್ತದೆ. ಒಂದಷ್ಟು ದಿನಗಳವರೆಗೆ ಸಾಗಣೆ ಸ್ಥಗಿತಗೊಳಿಸಿದರೆ ಭಾರಿ ನಷ್ಟ ಎಂಬ ಕಾರಣದಿಂದ ರಸ್ತೆ ದುರಸ್ತಿಯನ್ನೇ ಕೈಗೆತ್ತಿಕೊಳ್ಳದೆ, ಜನತೆಗೆ ಅನ್ಯಾಯ ಮಾಡಲಾಗುತ್ತಿದೆ ಎಂದೂ ಅವರು ಆರೋಪಿಸುತ್ತಾರೆ.

ತೀವ್ರ ತೊಂದರೆ: ರಸ್ತೆಯೂ ಇಲ್ಲದೆ ಸಾರಿಗೆ ವಾಹನವೂ ಇಲ್ಲದ್ದರಿಂದ ಗ್ರಾಮೀಣ ಪ್ರದೇಶದ ಜನತೆ ಅತ್ತ ಹೊಸಪೇಟೆಗೂ, ಇತ್ತ ಸಂಡೂರಿಗೂ ಆಸ್ಪತ್ರೆಗಳಿಗೆ ತೆರಳುವುದು ಭಾರಿ ಕಷ್ಟಕರ ಎಂಬಂತಾಗಿದೆ. ತುಂಬು ಗರ್ಭಿಣಿಯರು ಹೆರಿಗೆಗೆ, ವೃದ್ಧರು, ಮಕ್ಕಳು ಚಿಕಿತ್ಸೆಗೆ ಆಸ್ಪತ್ರೆಗೆ ತೆರಳಬೇಕೆಂದರೆ ತೀವ್ರ ಸಂಕಷ್ಟ ಎದುರಿಸುವಂತಾಗಿದೆ.

ಅದಿರು ಲಾರಿಗಳ ದಟ್ಟಣೆಯಿಂದಾಗಿ ಹಾಗೂ ರಸ್ತೆ ಸಮರ್ಪಕವಾಗಿ ಇಲ್ಲದ್ದರಿಂದ ಸಾರಿಗೆ ಸಂಸ್ಥೆಯ ಎಲ್ಲ ಬಸ್‌ಗಳ ಸಂಚಾರವನ್ನು ರದ್ದುಗೊಳಿಸಿದೆ. ಕೇವಲ ಬಸ್‌ಗಳಲ್ಲಿ 27 ಕಿಮೀ ದೂರ ಕ್ರಮಿಸಲು 22 ರೂಪಾಯಿ ದರ ನಿಗದಿ ಮಾಡಲಾಗುತ್ತದೆ. ಆದರೆ, ಖಾಸಗಿ ವಾಹನಗಳಲ್ಲಿ ತೆರಳಲು ರೂ 40 ನೀಡಬೇಕು. ಇದರಿಂದ ಬಡಜನತೆಗೆ ಮತ್ತಷ್ಟು ಕಷ್ಟವಾಗಿದೆ. ಲೋಕೋಪಯೋಗಿ ಇಲಾಖೆಯೂ, ಜಿಲ್ಲಾ ಉಸ್ತುವಾರಿ ಸಚಿವರೂ ಕೂಡಲೇ ಈ ಬಗ್ಗೆ ಗಮನಹರಿಸಿ, ನಡುಗಡ್ಡೆಯಂತಾಗಿರುವ ಈ ಗ್ರಾಮಗಳ ಜನರ ಸಂಕಷ್ಟ ದೂರ ಮಾಡಬೇಕಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.